Connect with us

Cinema

ಉತ್ತರಕರ್ನಾಟಕದ ಸಂತ್ರಸ್ತರ ನೆರವಿಗೆ ನಿಂತ ರಾಂಧವ ತಂಡ!

Published

on

ಬೆಂಗಳೂರು: ರಾಜ್ಯಾದ್ಯಂತ ಮಳೆ ಕೊಂಚ ಕಡಿಮೆಯಾಗಿದ್ದರೂ ಪ್ರವಾಹಪೀಡಿತ ಪ್ರದೇಶಗಳ ಸ್ಥಿತಿಗತಿ ಇನ್ನೂ ಸುಧಾರಿಸಿಕೊಂಡಿಲ್ಲ. ಅಲ್ಲಿಗೆ ಎಲ್ಲ ದಿಕ್ಕುಗಳಿಂದ ನೆರವಿನ ಹಸ್ತ ಚಾಚಿಕೊಂಡಿದ್ದರೂ ಕೂಡಾ ಅಲ್ಲಿನ ಅನೇಕ ಪ್ರದೇಶಗಳತ್ತ ಈ ಕ್ಷಣಕ್ಕೂ ದೃಷ್ಟಿ ಬಿದ್ದಿರೋದು ಕಡಿಮೆ. ಇಂಥಾ ಪ್ರದೇಶಗಳಲ್ಲಿನ ಜನರನ್ನು ತಲುಪುವ ಉದ್ದೇಶದೊಂದಿಗೇ ಸರಿಯಾದೊಂದು ಪ್ಲ್ಯಾನು ಮಾಡಿಕೊಂಡು ರಾಂಧವ ಚಿತ್ರತಂಡ ಸಹಾಯಹಸ್ತ ಚಾಚಿದೆ. ಇಡೀ ರಾಂಧವ ಚಿತ್ರತಂಡ ಈ ಕಾರ್ಯದಲ್ಲಿ ಕೈ ಜೋಡಿಸಿದೆ. ಇದೀಗ ಭುವನ್ ನೇತೃತ್ವಲ್ಲಿ ಈ ತಂಡ ಇದೀಗ ಚಿಕ್ಕೋಡಿಯತ್ತ ಹೊರಟಿದೆ.

ಎಲ್ಲರ ಗಮನವೂ ಪ್ರವಾಹದಿಂದ ತತ್ತರಿಸಿರೋ ಉತ್ತರ ಕರ್ನಾಟಕದ ಕೆಲ ಭಾಗಗಳತ್ತು ಕೀಲಿಸಿಕೊಂಡಿದೆ. ಆದರೆ ಅದೆಷ್ಟು ಜನ ಅದೇನೇ ಪ್ರಯತ್ನ ಪಟ್ಟರೂ ಪ್ರವಾಹದಿಂದ ಕಂಗಾಲಾಗಿರುವ ಎಲ್ಲ ಪ್ರದೇಶಗಳತ್ತ ತಲುಪಲಾಗುತ್ತಿಲ್ಲ. ಇದೀಗ ಕರ್ನಾಟಕದ ವಿವಿಧ ದಿಕ್ಕುಗಳಿಂದಲೂ ಉತ್ತರಕರ್ನಾಟಕದತ್ತ ನೆರವು ಹರಿದು ಬರುತ್ತಿದೆ. ಆದರೆ ಅದೆಲ್ಲವೂ ಒಂದೇ ಪ್ರದೇಶಗಳತ್ತ ಜಮೆಯಾದರೆ ಪ್ರಯೋಜನವಾಗೋದಿಲ್ಲ. ಹೀಗೆ ಸಹಾಯದ ಅವಶ್ಯಕತೆ ತೀವ್ರವಾಗಿರೋ ಒಂದಷ್ಟು ಪ್ರದೇಶಗಳನ್ನು ರಾಂಧವ ತಂಡ ಗುರುತು ಮಾಡಿಕೊಂಡಿದೆ. ಅಲ್ಲಿನ ಜನರಿಗೆ ಅಗತ್ಯವಿರೋ ಕೆಲ ವಸ್ತುಗಳೊಂದಿಗೆ ಗೋಕಾಕ್‍ನತ್ತ ಹೊರಟಿದೆ.

ಹಾಗೆ ಗೋಕಾಕ್‍ಗೆ ತೆರಳಿ ಅಲ್ಲಿಂದ ಚಿಕ್ಕೋಡಿ, ನಿಪ್ಪಾಣಿ ಮುಂತಾದ ಪ್ರದೇಶಗಳತ್ತ ಹೋಗಿ ಅಲ್ಲಿನ ಸಂತ್ರಸ್ತರೊಂದಿಗೆ ಬೆರೆತು ಮಾಹಿತಿ ಕಲೆ ಹಾಕಲಿದೆ. ಆ ಜನರಿಗೆ ಯಾವ ಸಾಮಾಗ್ರಿಗಳ ಅಗತ್ಯವಿದೆ ಅನ್ನೋದನ್ನು ಮನಗಂಡು ಬೆಂಗಳೂರಿನಲ್ಲಿರೋ ತಮ್ಮ ತಂಡಕ್ಕೆ ಮಾಹಿತಿ ರವಾನಿಸಲಿದೆ. ಅಲ್ಲಿಂದ ಬೇಗನೆ ಅಂಥಾ ವಸ್ತುಗಳನ್ನು ತರಿಸಿಕೊಂಡು ಪ್ರವಾಹ ಪೀಡಿತರಿಗೆ ನೆರವಾಗೋ ಉದ್ದೇಶದೊಂದಿಗೆ ರಾಂಧವ ತಂಡ ಅಖಾಡಕ್ಕಿಳಿದಿದೆ.

ಇದೇ ತಿಂಗಳ 23ರಂದು ರಾಂಧವ ಚಿತ್ರ ಬಿಡುಗಡೆಯಾಗಲಿದೆ. ಇಂಥಾ ಹೊತ್ತಿನಲ್ಲಿ ಇಡೀ ಚಿತ್ರತಂಡವೇ ಒತ್ತಡದಲ್ಲಿರುತ್ತದೆ. ಆದರೆ ಆ ಎಲ್ಲ ಒತ್ತಡಗಳನ್ನೂ ಬದಿಗಿರಿಸಿ ಪ್ರವಾಹದಿಂದ ಬದುಕು ಕಳೆದುಕೊಂಡವರ ನೆರವಿಗೆ ಧಾವಿಸಿರೋ ರಾಂಧವ ತಂಡದ ಕ್ರಮ ಮೆಚ್ಚಿಕೊಳ್ಳುವಂಥಾದ್ದು. ಅದೇನೇ ಕಷ್ಟವಿದ್ದರೂ ಸಿನಿಮಾಗಳನ್ನು ನೋಡಿ ಗೆಲ್ಲಿಸೋ ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕಾದ್ದು ಕರ್ತವ್ಯ ಎಂಬುದನ್ನು ಈ ಮೂಲಕ ರಾಂಧವ ತಂಡ ಕಾರ್ಯರೂಪದಲ್ಲಿಯೇ ತೋರಿಸಿಕೊಟ್ಟು ಮೆಚ್ಚುಗೆಗೆ ಪಾತ್ರವಾಗಿದೆ.