Wednesday, 23rd October 2019

Recent News

ರಮೇಶ್ ಜಾರಕಿಹೊಳಿ ರಕ್ತದಲ್ಲೇ ಕಾಂಗ್ರೆಸ್ ಇದೆ: ಜಮೀರ್ ಅಹ್ಮದ್

-ಪ್ರೀತಿ ಜಾಸ್ತಿ ಇರೋ ಕಡೆ ಜಗಳ ಬರುತ್ತೆ

ದಾವಣಗೆರೆ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ರಕ್ತದಲ್ಲೇ ಕಾಂಗ್ರೆಸ್ ಇದೆ. ಮುಂದಿನ ದಿನಗಳಲ್ಲಿಯೂ ರಮೇಶ್ ಜಾರಕಿಹೊಳಿ ಕಾಂಗ್ರೆಸ್‍ನಲ್ಲಿಯೇ ಇರುತ್ತಾರೆ ಎಂದು ಸಚಿವ ಜಮೀರ್ ಅಹ್ಮದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದಾವಣಗೆರೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಕುಟುಂಬ ಎಂದ ಮೇಲೆ ಜಗಳ ಸಾಮಾನ್ಯ. ಪ್ರೀತಿ ಜಾಸ್ತಿ ಇರೋ ಕಡೆ ಜಗಳ ಬಂದೇ ಬರುತ್ತದೆ. ಅವರಿಂದ ಸಚಿವ ಸ್ಥಾನ ವಾಪಸ್ ತೆಗೆದುಕೊಂಡಿದ್ದಕ್ಕೆ ಸ್ವಲ್ಪ ಬೇಸರವಿದೆ. ಸಾಮಾನ್ಯವಾಗಿ ಸಚಿವ ಸ್ಥಾನ ಕಳೆದುಕೊಂಡ ಮೇಲೆ ಬೇಜಾರಾಗಿದ್ದಾರೆ. ನನ್ನನ್ನೂ ಮಂತ್ರಿ ಸ್ಥಾನದಿಂದ ತೆಗೆದರೆ ನನಗೆ ಬೇಜಾರು ಆಗುತ್ತದೆ. ರಮೇಶ್ ಜಾರಕಿಹೊಳಿ ಪಕ್ಕಾ ಕಾಂಗ್ರೆಸ್ಸಿಗರಾಗಿದ್ದು, ಅವರ ರಕ್ತದಲ್ಲೇ ಕಾಂಗ್ರೆಸ್ ಇದೆ. ಕಾಂಗ್ರೆಸ್ ಕುಟುಂಬದವರು ಕುಳಿತು ಜಾರಕಿಹೊಳಿಯವರ ಸಮಸ್ಯೆಯನ್ನು ಬಗೆಹರಿಸಲಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್ ತಪಾಸಣೆ ಮಾಡಿದ ಹಿನ್ನೆಲೆಯಲ್ಲಿ ಕರ್ನಾಟಕದ ಐಎಎಸ್ ಅಧಿಕಾರಿ ಮಹಮ್ಮದ್ ಮೊಹ್ಸಿನ್ ಅವರನ್ನು ಅಮಾನತು ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಮೋದಿ ಏನ್ ಮೇಲಿಂದ ಇಳಿದು ಬಂದಿಲ್ಲ. ಅವರನ್ನು ಜನರೇ ಆಯ್ಕೆ ಮಾಡಿ ಪ್ರಧಾನಿ ಹುದ್ದೆಯಲ್ಲಿ ಕೂರಿಸಿದ್ದಾರೆ. ಕಾನೂನಿನ ಮುಂದೆ ಎಲ್ಲರೂ ಒಂದೇ. ಆದರೆ ಚುನಾವಣಾ ಅಧಿಕಾರಿಯನ್ನು ಅಮಾನತು ಮಾಡಿರುವುದನ್ನು ನಾವು ಖಂಡಿಸುತ್ತೇವೆ. ಚುನಾವಣೆ ವೇಳೆ ನಮ್ಮ ವಾಹನವನ್ನು ತಪಾಸಣೆ ಮಾಡುತ್ತಾರೆ. ಅದಕ್ಕೆ ನಾನು ಯಾವತ್ತೂ ವಿರೋಧ ಮಾಡಿಲ್ಲ. ಈ ವಿಚಾರದಲ್ಲಿ ಪ್ರಧಾನಿ ಮೋದಿ ತೆಗೆದುಕೊಂಡ ನಿರ್ಣಯ ಸರಿಯಿಲ್ಲ ಎಂದು ಕಿಡಿಕಾರಿದರು.

ದೇಶ ಸುರಕ್ಷಿತವಾಗಿ ಇರಬೇಕು ಎಂದರೆ ರಾಹುಲ್ ಗಾಂಧಿ ಪ್ರಧಾನಿಯಾಗಬೇಕು. ಜನರು ಸಹ ಅದನ್ನೇ ಬಯಸುತ್ತಿದ್ದಾರೆ. ಮೇ 23 ರ ನಂತರ ದೇಶದಲ್ಲಿ ಸ್ಪಷ್ಟ ಚಿತ್ರಣ ಗೊತ್ತಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *