Connect with us

Belgaum

ರಮೇಶ್ ಜಾರಕಿಹೊಳಿಗೆ 3-4 ದಿನ ಐಸಿಯುನಲ್ಲಿ ಚಿಕಿತ್ಸೆ

Published

on

– ಆಕ್ಸಿಜನ್ ಪ್ರಮಾಣ ಕಡಿಮೆ, ಕೃತಕವಾಗಿ ಆಕ್ಸಿಜನ್ ಪೂರೈಕೆ

ಬೆಳಗಾವಿ: ಸಿಡಿ ಕೇಸ್‍ನಲ್ಲಿ ಅತ್ಯಾಚಾರ ಆರೋಪ ಹೊತ್ತಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಕೊರೊನಾ ಸೋಂಕು ತಗುಲಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ರಮೇಶ್ ಜಾರಕಿಹೊಳಿ ಆರೋಗ್ಯ ಏರುಪೇರಾಗಿದ್ದು, ಆಕ್ಸಿಜನ್ ಶಾಚುರೇಶನ್ ಲೆವಲ್ ತುಂಬಾ ಕಡಿಮೆ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಗೋಕಾಕ್ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಮೇಶ್ ಜಾರಕಿಹೊಳಿ, ರಕ್ತದಲ್ಲಿ ಆಮ್ಲಜನಕ ಪ್ರಮಾಣ ನಿಗದಿತ ಪ್ರತಿಶತಕ್ಕಿ ಕಡಿಮೆ ಆಗಿದೆ. ಕೃತಕ ಆಮ್ಲಜನಕ ಪೂರೈಕೆ ಮಾಡಲಾಗುತ್ತಿದ್ದು, ತುರ್ತು ಚಿಕಿತ್ಸಾ ಘಟಕದಲ್ಲಿ ವೈದ್ಯರ ನಿರಂತರ ನಿಗಾ ವಹಿಸಿದ್ದಾರೆ. ಆಕ್ಸಿಜನ್ ಪ್ರಮಾಣ ಶೇ.90 ಕಡಿಮೆ, ಕೃತಕವಾಗಿ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿದೆ. ಅಲ್ಲದೆ ರಮೇಶ್ ಜಾರಕಿಹೊಳಿ ಕೊಮಾರ್ಬಿಡ್ ರೋಗಿ, ಮಧುಮೇಹ ರಕ್ತದೊತ್ತಡ ಉಲ್ಬಣವಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಈ ಕುರಿತು ಗೋಕಾಕ್ ತಾಲೂಕು ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ರವೀಂದ್ರ ಮಾಹಿತಿ ನೀಡಿದ್ದು, ಬೇರೆ ರಾಜ್ಯಕ್ಕೆ ಹೋಗಿ ಬಂದಿದ್ದರಿಂದ ಜ್ವರ ಬಂದಿದೆ ಎಂದರು. ಏಪ್ರಿಲ್ 1ರಂದು ಆರ್ ಟಿಪಿಸಿಆರ್ ಟೆಸ್ಟ್ ಮಾಡಿದೆವು, ವರದಿಯಲ್ಲಿ ಕೊರೊನಾ ಪಾಸಿಟಿವ್ ಬಂತು. ಬಳಿಕ ರಮೇಶ್ ಜಾರಕಿಹೊಳಿ ಭಾನುವಾರ ರಾತ್ರಿ 10.30ರ ಸುಮಾರಿಗೆ ಆಸ್ಪತ್ರೆಗೆ ಬಂದಿದ್ದಾರೆ. ಉಸಿರಾಟದ ಸಮಸ್ಯೆ ಎಂದು ಆಸ್ಪತ್ರೆಗೆ ಆಗಮಿಸಿದ್ದು, ದಾಖಲಿಸಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು.

ರಮೇಶ್ ಜಾರಕಿಹೊಳಿಯವರಿಗೆ ಪರೀಕ್ಷೆ ನಡೆಸಿದಾಗ ಶುಗರ್, ಬಿಪಿ ಜಾಸ್ತಿ ಇರುವುದು ಕಂಡುಬಂತು. ಸದ್ಯ ಐಸಿಯುನಲ್ಲಿದ್ದಾರೆ ಆರೋಗ್ಯದಲ್ಲಿ ಸ್ಥಿರವಾಗಿದೆ. ಉಸಿರಾಟದ ತೊಂದರೆ ಇದೆ, ಬಿಪಿ ಜಾಸ್ತಿ ಇತ್ತು. ಅವರ ಆರೋಗ್ಯ ಸ್ಥಿತಿ ನೋಡಿಕೊಂಡು ಡಿಸ್ಚಾರ್ಜ್ ಮಾಡುತ್ತೇವೆ. ಕನಿಷ್ಠ ಮೂರ್ನಾಲ್ಕು ದಿನವಾದರೂ ಅವರು ಐಸಿಯುನಲ್ಲಿರಬೇಕು. ಮಹಾರಾಷ್ಟ್ರ ಮತ್ತು ಬೆಂಗಳೂರಿಗೆ ಹೋಗಿ ಬಂದಿದ್ದರಿಂದ ಕೊರೊನಾ ಸೋಂಕು ತಗುಲಿರಬಹುದು. ಕೊವಿಡ್ ವಾರ್ಡ್ ನ ಐಸಿಯುನಲ್ಲಿ ತಜ್ಞ ವೈದ್ಯರಿಂದ ರಮೇಶ್ ಜಾರಕಿಹೊಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ರಮೇಶ್ ಜಾರಕಿಹೊಳಿಯವರಿಗೆ ಕೊರೊನಾ ಸೋಂಕು ತಗುಲಿದ ಬೆನ್ನಲ್ಲೇ ಅವರ ಮನೆಯ ಅಡುಗೆ ಭಟ್ಟನಿಗೂ ಪಾಸಿಟಿವ್ ಬಂದಿದೆ ಎನ್ನಲಾಗಿದೆ.

ಜಾರಕಿಹೊಳಿ ಟ್ರಾವೆಲ್ ಹಿಸ್ಟರಿ
ರಮೇಶ್ ಜಾರಕಿಹೊಳಿಗೆ ಕೊರೊನಾ ಪಾಸಿಟಿವ್ ಹಿನ್ನಲೆ ಆತಂಕ ಶುರುವಾಗಿದ್ದು, ಬೆಂಗಳೂರು, ಮಹಾರಾಷ್ಟ್ರ ಹಾಗೂ ಗೋಕಾಕ್‍ನಲ್ಲಿ ಅವರು ಸಂಚರಿಸಿದ್ದಾರೆ. ಹೀಗಾಗಿ ಅವರ ಟ್ರಾವೆಲ್ ಹಿಸ್ಟರಿ ಆತಂಕ ಹುಟ್ಟಿಸಿದೆ. ಮಾರ್ಚ್ 29ರ ತಡರಾತ್ರಿ ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸಿದ್ದು, ರಸ್ತೆ ಮಾರ್ಗವಾಗಿ ಗೋಕಾಕ್ ನಿವಾಸಕ್ಕೆ ಬಂದಿದ್ದರು. ಮಾರ್ಚ್ 30ರಂದು ಗೋಕಾಕ್ ನಿಂದ ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ಹೋಗಿದ್ದರು. ರಸ್ತೆ ಮಾರ್ಗವಾಗಿ ಆಪ್ತರೊಂದಿಗೆ ಮಹಾರಾಷ್ಟ್ರದ ಕೊಲ್ಲಾಪುರ ಮಹಾಲಕ್ಷ್ಮೀ ದೇವಿ ದರ್ಶನ ಪಡೆದುಕೊಂಡು ವಾಪಸ್ ಆಗಿದ್ದರು.

ಬಳಿಕ ಗೋಕಾಕ್ ನಿವಾಸಕ್ಕೆ ಆಗಮಿಸಿದೇ ರಹಸ್ಯ ಸ್ಥಳದಲ್ಲಿದ್ದರು. ಇದಾದ ಮೇಲೆ ಎರಡು ದಿನಗಳ ಬಳಿಕ ಏಪ್ರಿಲ್ 1ರಂದು ಗೋಕಾಕ್ ನ ತಾಲೂಕು ಆಸ್ಪತ್ರೆಗೆ ಆಗಮಿಸಿದ್ದಾರೆ. ಜ್ವರ ಮತ್ತು ಕೆಮ್ಮು ಇದೆ ಎಂದು ಆಸ್ಪತ್ರೆಗೆ ತೆರಳಿದ್ದು, ಈ ವೇಳೆ ಕೊರೊನಾ ಆರ್‍ಟಿಪಿಸಿಆರ್ ಟೆಸ್ಟ್ ಮಾಡಿಸಿದ್ದಾರೆ. ಟೆಸ್ಟ್ ಬಳಿಕ ಕೊರೊನಾ ದೃಢವಾಗಿದೆ, ಈ ಹಿನ್ನಲೆ ಹೋಮ್ ಐಸೋಲೇಷನ್ ಆಗಿದ್ದರು. ಭಾನುವಾರ ರಾತ್ರಿ ಉಸಿರಾಟದ ಸಮಸ್ಯೆ ಹಿನ್ನಲೆ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೀಪಿ ಮತ್ತು ಶುಗರ್ ಕಡಿಮೆ ಇದೆ ಎಂಬ ಕಾರಣಕ್ಕೆ ಐಸಿಯುನಲ್ಲಿಟ್ಟು ರಮೇಶ್ ಜಾರಕಿಹೊಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

Click to comment

Leave a Reply

Your email address will not be published. Required fields are marked *