Tuesday, 21st May 2019

Recent News

ಅಯೋಧ್ಯೆ ಪ್ರಕರಣದ ವಿಚಾರಣೆಯಿಂದ ಹಿಂದಕ್ಕೆ ಸರಿದ ಜಡ್ಜ್ – ನ್ಯಾ.ಲಲಿತ್ ಹಿಂದಕ್ಕೆ ಸರಿದಿದ್ದು ಯಾಕೆ?

ನವದೆಹಲಿ: ಅಯೋಧ್ಯೆ ಭೂಪ್ರದೇಶ ಹಂಚಿಕೆ ಪ್ರಕರಣದ ವಿಚಾರಣೆಯಿಂದ ಸುಪ್ರೀಂ ಕೋರ್ಟ್ ನ್ಯಾ. ಲಲಿತ್ ಉದಯ್ ಹಿಂದಕ್ಕೆ ಸರಿದಿದ್ದಾರೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ಅಯೋಧ್ಯೆ ಪ್ರಕರಣದ ವಿಚಾರಣೆಗೆ ನ್ಯಾಯಮೂರ್ತಿಗಳಾದ ಎಸ್‍ಎ ಬೊಬ್ಡೆ, ಎನ್‍ವಿ ರಮಣ್, ಡಿವೈ ಚಂದ್ರಚೂಡ್, ಲಲಿತ್ ಉದಯ್ ಅವರಿದ್ದ ಸಂವಿಧಾನ ಪೀಠವನ್ನು ರಚಿಸಿದ್ದರು.

 

ನ್ಯಾ.ರಂಜನ್ ಗೊಗೋಯ್ ಅವರಿದ್ದ ಸಂವಿಧಾನ ಪೀಠ ಇಂದಿನಿಂದ ವಿಚಾರಣೆ ಆರಂಭಿಸುವುದಾಗಿ ಹೇಳಿತ್ತು. ಇಂದು ವಿಚಾರಣೆ ಆರಂಭಗೊಂಡಾಗ ನ್ಯಾ.ಲಲಿತ್ ಉದಯ್ ವೈಯಕ್ತಿಕ ಕಾರಣದಿಂದ ನಾನು ಪ್ರಕರಣದ ವಿಚಾರಣೆಯಿಂದ ಹಿಂದಕ್ಕೆ ಸರಿಯುತ್ತಿರುವುದಾಗಿ ತಿಳಿಸಿದರು.

ನ್ಯಾ.ಲಲಿತ್ ಉದಯ್ ಹಿಂದಕ್ಕೆ ಸರಿದ ಕಾರಣ ಮುಖ್ಯ ನ್ಯಾ.ರಂಜನ್ ಗೊಗೊಯ್ ಅವರು ಸಂವಿಧಾನ ಪೀಠಕ್ಕೆ ಇನ್ನೊಬ್ಬರು ನ್ಯಾಯಾಧೀಶರನ್ನು ನೇಮಿಸಬೇಕಿದ್ದು, ಜನವರಿ 29ಕ್ಕೆ ವಿಚಾರಣೆ ಮುಂದೂಡಿಕೆಯಾಗಿದೆ.

ಹಿಂದಕ್ಕೆ ಸರಿದಿದ್ದು ಯಾಕೆ?
ಇಂದಿನ ವಿಚಾರಣೆ ವೇಳೆ ವಕೀಲ ರಜೀವ್ ಧವನ್ ಅವರು ನ್ಯಾ.ಲಲಿತ್ ಉದಯ್ ಅವರು ಕಲ್ಯಾಣ್ ಸಿಂಗ್ ಪರವಾಗಿ ಈ ಪ್ರಕರಣದಲ್ಲಿ ವಾದವನ್ನು ಮಂಡಿಸಿದ್ದ ವಿಚಾರವನ್ನು ಸುಪ್ರೀಂ ಕೋರ್ಟ್ ಗಮನಕ್ಕೆ ತಂದರು. ಈ ಹಿನ್ನೆಲೆಯಲ್ಲಿ ಲಲಿತ್ ಉದಯ್ ಅವರು ಪ್ರಕರಣದ ವಿಚಾರಣೆಯಿಂದ ಹಿಂದಕ್ಕೆ ಸರಿದರು.

ಲಲಿತ್ ಉದಯ್ ಯಾರು?
1983ರಲ್ಲಿ ಬಾರ್ ಕೌನ್ಸಿಲ್ ಗೆ ಸೇರಿದ ಲಲಿತ್ ಉದಯ್ ಅವರು 1986ರಿಂದ ಸುಪ್ರೀಂ ಕೋರ್ಟ್ ನಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿದ್ದರು. ಆಗಸ್ಟ್ 13, 2014ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನೇಮಕವಾಗಿದ್ದಾರೆ. ನೇರವಾಗಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡ 6ನೇ ಹಿರಿಯ ವಕೀಲ ಮತ್ತು ಕೋಲಿಜಿಯಂ ವ್ಯವಸ್ಥೆಯ ಮೂಲಕ ನ್ಯಾಯಾಧೀಶರಾಗಿ ನೇಮಕವಾದ ಕೊನೆಯ ವಕೀಲ ಇವರಾಗಿದ್ದಾರೆ.

 

ಪ್ರಸ್ತುತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿರುವ ಅಮಿತ್ ಶಾ ಮೇಲಿದ್ದ ಸೊಹ್ರಾಬುದ್ದೀನ್ ಎನ್‍ಕೌಂಟರ್ ಪ್ರಕರಣ, ಸಲ್ಮಾನ್ ಖಾನ್ ಮೇಲಿದ್ದ ಕೃಷ್ಣ ಮೃಗ ಬೇಟೆ ಪ್ರಕರಣ, ಹಾಲಿ ಪಂಜಾಬ್ ಮುಖ್ಯಮಂತ್ರಿ ಆಗಿರುವ ಅಮರಿಂದರ್ ಸಿಂಗ್ ಅವರ ವಿರುದ್ಧದ ಭ್ರಷ್ಟಾಚಾರ ಪ್ರಕರಣದ ವಕೀಲರಾಗಿ ಕೋರ್ಟ್ ವಿಚಾರಣೆಗೆ ಲಲಿತ್ ಉದಯ್ ಹಾಜರಾಗಿದ್ದರು.

2010ರ ಅಯೋಧ್ಯೆ ಭೂ ವಿವಾದಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ನ್ಯಾಯಾಲಯ ನೀಡಿದ್ದ ತೀರ್ಪನ್ನು ಪ್ರಶ್ನಿಸಿ, ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿಯನ್ನು ಸಲ್ಲಿಸಲಾಗಿತ್ತು. ಅಕ್ಟೋಬರ್ 29ರಂದು ಮುಖ್ಯ ನ್ಯಾಯಮೂರ್ತಿಗಳಾದ ರಂಜನ್ ಗೊಗೊಯ್ ನ್ಯಾ. ಎಸ್.ಕೆ.ಕೌಲ್ ಹಾಗೂ ಕೆ.ಎಂ ಜೋಸೆಫ್ ನೇತೃತ್ವದ ತ್ರಿಸದಸ್ಯ ಪೀಠ ಅರ್ಜಿಯ ವಿಚಾರಣೆಯನ್ನು ಜನವರಿ, ಫೆಬ್ರವರಿ ಇಲ್ಲವೇ ಮೇ ತಿಂಗಳಲ್ಲಿ ವಿಚಾರಣೆ ನಡೆಸುವುದಾಗಿ ಹೇಳಿ ಮುಂದೂಡಿತ್ತು. ನಮಗೆ ನಮ್ಮದೇ ಆದ ಆದ್ಯತೆಗಳಿವೆ. ಹೀಗಾಗಿ ಅಯೋಧ್ಯೆ ಕುರಿತು ಪ್ರತಿನಿತ್ಯ ವಿಚಾರಣೆ ನಡೆಸಬೇಕೇ? ಬೇಡವೇ ಎನ್ನುವ ಬಗ್ಗೆ ತೀರ್ಮಾನವನ್ನು ಅಂದೇ ಕೈಗೊಳ್ಳುತ್ತೇವೆಂದು ಪೀಠ ತಿಳಿಸಿತ್ತು. ನಂತರದ ಬೆಳವಣಿಗೆಯಲ್ಲಿ ನ್ಯಾ. ರಂಜನ್ ಗೊಗೊಯ್ ಅವರು ಸಂವಿಧಾನ ಪೀಠ ರಚಿಸಿ ಜನವರಿ 10 ರಿಂದ ತ್ವರಿತ ವಿಚಾರಣೆ ನಡೆಸುವುದಾಗಿ ತಿಳಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

 

Leave a Reply

Your email address will not be published. Required fields are marked *