Karnataka

ಯಡಿಯೂರಪ್ಪ ರಾಜೀನಾಮೆಯಿಂದ ಕಾಂಗ್ರೆಸ್​ಗೆ ಲಾಭವಿಲ್ಲ: ರಮೇಶ್ ಕುಮಾರ್

Published

on

Share this

ಕೋಲಾರ: ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದ್ದು ಕಾಂಗ್ರೆಸ್​ಗೆ ಪ್ಲಸ್ಸೂ ಆಗಲ್ಲ ಮೈನಸ್ಸೂ ಆಗಲ್ಲ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.

ಜಿಲ್ಲಾ ಕಾಂಗ್ರೆಸ್​ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರ ಹೋದಾಗ ಬೇಸರ ಸಹಜ, ನಮಗೂ ನೋವಾಗುತ್ತೆ, ಅವರಿಗೂ ನೋವಾಗುತ್ತೆ. ಕಳೆದ 40 ವರ್ಷಗಳ ಕಾಲ ಸಾರ್ವಜನಿಕ ಜೀವನದಲ್ಲಿ ಸೇವೆ ಸಲ್ಲಿಸಿದ್ದಾರೆ, ಒಳ್ಳೆಯ ಅರೋಗ್ಯ ಅವರ ಎಲ್ಲಾ ಚಟುವಟಿಕೆಗಳು ಹೀಗೆ ಮುಂದುವರೆಯಲಿ ಎಂದು ಶುಭ ಹಾರೈಸುವೆ ಎಂದರು.

ಯಡಿಯೂರಪ್ಪ ಅವರಿಗೆ 78 ವರ್ಷ ವಯಸ್ಸಾಗಿದೆ ಹಾಗಾಗಿ ಈಗ ಸಿಎಂ ಆಗಿದ್ದರೆ ಒತ್ತಡ ಇರುತ್ತೆ. ವಿಶ್ರಾಂತಿ ಅವಶ್ಯಕವಾಗಿದೆ, ರಾಜೀನಾಮೆ ನಂತರ ಬೇಸರ ಸಹಜ, ಒಂದೆರೆಡು ದಿನಗಳ ನಂತರ ಎಲ್ಲವೂ ಸರಿಯಾಗುತ್ತದೆ ಎಂದರು.

ಸಿಎಂ ರಾಜಿನಾಮೆಗೆ ಮಠಾಧೀಶರ ವಿರೋಧ ಪ್ರಶ್ನೆಗೆ ಪ್ರತಿಕ್ರಿಯೆ ನೀಡದ ರಮೇಶ್ ಕುಮಾರ್, ಪಕ್ಷ ಅವರಿಗೆ ಅವಕಾಶ ಕೊಟ್ಟಿತ್ತು, ಪಕ್ಷ ಹೇಳಿದಂತೆ ಅವರು ನಡೆದುಕೊಂಡಿದ್ದಾರೆ ಎಂದರು.

ರಾಜೀನಾಮೆಯಿಂದ ವಲಸಿಗ ಸಚಿವರು ಕಂಗಾಲಾಗಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ವಲಸಿಗ ಸಚಿವರು ಬಿಜೆಪಿ ಸಿದ್ಧಾಂತ ನಂಬಿ ಹೋಗಿದ್ದಾರೋ, ಯಡಿಯೂರಪ್ಪ ಸಿದ್ಧಾಂತ ನಂಬಿ ಹೋದ್ರೋ ಗೊತ್ತಿಲ್ಲ, ಕಂಗಾಲಾಗಿದ್ದಾರೆಯೋ, ದಿಕ್ಕಾಪಾಲಾಗಿದ್ದಾರೆಯೋ ನನಗೆ ಗೊತ್ತಿಲ್ಲ. ನನಗೆ ಯಾರೂ, ಏನೂ ಹೇಳಿಲ್ಲ ಎಂದು ವಲಸಿಗ ಸಚಿವರು ಸೇರಿದಂತೆ ಆರೋಗ್ಯ ಸಚಿವ ಸುಧಾಕರ್ ಕುರಿತು ವ್ಯಂಗ್ಯವಾಗಿಯೇ ಉತ್ತರಿಸಿದರು.

ಕಾಂಗ್ರೇಸ್ ವಕ್ತಾರ ವಿ.ಆರ್.ಸುದರ್ಶನ್ ಮಾತನಾಡಿ, ಬಿಎಸ್‍ವೈ ಹೋರಾಟದ ಮೂಲಕ ಸಿಎಂ ಆದವರು, ನಾಲ್ಕು ಬಾರಿ ಸಿಎಂ ಆಗಿ ಸಾಕಷ್ಟು ಉತ್ತಮ ಕೆಲಸಗಳನ್ನ ಮಾಡಿದ್ದಾರೆ. ಅವರಿಗೆ ಬಂದಂತಹ ಅವಕಾಶಗಳಲ್ಲಿ ಬಹಳ ದೊಡ್ಡ ಕ್ರಾಂತಿ ಮಾಡಬಹುದಾಗಿತ್ತು. ಆದ್ರೆ ಅವರು ಮಾಡಿಲ್ಲ ಅವರಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.

Click to comment

Leave a Reply

Your email address will not be published. Required fields are marked *

Advertisement
Advertisement