Tuesday, 17th September 2019

ಬಿಜೆಪಿ ವಿರುದ್ಧವೂ ಸಿಡಿದೆದ್ದ ಸಾಹುಕಾರ

ಬೆಂಗಳೂರು: ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಅಂದು ದೋಸ್ತಿ ಸರ್ಕಾರದ ವಿರುದ್ಧ ಸಿಡಿದೆದಿದ್ದರು, ಇಂದು ಲಕ್ಷ್ಮಣ ಸವದಿಯನ್ನು ಹೇಗೆ ಮಂತ್ರಿ ಮಾಡಿದ್ದೀರಿ ಎಂದು ಬಿಜೆಪಿ ಸರ್ಕಾರದ ವಿರುದ್ಧವೂ ಗರಂ ಆಗಿದ್ದಾರೆ.

ಪರಿವಾಳಗಳ ಪಂಜರಕ್ಕೆ ಬೆಕ್ಕು ಬಿಟ್ಟಂತೆ ಲಕ್ಷ್ಮಣ ಸವದಿಯನ್ನು ಮಂತ್ರಿ ಮಾಡಿದ್ದೀರಿ. ನಮಗೆ ಕೊಟ್ಟ ಭರವಸೆಯನ್ನು ಮೊದಲು ಉಳಿಸಿಕೊಳ್ಳಿ. ನಮಗೆ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿಸಿ ಎಂದು ಸಿಎಂ ಬಿಎಸ್‍ವೈ ಎದುರು ರಮೇಶ್ ಜಾರಕಿಹೊಳಿ ಗುಡುಗಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಲಕ್ಷ್ಮಣ ಸವದಿ ಶಾಸಕರೂ ಆಗಿಲ್ಲ, ಪರಿಷತ್ ಸದಸ್ಯರೂ ಆಗಿಲ್ಲ. ಆದರೂ ಮಂತ್ರಿ ಸ್ಥಾನ ಹೇಗೆ ಕೊಟ್ಟಿದ್ದೀರಿ ಎಂದು ಸಿಎಂ ಬಿಎಸ್‍ವೈ ಅವರಿಗೆ ಪ್ರಶ್ನೆ ಮಾಡಿದ್ದು, ಅವರಿಗೆ ಅವಕಾಶ ಕೊಡಬಾರದು ಎಂದು ಒತ್ತಡವನ್ನು ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಮಂಗಳವಾರ ಯಡಿಯೂರಪ್ಪ ಅವರ ಸರ್ಕಾರದಲ್ಲಿ 17 ಮಂದಿ ಶಾಸಕರು ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ ಇನ್ನೂ ಅಧಿಕೃತವಾಗಿ ಯಾರಿಗೂ ಖಾತೆ ಹಂಚಿಕೆಯಾಗಿಲ್ಲ.

ರಮೇಶ್ ಜಾರಕಿಹೊಳಿ ಆಪರೇಷನ್ ಕಮಲದ ಸೂತ್ರಧಾರಿಯಾಗಿ ಕೆಲಸ ಮಾಡಿ ಕೊನೆಗೂ ದೋಸ್ತಿ ಸರ್ಕಾರವನ್ನು ಬೀಳಿಸುವಲ್ಲಿ ಸಫಲರಾಗಿದ್ದರು. ನಂತರ ತಮಗೆ ಮಂತ್ರಿಗಿರಿ ಸಿಗುತ್ತದೆ ಎಂಬ ಭರವಸೆಯಲ್ಲಿದ್ದರು. ಆದರೆ ಇದರ ನಡುವೆ ಬಿಜೆಪಿ ಸರ್ಕಾರದಲ್ಲಿ ಜಾರಕಿಹೊಳಿ ಕುಟುಂಬದವರಿಗೆ ಮಂತ್ರಿ ಸ್ಥಾನ ಕೈತಪ್ಪಿದೆ. ಇದರಿಂದ ರಮೇಶ್ ಜಾರಕಿಹೊಳಿ ಬಿಜೆಪಿ ವಿರುದ್ಧ ಆಕ್ರೋಶಗೊಂಡಿದ್ದಾರೆ.

Leave a Reply

Your email address will not be published. Required fields are marked *