Friday, 13th December 2019

Recent News

5 ಕುರಾನ್ ಪ್ರತಿ ಹಂಚು – ವಿದ್ಯಾರ್ಥಿನಿಗೆ ಕೋರ್ಟ್ ಶಿಕ್ಷೆ

ರಾಂಚಿ: 19 ವರ್ಷದ ವಿದ್ಯಾರ್ಥಿನಿಯೊಬ್ಬಳು ಸಾಮಾಜಿಕ ಜಾಲತಾಣಗಳಲ್ಲಿ ಧಾರ್ಮಿಕತೆ ಕುರಿತು ಪೋಸ್ಟ್ ಹಾಕಿದ್ದಕ್ಕೆ 5 ಕುರಾನ್ ಪ್ರತಿಗಳನ್ನು ಹಂಚುವ ಶಿಕ್ಷೆಯನ್ನು ರಾಂಚಿ ಕೋರ್ಟ್ ವಿಧಿಸಿದೆ.

ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಮನೀಶ್ ಕುಮಾರ್ ಅವರು ವಿದ್ಯಾರ್ಥಿನಿ ರಿಚಾ ಭಾರ್ತಿ ಮುಸ್ಲಿಂ ಧಾರ್ಮಿಕ ಗ್ರಂಥವಾದ ಕುರಾನಿನ 5 ಪ್ರತಿಗಳನ್ನು ಹಂಚುವಂತೆ ಆದೇಶಿಸಿದ್ದಾರೆ. ಒಂದು ಪ್ರತಿಯನ್ನು ಅಂಜುಮನ್ ಇಸ್ಲಾಮಿಯಾ ಸಮಿತಿಗೆ ಹಾಗೂ ಉಳಿದ ನಾಲ್ಕು ಪ್ರತಿಗಳನ್ನು ವಿವಿಧ ಶಾಲಾ, ಕಾಲೇಜುಗಳ ಗ್ರಂಥಾಲಯಗಳಿಗೆ ನೀಡುವಂತೆ ಸೂಚಿಸಿದ್ದಾರೆ.

ಅಲ್ಪಸಂಖ್ಯಾತ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವಂತಹ ಪೋಸ್ಟ್ ಹಂಚಿಕೊಂಡಿದ್ದಾಳೆ ಎಂದು ಆರೋಪಿಸಿ ಸ್ಥಳೀಯ ಕಾಲೇಜಿನಲ್ಲಿ ಪ್ರಥಮ ವರ್ಷದ ಓದುತ್ತಿದ್ದ ರಿಚಾ ಭಾರ್ತಿಯನ್ನು ಶನಿವಾರ ರಾತ್ರಿ ಬಂಧಿಸಲಾಗಿತ್ತು.

ವಿದ್ಯಾರ್ಥಿನಿಯನ್ನು ಬಂಧಿಸಿದ್ದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದು, ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಅಲ್ಲದೆ, ಹಲವು ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿ ವಿದ್ಯಾರ್ಥಿನಿಯನ್ನು ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿವೆ. ಹಿಂದೂ ಸಂಘಟನೆಗಳು ಹೋರಾಟಕ್ಕಿಳಿದ ಬೆನ್ನಲ್ಲೇ ರಾಂಚಿ ಗ್ರಾಮೀಣ ವಿಭಾಗದ ಎಸ್‍ಪಿ ಅಶುತೋಷ್ ಶೇಖರ್ ಅವರ ನೇತೃತ್ವದ ತಂಡ ಪರಿಸ್ಥಿತಿಯನ್ನು ನಿಯಂತ್ರಿಸಿದೆ.

ಎರಡೂ ಸಮುದಾಯಗಳು ಪರಸ್ಪರ ಒಪ್ಪಿಗೆ ನೀಡಿದ ನಂತರ ರಿಚಾ ಭಾರ್ತಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದು, ನ್ಯಾಯಾಲಯದ ಆದೇಶವನ್ನು 15 ದಿನಗಳಲ್ಲಿ ಪಾಲಿಸಲಾಗುವುದು ಎಂದು ರೀಚಾ ಭಾರ್ತಿ ಪರ ವಕೀಲ ರಾಮ್ ಪ್ರವೀಶ್ ಭರವಸೆ ನೀಡಿದ್ದಾರೆ.

ರಾಂಚಿ ನ್ಯಾಯಾಲಯ ನೀಡಿರುವ ವಿಚಿತ್ರ ಶಿಕ್ಷೆಯ ಕುರಿತು ಹಿಂದೂ ಸಂಘಟನೆಗಳು ಹಾಗೂ ಸ್ಥಳೀಯ ಬಿಜೆಪಿ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *