Connect with us

Bengaluru City

ಸುಧಾಕರ್ ವಿರುದ್ಧ ಮಾನನಷ್ಟ ಮೊಕದ್ದಮೆ ಅಸ್ತ್ರ ಬಳಕೆಗೆ ಕಾಂಗ್ರೆಸ್ ನಿರ್ಧಾರ

Published

on

– ಸಿಡಿ ಕೇಸ್, ಸುಧಾಕರ್ ವಿರುದ್ಧ ಕೇಸ್ ದಾಖಲಿಸುತ್ತೇವೆಂದ ಸಿದ್ದರಾಮಯ್ಯ

ಬೆಂಗಳೂರು: ನೀವು ಏಕ ಪತ್ನಿ ವ್ರತಸ್ಥರಾ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕೇಳಿದ್ದಕ್ಕೆ ಕಾಂಗ್ರೆಸ್ ಕೆಂಡಾಮಂಡಲವಾಗಿದ್ದು, ಮಾನನಷ್ಟ ಮೊಕದ್ದಮೆ ದಾಖಲಿಸಲು ನಿರ್ಧರಿಸಿದೆ.

ಸಚಿವ ಡಾ.ಕೆ.ಸುಧಾಕರ್ ವಿರುದ್ಧ ಕಾಂಗ್ರೆಸ್ ನಿಂದ ಮಾನನಷ್ಟ ಮೊಕದ್ದಮೆ ಅಸ್ತ್ರ ಬಳಕೆಗೆ ನಿರ್ಧರಿಸಲಾಗಿದ್ದು, ಎಲ್ಲ ಕಾಂಗ್ರೆಸ್ ಶಾಸಕರುಗಳು ಅವರವರ ಕ್ಷೇತ್ರದಲ್ಲಿ ಸುಧಾಕರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಲಾಗಿದೆ. ಕಾನೂನು ತಜ್ಞರ ಅಂತಿಮ ಅಭಿಪ್ರಾಯ ಪಡೆದು. ಪ್ರತಿಯೊಬ್ಬ ಶಾಸಕರು ಅವರವರ ಕ್ಷೇತ್ರದಲ್ಲಿ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿದ್ದಾರೆ.

ಈ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಎಲ್ಲರೂ ಏಕ ಪತ್ನಿ ವ್ರತಸ್ಥರೆ. ಹಿಂದೂ ಮ್ಯಾರೇಜ್ ಆಕ್ಟ್ ನಲ್ಲಿ ಒಬ್ಬರನ್ನೇ ಮದುವೆ ಆಗೋಕೆ ಅವಕಾಶ ಇರೋದು. ಎರಡೆರಡು ಆಗೋಕೆ ಅವಕಾಶ ಇಲ್ಲ. ಸುಧಾಕರ್ ಬಹಳ ಉದ್ಧಟತನದ ಹೇಳಿಕೆ ಕೊಟ್ಟಿದ್ದಾರೆ. 225 ಎಂದರೆ ಸ್ವತಃ ಅವರು, ಸ್ಪೀಕರ್ ಹಾಗೂ ಸಿಎಂ ರನ್ನು ಒಳಗೊಂಡಂತೆ ಎಲ್ಲರಿಗೂ ಅನ್ವಯವಾಗುತ್ತೆ. ಮನೆಯವರು ಅನುಮಾನದಿಂದ ನೋಡುತ್ತಿದ್ದಾರೆ. ಇದು ಬೇಜವಬ್ದಾರಿ ಹೇಳಿಕೆ, ಪ್ರಿವಿಲೇಜ್ ಆಗುತ್ತೆ. ಸದನದ ಹೊರಗೆ ಮಾತನಾಡಿದರೂ, ಹೌಸ್ ನಡೆಯುವಾಗ ಮಾತನಾಡಿದ್ದಾರೆ. ಎಲ್ಲ 225 ಜನರ ಮೇಲೂ ಹೇಳಿದ್ದಾರೆ. ಮಹಿಳಾ ಶಾಸಕಿಯರೂ ಇದ್ದಾರೆ, ಅವರು ಹೊರಗಡೆ ಏನು ಹೇಳಬೇಕು, ಇದು ಸ್ಟುಪಿಡ್ ಹೇಳಿಕೆ. ಸುಧಾಕರ್ ತಾನು ಕಳ್ಳ, ಪರರನ್ನು ನಂಬ ಎಂಬಂತಾಗಿದೆ. ಅವರದ್ದೆಲ್ಲ ಸಿಡಿ ಇದೆ, ಅದಕ್ಕೆ ವಿಲಿ ವಿಲಿ ಒದ್ದಾಡುತ್ತಿದ್ದಾರೆ. ಹೀಗಾಗಿಯೇ 6 ಜನ ಕೋರ್ಟ್ ಗೆ ಹೋಗಿದ್ದಾರೆ. ನಿಮ್ಮದು ಬಿಚ್ಚಿಡುವುದಕ್ಕಿಂತ ಮುಚ್ಚಿಡುವುದೇ ಹೆಚ್ಚಾಗಿದೆ ಎಂದು ಹರಿಹಾಯ್ದರು.

ಹೆಣ್ಣು ಮಕ್ಕಳನ್ನೂ ಸೇರಿ ಹೇಳಿದ್ದಾರೆ, ಅವರು ಏನು ಮಾಡಬೇಕು. ಹಳ್ಳಿಯಲ್ಲಿ ಏನೋ ಗಂಡಸರು ಬಿಡ್ರಪ್ಪ ಅಂತಾರೆ. ಆದರೆ ಹೆಣ್ಣು ಮಕ್ಕಳ ವಿಚಾರದಲ್ಲಿ ಒಪ್ಕೋತಾರಾ? ಮಹಿಳಾ ಶಾಸಕಿಯರು ಏನು ಮಾಡಬೇಕು ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆಯುತ್ತೇವೆ. ಸಿಡಿ, 6 ಜನ ಕೋರ್ಟ್ ಗೆ ಹೋಗಿರುವುದು, ಸಚಿವ ಸುಧಾಕರ್ ಹೇಳಿದ್ದು ಸೇರಿ ಎಲ್ಲವನ್ನೂ ಎಸ್‍ಐಟಿಗೆ ನೀಡಿ, ಚೀಫ್ ಜಸ್ಟಿಸ್ ಕಣ್ಗಾವಲಿನಲ್ಲಿ ತನಿಖೆ ನಡೆಸಲು ಒತ್ತಾಯಿಸುತ್ತೇವೆ. ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಗೆ ಹೋಗಲು ಕಾನೂನು ತಜ್ಞರ ಜೊತೆ ಚರ್ಚೆ ಮಾಡುತ್ತಿದ್ದೇವೆ, ಕಾನೂನು ಹೋರಾಟ ಮಾಡುತ್ತೇವೆ. ಹೈಕೋರ್ಟ್ ಹಾಲಿ ಮುಖ್ಯ ನ್ಯಾಯಮೂರ್ತಿ ನಿಗಾದಲ್ಲಿ ತನಿಖೆಯಾಗಬೇಕು. ಸಿಎಂ ಹಾಗೂ ಸ್ಪೀಕರ್ ಗೆ ಪತ್ರವನ್ನೂ ಕೊಡುತ್ತೇವೆ ಎಂದು ತಿಳಿಸಿದರು.

ಇದು ಹೇಡಿ ಸರ್ಕಾರ
ಚರ್ಚೆ ನಡೆಯದೆ ಸಿಎಂ ಭಾಷಣ ಓದಿದ್ದಾರೆ, ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದೆ. ಆದಾಯಕ್ಕಿಂತ ಖರ್ಚು ಹೆಚ್ಚಾದರೆ ರೆವಿನ್ಯೂ ಡಿಫಿಸಿಟ್(ಆದಾಯ ಕೊರತೆ) ಎನ್ನಲಾಗುತ್ತದೆ. ಇದನ್ನು ತುಂಬಲು ಸಾಲ ಮಾಡಬೇಕು. ಈ ವರ್ಷ 70 ಸಾವಿರ ಕೋಟಿ ಸಾಲ ತೆಗೆದುಕೊಂಡಿದ್ದಾರೆ. ಕೇಂದ್ರದಿಂದ ತಮ್ಮ ಪಾಲು ಕೇಳಲು ಇವರಿಗೆ ಧೈರ್ಯವಿಲ್ಲ, ಹೇಡಿ ಸರ್ಕಾರ ಇದು. 2.5 ಲಕ್ಷ ಕೋಟಿ ನಮ್ಮ ರಾಜ್ಯದಿಂದ ಕೇಂದ್ರಕ್ಕೆ ಹೋಗುತ್ತದೆ. ಅದರಲ್ಲಿ 34,900 ಕೋಟಿ ಮಾತ್ರ ರಾಜ್ಯಕ್ಕೆ ಬಂದಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಕರೊನಾಗೆ 5 ಸಾವಿರ ಕೋಟಿ ಖರ್ಚು ಮಾಡಿದ್ದೇನೆ ಎನ್ನುತ್ತಾರೆ. ಅದೇ ಕೇಂದ್ರದಿಂದ ಪಡೆದಿದ್ದರೆ ಇಲ್ಲಿ ಕರೊನಾಗೆ ಖರ್ಚು ಮಾಡಬಹುದಿತ್ತು. ಈಗ ಬೇರೆ ಅಭಿವೃದ್ಧಿ ಕೆಲಸ ಆಗಿಲ್ಲ, ಇದಕ್ಕೆ ಕಾರಣ ಕರೊನಾ ಎಂದು ಕೈ ತೋರಿಸುತ್ತಾರೆ ಎಂದು ಕಿಡಿಕಾರಿದರು.

ಪ್ರತಿ ಇಲಾಖೆ ಸೇರಿ 6 ಸೆಕ್ಟರ್ ಮಾಡಿಕೊಂಡಿದ್ದಾರೆ. ಎಷ್ಟು ಖರ್ಚು ಆಯಿತು ಎನ್ನುವ ಮಾಹಿತಿ ಇಲ್ಲ. ಜೂನ್ 2022ರಿಂದ ಜಿಎಸ್ ಟಿ ಕಾಂಪಾನ್ಸೆಷನ್ ನಿಲ್ಲುತ್ತೆ, ನಮ್ಮ ಪಾಲನ್ನೂ ಕಡಿಮೆ ಮಾಡಿದ್ದಾರೆ. ಇವರ ಕೈಯಲ್ಲಿ ರಾಜ್ಯ ಸರ್ಕಾರ ಇದ್ದರೆ ಸುರಕ್ಷಿತವಾಗಿ ಇರುತ್ತಾ? ರಾಜ್ಯ ಸರ್ಕಾರ ದಿವಾಳಿಯತ್ತ ಹೋಗುತ್ತೆ. ಇವರ ಕೈಯಲ್ಲಿ ನಿಯಂತ್ರಣ ಮಾಡುವುದಕ್ಕೆ ಆಗುತ್ತಾ? ನೀವು ತುಪ್ಪನಾದ್ರೂ ತಿನ್ನಿ, ಬೆಣ್ಣೆನಾದ್ರು ತಿನ್ನಿ, ಮಜ್ಜಿಗೆನಾದರೂ ಕುಡಿರಿ. ಸಾಲ ಸಿಗುತ್ತೆ ಅಂತ ಸಾಲ ಮಾಡೊದಲ್ಲ, ಸಾಲ ತೀರಿಸುವುದಕ್ಕೆ ನಮಗೆ ಶಕ್ತಿ ಇದ್ಯಾ ನೋಡಿಕೊಳ್ಳಬೇಕು. ಯಡಿಯೂರಪ್ಪ ಅವರ ಮನೆಗೆ ಖರ್ಚು ಮಾಡಿದರು ಎಂದು ನಾನು ಹೇಳುತ್ತಿಲ್ಲ. ಸಾಲ ಮಾಡಿ ಎಂದಾದರೂ ಸಂಬಳ ಕೊಟ್ಟಿದ್ದಿರಾ ಯಡಿಯೂರಪ್ಪ ಎಂದು ಪ್ರಶ್ನಿಸಿದರು.

ಸಿಎಂ ತಾರಾತುರಿನಲ್ಲಿ ಭಾಷಣ ಮಾಡಿದ್ದಾರೆ. ಇನ್ನೂ ಸಂಪೂರ್ಣ ಬಜೆಟ್ ಮೇಲೆ ಚರ್ಚೆ ಆಗಿಲ್ಲ. 24 ಪುಟಗಳನ್ನು ಓದಿದ್ದಾರೆ. ಸಂತೆಯಲ್ಲಿ ಮಾನ ಹೋಗುವ ವ್ಯಕ್ತಿ ಸೊಪ್ಪು, ಸೆದೆಯಿಂದ ಮಾನ ಮುಚ್ಚಿಕೊಂಡ ಹಾಗೆ ಓದಿ ಮುಗಿಸಿದ್ದಾರೆ. ಈ ವರ್ಷ ರೆವಿನ್ಯೂ ಡಿಫಿಸಿಟ್ (ಆದಾಯ ಕೊರತೆ) 19,485 ಕೋಟಿ ಹೆಚ್ಚುತ್ತದೆ. 143 ಕೋಟಿ ರೆವಿನ್ಯೂ ಸರ್ಪಲಸ್ ಹೆಚ್ಚಾಗುತ್ತೆ ಎಂದಿದ್ದರು. ಈ ವರ್ಷ 20 ಸಾವಿರ ಕೋಟಿ ರೆವಿನ್ಯೂ ಡಿಫಿಸಿಟ್ ಆಗುತ್ತೆ. ಮುಂದಿನ ವರ್ಷ 20 ಸಾವಿರ ಕೋಟಿಗಿಂತ ಹೆಚ್ಚಾಗುತ್ತದೆ ಎಂದಿದ್ದರು. ಆದರೆ ನಾವು ಕೇಳಿದ ಪ್ರಶ್ನೆಗೆ ಅವರು ಉತ್ತರ ನೀಡಿಲ್ಲ. ರಾಜ್ಯ ಆರ್ಥಿಕ ದಿವಾಳಿಯತ್ತ ಹೋಗುತ್ತಿದೆ, ಅದಕ್ಕೆ ಉತ್ತರ ನೀಡಿಲ್ಲ. ಅವರೇ ಹೇಳಿರುವ ಪ್ರಕಾರ ರೆವಿನ್ಯೂ ಡಿಫಿಸಿಟ್ ಪ್ರತಿ ವರ್ಷ ಹೆಚ್ಚಾಗುತ್ತಾ ಹೋಗುತ್ತೆ. ಈ ವರ್ಷ 70 ಸಾವಿರ ಕೋಟಿ ಸಾಲ ತಗೊಂಡಿದ್ದಾರೆ. ಅದರಲ್ಲಿ 20 ಸಾವಿರ ಕೋಟಿ ಎಲ್ಲಿ ಹೋಯಿತು? ರಾಜ್ಯ ದಿವಾಳಿ ಆಗುವುದಿಲ್ಲವೇ? ರಾಜ್ಯ ಇವರ ಕೈಯಲ್ಲಿ ಇದ್ದರೆ ಆರ್ಥಿಕವಾಗಿ ಸರಿ ಮಾಡುವುದಕ್ಕೆ ಆಗುತ್ತಾ? 13 ಬಜೆಟ್ ನಲ್ಲಿ ನಾನು ಫಿಸಿಕಲ್ ಡಿಫಿಸಿಟ್ ನಿರ್ವಹಿಸಿದ್ದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

Click to comment

Leave a Reply

Your email address will not be published. Required fields are marked *