Connect with us

Bengaluru City

ಸಾಹುಕಾರನ ರಾಸಲೀಲೆಗೆ ಸಚಿವರ ಸಾಫ್ಟ್ ಕಾರ್ನರ್..!

Published

on

– ಪರೋಕ್ಷವಾಗಿ ಬೆಂಬಲಕ್ಕೆ ನಿಂತ್ರಾ ಮಂತ್ರಿಗಳು..?

ಬೆಂಗಳೂರು: ಬೆಳಗಾವಿ ಸಾಹುಕಾರನಿಂದ ರಾಜ್ಯ ಬಿಜೆಪಿ ಸರ್ಕಾರ ಮುಜುಗರಕ್ಕೇನೋ ಒಳಗಾಗಿದೆ. ಆದರೆ ಕಮಲಪಾಳಯದ ಮಂತ್ರಿಗಳು ಮಾತ್ರ ರಮೇಶ್ ಜಾರಕಿಹೊಳಿ ಬೆಂಬಲಕ್ಕೆ ನಿಂತಿದ್ದಾರೆ. ಸಿಡಿ ಸಿಡಿತದಿಂದ ಕೆಸರು ಮೆತ್ತಿಕೊಂಡಿದ್ರೂ ಸಚಿವರುಗಳು ಸಮರ್ಥನೆಗೆ ಇಳಿದಿದ್ದಾರೆ.

ಮೈತ್ರಿ ಸರ್ಕಾರ ಕೆಡವಿ ಬಿಜೆಪಿ ಸರ್ಕಾರದಲ್ಲಿ ಪ್ರಭಾವಿ ಎನಿಸಿಕೊಂಡಿದ್ದ ರಮೇಶ್ ಜಾರಕಿಹೊಳಿ ಕಾಮ ಪುರಾಣದ ಹಿಟ್ ವಿಕೆಟ್‍ಗೆ ಒಳಗಾಗಿದ್ದಾರೆ. ಸಿಡಿ ಕಾಮಕಾಂಡ ಬಯಲಾಗುತ್ತಿದ್ದಂತೆ ಹೈಕಮಾಂಡ್ ಸೂಚನೆ ಮೇರೆಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ. ಇತ್ತ ಸಿಎಂ ಯಡಿಯೂರಪ್ಪ, ಸಚಿವರು ಮುಜುಗರಕ್ಕೆ ಒಳಗಾಗಿದ್ದಾರಾದ್ರೂ ಪರೋಕ್ಷವಾಗಿ ಬೆಂಬಲಕ್ಕೆ ನಿಂತಂತೆ ಕಾಣುತ್ತಿದೆ.

ಬಿಜೆಪಿಯ ಹಲವು ಮಂತ್ರಿಗಳೂ ಸೇರಿದಂತೆ ಯಾವೊಬ್ಬ ನಾಯಕರೂ ಕೂಡ ರಮೇಶ್ ಜಾರಕಿಹೊಳಿ ಪ್ರಕರಣವನ್ನು ನೆಪ ಮಾತ್ರಕ್ಕೂ ತಪ್ಪು ಎನ್ನಲಿಲ್ಲ. ಎಲ್ಲರದ್ದು ಹಾರಿಕೆಯ ಉತ್ತರವೇ ಆಗಿದೆ. ರಮೇಶ್ ಜಾರಕಿಹೊಳಿ ಪ್ರಕರಣದ ಬಗ್ಗೆ ತನಿಖೆ ಆಗ್ಲಿ, ಆಗ ಸತ್ಯಾಸತ್ಯತೆ ಹೊರಬರುತ್ತೆ ಅಂತಾ ಹೇಳಿದ್ರು.

ಕೆಲವರಂತೂ ರಮೇಶ್ ಜಾರಕಿಹೊಳಿ ತಪ್ಪೇ ಮಾಡಿಲ್ಲ ಎಂದು ಸಮರ್ಥಿಸಿಕೊಂಡರು. ನೈತಿಕವಾಗಿ ಜಾರಕಿಹೊಳಿ ನಿಲ್ಲೋದಾಗಿ ಬಹಿರಂಗವಾಗಿ ಘೋಷಿಸಿದ್ರು. ಕೆಲ ಸಚಿವರು ಮುಜುಗರದಿಂದ ಪ್ರತಿಕ್ರಿಯೆಗೆ ನಿರಾಕರಿಸಿ ಕೈಮುಗಿದ್ರು.

ಒಟ್ಟಿನಲ್ಲಿ ಸಂಪುಟ ಸಭೆಯಲ್ಲಿ ಸಿಎಂ ಯಡಿಯೂರಪ್ಪ ರಾಸಲೀಲೆ ಪ್ರಕರಣದ ಬಗ್ಗೆ ಬಹಿರಂಗವಾಗಿ ಮಾತನಾಡದಂತೆ ಸೂಚನೆ ನೀಡಿದ್ದಾರೆ ಎನ್ನಲಾಗ್ತಿದೆ. ಹೀಗಾಗಿಯೇ ಬಹುತೇಕ ಸಚಿವರು ಪ್ರಕರಣದ ಬಗ್ಗೆ ತುಟಿಬಿಚ್ಚುತ್ತಿಲ್ಲ. ಆದರೆ ವಾಸ್ತವದಲ್ಲಿ ಬಿಜೆಪಿ ಮುಖಂಡರು ಮುಜುಗರಕ್ಕೆ ಒಳಗಾಗಿರೋದಂತು ಸತ್ಯ.

Click to comment

Leave a Reply

Your email address will not be published. Required fields are marked *