Connect with us

Bengaluru City

ಏಯ್ ಯಡಿಯೂರಪ್ಪ ನಿಮ್ಮ ಸಿಡಿ ಬಿಟ್ಟುಬಿಡ್ತೀವಿ ಅಂದ್ರಂತೆ: ಸಿದ್ದರಾಮಯ್ಯ

Published

on

ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪುರಾಣ ರಾಜ್ಯ ರಾಜಕಾರಣದಲ್ಲಿಯೇ ಭಾರೀ ಸಂಚಲನ ಮೂಡಿಸಿದ್ದು, ಕೊನೆಗೂ ಸಾಹುಕಾರ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಆದರೂ ಅವರ ವಿರುದ್ಧ ಟೀಕೆಗಳು ಕೇಳುತ್ತಲೇ ಬರುತ್ತಿವೆ. ಈ ಮಧ್ಯೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ, ನಿನ್ನೆ ಟಿವಿನಲ್ಲಿ ನೋಡಿದ್ರಾ ಒಬ್ಬ ಮಂತ್ರಿ. ನೋಡೋಕೆ ನಾಚಿಕೆ ಹೇಳೋಕೆ ಅಸಹ್ಯವಾಗುತ್ತೆ. ಅವನ ತಮ್ಮ ಹೇಳ್ತಾನಂತೆ ಏಯ್ ಯಡಿಯೂರಪ್ಪ ನನ್ನ ಅಣ್ಣನ ರಾಜೀನಾಮೆ ಪಡೆದರೆ ನಿಮ್ಮ ಸಿಡಿ ಬಿಡಬೇಕಾಗುತ್ತೆ ಅಂತಾನಂತೆ. ಇಂತಹ ಲಜ್ಜೆಗೆಟ್ಟವರೆಲ್ಲಾ ಅಧಿಕಾರದಲ್ಲಿ ಇರಬೇಕಾ ಎಂದು ಪ್ರಶ್ನಿಸಿದ್ದಾರೆ.

ಕೆಪಿಟಿಸಿಎಲ್‍ನಲ್ಲಿ ಕೆಲಸ ಕೊಡಿಸುವುದಾಗಿ ಆಮಿಷ ಒಡ್ಡಿ ಸಂತ್ರಸ್ತ ಯುವತಿಯನ್ನು ಕಾಮಕ್ರಿಯೆಗೆ ಬಳಸಿಕೊಂಡಿರುವುದಾಗಿ ನಿನ್ನೆ ಸಂಜೆ ದೂರು ಕೊಡಲಾಗಿತ್ತು. ಪೊಲೀಸ್ ಆಯುಕ್ತ ಕಮಲ್ ಪಂತ್ ಸೂಚನೆ ಮೇರೆಗೆ ದಿನೇಶ್ ಕಲ್ಲಹಳ್ಳಿ ಅವರು ನಿನ್ನೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಲ್ಲದೆ ಸಂತ್ರಸ್ತೆಗೆ ನ್ಯಾಯ ಒದಗಿಸುವಂತೆ ದಿನೇಶ್ ಕಲ್ಲಹಳ್ಳಿ ಮನವಿ ಮಾಡಿದ್ದರು.

ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಭೇಟಿ ಬಳಿಕ ಮಾತನಾಡಿದ್ದ ದಿನೇಶ್, ಕುಟುಂಬದ ಸದಸ್ಯರೊಬ್ಬರು ಆಗಮಿಸಿ ಸೋಮವಾರ ನನಗೆ ಸಿಡಿ ನೀಡಿದರು. ಕಿರು ಚಿತ್ರ ನಿರ್ಮಾಣಕ್ಕೆಂದು ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿದಾಗ ಕೆಪಿಟಿಸಿಎಲ್‍ನಲ್ಲಿ ಕೆಲಸ ನೀಡುವುದಾಗಿ ಹೇಳಿಕೆ ನೀಡಿ, ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಹಲವು ಪ್ರಕರಣಗಳಲ್ಲಿ ನನಗೆ ತುಂಬಾ ನೋವು ಕೊಟ್ಟಿದ್ದಾರೆ. ನನ್ನಿಂದ ಅವರ ವಿರುದ್ಧ ಹೋರಾಟ ಮಾಡಲು ಆಗುತ್ತಿಲ್ಲ. ನ್ಯಾಯ ಕೊಡಿಸಿ ಎಂದು ನನ್ನ ಬಳಿ ಮನವಿ ಮಾಡಿದರು. ನಾನು ನಮ್ಮ ವಕೀಲರ ಜೊತೆ ಚರ್ಚೆ ನಡೆಸಿ, ಇದೀಗ ದೂರು ನೀಡಲು ಬಂದಿದ್ದೇನೆ ಎಂದು ದಿನೇಶ್ ತಿಳಿಸಿದ್ದರು.

ಈ ವಿಚಾರ ಬಯಲಾಗುತ್ತಿದ್ದಂತೆಯೇ ರಾಜ್ಯ ರಾಜಕಾರಣದಲ್ಲಿ ಅಲ್ಲೋಲಕಲ್ಲೋಲವೇ ಸೃಷ್ಟಿಯಾಯಿತು. ವಿರೋಧ ಪಕ್ಷಗಳು ರಾಜೀನಾಮೆ ನೀಡುವಂತೆ ಪಟ್ಟು ಹಿಡದವು. ಕೊನೆಗೆ ಇಂದು ಮಧ್ಯಾಹ್ನ ರಮೇಶ್ ಜಾರಕಿಹೊಳಿ ಅವರು ಸಿಎಂಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಅಲ್ಲದೆ ಪಕ್ಷಕ್ಕೆ ಮುಜುಗರ ಆಗಬಾರದು. ನನ್ನಿಂದ ಸಿಎಂಗೆ ಇರುಸುಮುರುಸು ಆಗಬಾರದು. ಸದನದಲ್ಲಿ ಆಡಳಿತ ಪಕ್ಷಕ್ಕೆ ಮುಜುಗರವಾಗೋದು ಬೇಡ. ಆದರೆ ಈ ಬಗ್ಗೆ ಸೂಕ್ತ ತನಿಖೆಯಾಗಲೇಬೇಕು. ಷಡ್ಯಂತ್ರ ನಡೆದಿರೋ ಬಗ್ಗೆಯೂ ಸಮರ್ಪಕ ವಿಚಾರಣೆಯಾಗಬೇಕು ಎಂದು ಇದೇ ವೇಳೆ ಜಾರಕಿಹೊಳಿ ಸಿಎಂಗೆ ಮನವಿ ಮಾಡಿದ್ದಾರೆ.

Click to comment

Leave a Reply

Your email address will not be published. Required fields are marked *