Sunday, 21st July 2019

‘ರಣಾಂಗಣ’ದಲ್ಲಿ ಸರ್ಜಿಕಲ್ ಸ್ಟ್ರೈಕ್!

ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ಹಿಂದಿಯಲ್ಲಿ ಉರಿ ಅನ್ನೋ ಸಿನಿಮಾ ತೆರೆಗೆ ಬಂದಿತ್ತು. ಈ ಚಿತ್ರದಲ್ಲಿ ಭಾರತೀಯ ಯೋಧರು ಉಗ್ರರ ವಿರುದ್ದ ಹೇಗೆಲ್ಲಾ ಸೆಣಸಾಡಿ ಜಯಿಸಿದರು ಎಂಬುದನ್ನು ಅದ್ಭುತವಾಗಿ ಕಟ್ಟಿಕೊಡಲಾಗಿತ್ತು. ಈ ಕಾರಣಕ್ಕೆ ಈ ಸಿನಿಮಾ ಜಗತ್ತಿನಾದ್ಯಂತ ಸದ್ದು ಮಾಡಿತ್ತು. ಈಗ ಅಂಥದ್ದೇ ಸಿನಿಮಾವೊಂದು ಸ್ಯಾಂಡಲ್‍ವುಡ್ಡಿನಲ್ಲಿ ನಿರ್ಮಾಣವಾಗುತ್ತಿದೆ.

ಮೊನ್ನೆ ಮೊನ್ನೆ ಪುಲ್ವಾಮದಲ್ಲಿ ನಡೆದ ಹತ್ಯೆಗೆ ಪ್ರತೀಕಾರವಾಗಿ ಪಾಕಿಸ್ತಾನದಲ್ಲಿರುವ ಉಗ್ರರ ಅಡಗುತಾಣಗಳನ್ನು ನಮ್ಮ ಸೈನಿಕರು ಧ್ವಂಸಗೊಳಿಸಿದ್ದು ಸೇರಿದಂತೆ ಹಲವಾರು ಪ್ರಮುಖ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಈ ಸಿನಿಮಾಗೆ ಕಥೆ ಹೆಣೆಯಲಾಗಿದೆ. ಅಂದಹಾಗೆ ಈ ಸಿನಿಮಾದ ಹೆಸರು `ರಣಾಂಗಣ’.

ಈಗಾಗಲೇ ಮುಹೂರ್ತ ಆಚರಿಸಿಕೊಂಡಿರುವ ಈ ಚಿತ್ರದಲ್ಲಿ ನಮ್ಮ ಭಾರತೀಯ ಯೋಧರ ಹೋರಾಟದ ನೈಜ ಘಟನೆಗಳ ಕುರಿತಾದ ಕಥೆಯನ್ನು ಹೇಳಲಾಗುತ್ತಿದೆ. ಹೊಸ ಬಗೆಯು ಕಥಾನಕ ಹೊಂದಿರುವ ಈ ಚಿತ್ರ ಎರಡು ಛಾಪ್ಟರ್‍ಗಳಲ್ಲಿ ಮೂಡಿ ಬರಲಿದ್ದು, ಮೊದಲನೆಯ ಭಾಗದಲ್ಲಿ ನಿಜ ಜೀವನದ ಹಲವಾರು ಅಂಶಗಳನ್ನು ತೆಗೆದುಕೊಳ್ಳಲಾಗಿದೆ. ಭಾರತೀಯ ಚಿತ್ರರಂಗದಲ್ಲಿ ಸಂಪೂರ್ಣವಾಗಿ ಸೈನಿಕರ ಕುರಿತಂತೆ ನಿರ್ಮಾಣ ಮಾಡುತ್ತಿರುವ ವಿಶೇಷ ಚಲನಚಿತ್ರ ಇದಾಗಿದೆ.

ಮಂಗಳೂರು ಬಂದರು, ರಾಮೇಶ್ವರ, ಹಿಮಾಚಲ ಪ್ರದೇಶ ಹಾಗೂ ಯುರೋಪ್ ನಲ್ಲಿರುವ ಸರ್ಬಿಯಾ ಸೇರಿದಂತೆ ಹಲವಾರು ವಿಭಿನ್ನ ಲೊಕೇಶನ್ ಗಳಲ್ಲಿ ರಣಾಂಗಣ ಚಿತ್ರದ ಚಿತ್ರೀಕರಣವನ್ನು ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಇದರ ಜೊತೆಗೆ ಚಿತ್ರದ ಕಥೆಯಲ್ಲಿ ಬರುವ ಯುದ್ಧದ ಸನ್ನಿವೇಶಗಳಿಗೆ ತಕ್ಕಂತೆ ಸೆಟ್ ಹಾಕಲು ಕಲಾ ನಿರ್ದೇಶಕ ಮನು ಜಗದ್ ಅವರು ಈಗಾಗಲೇ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಈ ಚಿತ್ರದಲ್ಲಿ ಪ್ರಮುಖವಾಗಿ ಭಾರತದ ಗಡಿ ಭಾಗದಲ್ಲಿ ನಡೆದ ಮೂರು ಪ್ರಮುಖ ಘಟನೆಗಳನ್ನು ತೆಗೆದುಕೊಂಡು ಕಥೆ ಹೆಣೆಯಲಾಗಿದೆ. ಆದರೆ ಆ ಬಗ್ಗೆ ಯಾವುದೇ ವಿವರವನ್ನು ಚಿತ್ರತಂಡ ಬಿಟ್ಟುಕೊಡಲಿಲ್ಲ. ಟಿ.ಎಸ್. ನಾಗಾಭರಣ, ವಾಸು ಅವರಂಥ ಹಿರಿಯ ನಿರ್ದೇಶಕರ ಜೊತೆ ಕೆಲಸ ಮಾಡಿ ಅನುಭವ ಪಡೆದಿರುವ ರೋಹಿತ್ ರಾವ್ ಇದೇ ಮೊದಲ ಬಾರಿಗೆ ಈ ಚಿತ್ರದ ಕತೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇವರು ಕನ್ನಡದಲ್ಲಿ ಈಗಾಗಲೇ ಹೆಸರು ಮಾಡಿರುವ ನಿರ್ದೇಶಕ ಮಹೇಶ್ ರಾವ್ ಅವರ ಸಹೋದರನಂತೆ.

ಈ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ರೋಹಿತ್ ರಾವ್, ಗಡಿಯಲ್ಲಿ ನಮ್ಮ ದೇಶವನ್ನು ಕಾಯುತ್ತಿರುವ ಯೋಧ, ನಮಗೆ ಅನ್ನ ನೀಡಲು ಹೊಲದಲ್ಲಿ ಸದಾ ದುಡಿಯುವ ರೈತ, ಈ ಇಬ್ಬರೂ ಕಷ್ಟಪಡುತ್ತಿರುವುದರಿಂದಲೇ ನಾವುಗಳೆಲ್ಲಾ ನೆಮ್ಮದಿಯಿಂದ ಜೀವನ ನಡೆಸುತ್ತಿರುವುದು. ಇದನ್ನೇ ನಮ್ಮ ಚಿತ್ರದಲ್ಲಿ ಹೇಳಿದ್ದೇವೆ. ಈ ಚಿತ್ರವನ್ನು ನೋಡಿದ ಯಾರಿಗೇ ಆಗಲಿ ತಾನು ಕೂಡ ಸೈನ್ಯಕ್ಕೆ ಸೇರಬೇಕೆಂಬ ಉತ್ಸಾಹ ಖಂಡಿತ ಅವರಲ್ಲಿ ಮೂಡುತ್ತದೆ. ಜನವರಿ 15ರಂದು ಬರುವ ಸೈನಿಕರ ದಿನಾಚರಣೆಯಂದೇ ನಮ್ಮ ಚಿತ್ರವನ್ನು ಬಿಡುಗಡೆ ಮಾಡಲು ಯೋಚಿಸಿದ್ದು, ಆ ವೇಳೆಗೆ ಚಿತ್ರವನ್ನು ಕಂಪ್ಲೀಟ್ ಮಾಡಲು ಪ್ರಯತ್ನ ಮಾಡುತ್ತೇವೆ. ಇದು ದೇಶಭಕ್ತಿಯನ್ನು ಸಾರುವ ಕಥೆ ಹೊಂದಿರುವ ಚಿತ್ರವಾಗಿರುವ ಕಾರಣ ಕನ್ನಡ ಸೇರಿದಂತೆ ಹಿಂದಿ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಕೂಡ ಚಿತ್ರವನ್ನು ನಿರ್ಮಿಸಲಾಗುತ್ತಿದೆ. ನಮ್ಮ ಭಾರತದಲ್ಲಿ ಒಟ್ಟು ಏಳು ಗಡಿಭಾಗಗಳಿವೆ, ಅದೇ ರೀತಿ ಈ ಚಿತ್ರದಲ್ಲಿ ಏಳು ಜನ ಖಳ ನಾಯಕರುಗಳು ನಟಿಸಲಿದ್ದಾರೆ. ಈ ಪೈಕಿ ಮೊದಲ ಹಂತದಲ್ಲಿ ರಘು, ಯೋಗೀಶ್ ಆಯ್ಕೆಯಾಗಿದ್ದಾರೆ, ಉಳಿದವರ ಹೆಸರನ್ನು ಸದ್ಯದಲ್ಲೇ ಅನೌನ್ಸ್ ಮಾಡುತ್ತೇವೆ ಎಂದರು.

ಕಿರುತೆರೆಯ ಫೇಮಸ್ ಧಾರಾವಾಹಿ ರಾಧಾ ರಮಣ ಖ್ಯಾತಿಯ ನಟ ಸ್ಕಂದ ಅಶೋಕ್ ಈ ಚಿತ್ರದಲ್ಲಿ ನಾಯಕನಾಗಿ ಹಾಗೂ ದೇಶ ಕಾಯುವ ಸೈನಿಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ನಾಯಕಿ ಶಾನ್ವಿ ಶ್ರೀವಾತ್ಸವ್ ಆರಂಭದಲ್ಲಿ ಒಬ್ಬ ಪತ್ರಕರ್ತೆಯಾಗಿದ್ದು, ನಂತರ ಸೇನೆಗೆ ಸೇರುವ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೀವನದಲ್ಲಿ ಒಮ್ಮೆಯಾದರೂ ಸೈನ್ಯಕ್ಕೆ ಸಂಬಂಧಿಸಿದ ಕಥೆ ಇರುವ ಸಿನಿಮಾದಲ್ಲಿ ನಟಿಸಬೇಕು ಎನ್ನುವುದು ಇವರ ಆಸೆಯಾಗಿತ್ತಂತೆ. ಅದು ಈ ಮೂಲಕ ಸಾಕಾರಗೊಂಡಿದೆ.

Leave a Reply

Your email address will not be published. Required fields are marked *