Saturday, 7th December 2019

ಒಂದು ವರ್ಷ ಮಾತಾಡಿ ಸಾಕಾಗಿದೆ: ರಮೇಶ್ ಜಾರಕಿಹೊಳಿ

– ನಾನ್ ಏನೂ ಮಾತನಾಡಲ್ಲ

ಮುಂಬೈ: ಕಳೆದ ಒಂದು ವರ್ಷದಿಂದ ಮಾತನಾಡಿ ನನಗೆ ಸಾಕಾಗಿದೆ. ಹಾಗಾಗಿ ನಾನು ಹೆಚ್ಚು ಮಾತನಾಡಲ್ಲ. ಎಸ್.ಟಿ.ಸೋಮಶೇಖರ್ ಮತ್ತು ಭೈರತಿ ಬಸವರಾಜು ಅವರ ಮಾತಿನಂತೆ ನಾನು ಬದ್ಧವಾಗಿದ್ದೇನೆ ಎಂದು ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಮುಕ್ತಾಯಗೊಂಡ ಬಳಿಕ ಮುಂಬೈ ಹೋಟೆಲಿನಲ್ಲಿರುವ ಅತೃಪ್ತ ಶಾಸಕರು ಮಾಧ್ಯಗಳ ಜೊತೆ ಮಾತನಾಡಿದರು. ಆರಂಭದಲ್ಲಿ ಭೈರತಿ ಬಸವರಾಜ್ ಅವರು ಮಾತನಾಡಿದರು. ಇವರ ಹೇಳಿಕೆಯ ನಂತರ ಅಲ್ಲೇ ಇದ್ದ ಜಾರಕಿಹೊಳಿ ಅವರಲ್ಲಿ ಮೈಕ್ ಹಿಡಿದು ಪ್ರತಿಕ್ರಿಯೆ ಕೇಳಲಾಯಿತು.

ಈ ವೇಳೆ ಜಾರಕಿಹೊಳಿ, ಕಳೆದ ಒಂದು ವರ್ಷದಿಂದ ನಾನು ಮಾತನಾಡಿ ಮಾತನಾಡಿ ಸಾಕಾಗಿಹೋಗಿದೆ. ಇನ್ನು ಯಾವುದೇ ಹೇಳಿಕೆ ನೀಡುವುದಿಲ್ಲ. ಸೋಮಶೇಖರ್ ಮತ್ತು ಭೈರತಿ ಅವರ ಹೇಳಿಕೆಗೆ ನಾನು ಬದ್ಧ ಎಂದು ಹೇಳಿ ಹಿಂದಕ್ಕೆ ಸರಿದರು.

ಸಮ್ಮಿಶ್ರ ಸರ್ಕಾರ ರಚನೆ ಆದಾಗಿನಿಂದಲೂ ಒಂದಿಲ್ಲೊಂದು ಒಂದು ವಿಷಯಗಳಿಗೆ ಜಾರಕಿಹೊಳಿ ಬಂಡಾಯದ ಬಾವುಟ ಹಾರಿಸಿಕೊಂಡು ಬಂದಿದ್ದರು. ಲೋಕಸಭಾ ಚುನಾವಣೆ ಪೂರ್ವದಲ್ಲಿ ಈ ಹಿಂದೆ ಆಪರೇಷನ್ ಕಮಲದ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು. ಅಂದು ಸಹ ಮುಂಬೈನ ಹೋಟೆಲ್ ನಲ್ಲಿ ಉಳಿದುಕೊಂಡಿದ್ದ ರಮೇಶ್ ಜಾರಕಿಹೊಳಿ ಅವರಿಂದ ಸರ್ಕಾರ ಬೀಳಿಸುವ ತಂತ್ರ ಯಶಸ್ವಿಯಾಗಿರಲಿಲ್ಲ ಎನ್ನುವ ಮಾತು ಕೇಳಿ ಬಂದಿತ್ತು.

ಇದೀಗ ಏಕಕಾಲದಲ್ಲಿ 11 ಶಾಸಕರ ರಾಜೀನಾಮೆ ನೀಡಿದ ಬಳಿಕ ರಮೇಶ್ ಜಾರಕಿಹೊಳಿ ಮಾಧ್ಯಮಗಳಿಗೆ ಬಹಿರಂಗವಾಗಿ ಮಾತನಾಡಿರಲಿಲ್ಲ. ರಾಜೀನಾಮೆ ನೀಡಿದ ದಿನದಂದು ಸಹ ಅತೃಪ್ತರ ಪರವಾಗಿ ಶಾಸಕ ಹೆಚ್.ವಿಶ್ವನಾಥ್ ಮಾತನಾಡಿದ್ದರು. ಭಾನುವಾರ ಸಹ ಮುಂಬೈನಲ್ಲಿಯೂ ಶಾಸಕ ಎಸ್.ಟಿ.ಸೋಮಶೇಖರ್ ಎಲ್ಲರ ಪರವಾಗಿ ಪ್ರತಿಕ್ರಿಯೆ ನೀಡಿದ್ದರು.

Leave a Reply

Your email address will not be published. Required fields are marked *