Connect with us

ರೇಪ್ ಕೇಸ್‍ಗಳಲ್ಲಿ ನಾನು ನೋಡಿದಂತೆ ಅರೆಸ್ಟ್ ಮಾಡದೆ ಇರೋದು ಜಾರಕಿಹೊಳಿ ಪ್ರಕರಣ ಮಾತ್ರ: ಸಿದ್ದು

ರೇಪ್ ಕೇಸ್‍ಗಳಲ್ಲಿ ನಾನು ನೋಡಿದಂತೆ ಅರೆಸ್ಟ್ ಮಾಡದೆ ಇರೋದು ಜಾರಕಿಹೊಳಿ ಪ್ರಕರಣ ಮಾತ್ರ: ಸಿದ್ದು

– ಬಸವರಾಜ್ ಬೊಮ್ಮಾಯಿ ರಾಜೀನಾಮೆಗೆ ಆಗ್ರಹ
– ಈ ಸರ್ಕಾರದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ

ಬೆಂಗಳೂರು: ಭಾರತ ದೇಶದ ರೇಪ್ ಕೇಸುಗಳಲ್ಲಿ ನಾನು ನೋಡಿದಂತೆ ಅರೆಸ್ಟ್ ಮಾಡದೇ ಇರುವುದು ರಮೇಶ್ ಜಾರಕಿಹೊಳಿ ಕೇಸ್ ಮಾತ್ರ. ಅವರು ಓಡಾಡಿಕೊಂಡಿದ್ದಾರೆ, ಅವರನ್ನು ಅರೆಸ್ಟ್ ಮಾಡಿಲ್ಲ. ಈ ಮೂಲಕ ಅವರಿಗೆ ಸರ್ಕಾರ ಸಂಪೂರ್ಣ ರಕ್ಷಣೆ ಕೊಡುತ್ತಿದೆ. ಎಸ್‍ಐಟಿ ಮುಖ್ಯಸ್ಥ ಸೌಮೆಂದು ಮುಖರ್ಜಿಯನ್ನ ರಜೆ ಮೇಲೆ ಕಳುಹಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ನಗರದಲ್ಲಿ ಜಂಟಿ ಡಿಕೆ ಶಿವಕುಮಾರ್ ಜೊತೆಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಒಂದು ಪ್ರಮುಖ ವಿಚಾರ ಪ್ರಸ್ತಾಪ ಮಾಡುತ್ತಿದ್ದೇವೆ. ರಮೇಶ್ ಜಾರಕಿಹೋಳಿ ಅವರ ಲೈಂಗಿಕ ಹಗರಣದ ಬಗ್ಗೆ. ಅವರ ಲೈಂಗಿಕ ಹಗರಣ ಬೆಳಕಿಗೆ ಬಂದು 3 ತಿಂಗಳಾಗಿದೆ. ಮಾರ್ಚ್ 2 ರಂದು ದಿನೇಶ್ ಕಲ್ಲಳ್ಳಿ ಪೊಲೀಸ್ ಕಮೀಷನರ್ ಭೇಟಿ ಮಾಡಿ ಸಿಡಿ ಬಗ್ಗೆ ದೂರು ಕೊಟ್ಟಿದ್ದರು. ಆದರೆ ಪೊಲೀಸ್ ಕಮೀಷನರ್ ದೂರು ಪಡೆಯದೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಕಳುಹಿಸಿದ್ದರು. ಪೊಲೀಸರು ದೂರು ತೆಗೆದುಕೊಂಡು ಎಫ್‍ಐಆರ್ ಮಾಡಿಲ್ಲ. ಎನ್‍ಸಿಆರ್ ಮಾಡಿಲ್ಲ, ಸುಮ್ಮನೆ ಕಳುಹಿಸಿದ್ದಾರೆ. ಆನಂತರ ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಸುದ್ದಿ ಬಂದು ಎಲ್ಲವೂ ಜಗಜ್ಜಾಹೀರಾಗಿದೆ. ಆಗ ರಮೇಶ್ ಜಾರಕಿಹೊಳಿ ಅದು ನಕಲಿ ಸಿಡಿ. ನನ್ನ ತೇಜೋವಧೆಗಾಗಿ ಈ ಸಿಡಿ ಸೃಷ್ಟಿ ಮಾಡಲಾಗಿದೆ ಎಂದಿದ್ದರು. ಅಲ್ಲದೆ ಯಾವ ಕಾರಣಕ್ಕೂ ರಾಜೀನಾಮೆ ಕೊಡಲ್ಲ ಎಂದಿದ್ದರು ಅಂತ ಹೇಳುವ ಮೂಲಕ ಪ್ರಕರಣವನ್ನು ಮತ್ತೆ ಕೆಣಕಿದರು.

ಇದರಲ್ಲಿ ಷಡ್ಯಂತ್ರ ಇದೆ. ಅದನ್ನ ಬಹಿರಂಗಪಡಿಸ್ತೀನಿ ಅಂತಾರೆ. ಮಾರ್ಚ್ 3ಕ್ಕೆ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ತಾರೆ. ಮಾರ್ಚ್ 5ನೇ ತಾರಿಕು ತಮ್ಮ ವಿರುದ್ಧ ಸುದ್ದಿ ಪಬ್ಲಿಷ್ ಮಾಡಬಾರದು ಅಂತ 6 ಸಚಿವರು ಕೋರ್ಟಿಗೆ ಹೋಗಿ ಇಂಜೆಕ್ಷನ್ ಆರ್ಡರ್ ತೆಗೆದುಕೊಂಡಿದ್ದಾರೆ. ಸುಮಾರು 67 ವೀಡಿಯೋಗಳ ವಿರುದ್ಧ ಇಂಜೆಕ್ಷನ್ ತೆಗೆದುಕೊಂಡಿದ್ದಾರೆ ಎಂದರು.

ದಿನೇಶ್ ಕಲ್ಲಳ್ಳಿಗೆ ಥ್ರೆಟ್ ಮಾಡಿದ್ದಾರೆ. ಅವರಿಗೆ ಭಯ ಆಗಿ ಮಾರ್ಚ್ 8ಕ್ಕೆ ದೂರು ವಾಪಸ್ ಪಡೆಯೋಕೆ ಮುಂದಾಗಿದ್ದರು. ಮಾರ್ಚ್ 9ಕ್ಕೆ ರಮೇಶ್ ಜಾರಕಿಹೋಳಿ ಗೃಹ ಸಚಿವರಿಗೆ ಪತ್ರ ಬರೆದು ನಾನು ನಿರಪರಾಧಿ ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ. ಅದು ನಾನಲ್ಲ ನಕಲಿ ಪತ್ರ ಅಂತಾರೆ. 10ನೇ ತಾರಿಕು ಆ ಪತ್ರವನ್ನ ಪೊಲೀಸ್ ಕಮೀಷನರ್ ಗೆ ಕಳುಹಿಸುತ್ತಾರೆ. ಒಂದು ಎಸ್‍ಐಟಿ ಮಾಡಿ ಅಂತಾರೆ, ಸೋಮೆಂದು ಮುಖರ್ಜಿ ನೇತೃತ್ವದಲ್ಲಿ ಎಸ್‍ಐಟಿ ರಚನೆ ಮಾಡಿ ವರದಿ ಕೊಡಿ ಅಂತಾರೆ. ತನಿಖೆ ಮಾಡಿ ಎಫ್‍ಐಆರ್ ಮಾಡಿ ಆನಂತರ ಚಾರ್ಜ್ ಶೀಟ್ ಕೋರ್ಟ್ ಗೆ ಸಲ್ಲಿಕೆ ಮಾಡಬೇಕು. ಆದರೆ ಇಲ್ಲಿ ತನಿಖೆ ಮಾಡಿ ಸರ್ಕಾರಕ್ಕೆ ವರದಿ ಕೊಡಿ ಅಂತಾರೆ. 11ಕ್ಕೆ ಎಸ್‍ಐಟಿ ಆರ್ಡರ್ ಆಗುತ್ತೆ. 13ನೇ ತಾರಿಕು ನಾಗರಾಜ್ ಅನ್ನೋ ಮಾಜಿ ಶಾಸಕರ ಮೂಲಕ ಸದಾಶಿವನಗರ ಠಾಣೆಯಲ್ಲಿ ಯಾರ ಹೆಸರು ಹಾಕದೆ ಎಫ್‍ಐಆರ್ ಮಾಡ್ತಾರೆ. 13ಕ್ಕೆ ಶ್ರವಣ್ ಹಾಗೂ ನರೇಶ್ ಮನೆ ರೈಡ್ ಮಾಡ್ತಾರೆ. 13ರಂದು ಆ ಲೇಡಿ ಒಂದು ವೀಡಿಯೋ ರೆಕಾರ್ಡ್ ಬಿಡುಗಡೆ ಮಾಡ್ತಾರೆ. ಅದರಲ್ಲಿ ನಾನು ಕೆಲಸ ಕೇಳಿಕೊಂಡು ಹೋದಾಗ ರಮೇಶ್ ಜಾರಕಿಹೋಳಿ ನನ್ನನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡರು ಅಂತ ದೂರಿದ್ದಾಳೆ ಅಂದ್ರು.

376 ಅಂಡರ್ ನಲ್ಲಿ ಕೇಸ್ ರಿಜಿಸ್ಟರ್ ಮಾಡಬೇಕು ಅಂತ ನಾನು ಅಸೆಂಬ್ಲಿಯಲ್ಲಿ ಹೇಳಿದ್ದೆ. ಮಾರ್ಚ್ 26 ರಂದು ರಮೇಶ್ ಜಾರಕಿಹೋಳಿ ವಿರುದ್ಧ ಎಫ್‍ಐಆರ್ ಆಗುತ್ತೆ. 376 ಮೇಲೆ ಕೇಸು ಹಾಕದೆ 376/ಸಿ ಅಡಿಯಲ್ಲಿ ಕೇಸು ದಾಖಲಿಸಿದರು. ಎಸ್ ಐಟಿ ತನಿಖೆ ಸರಿಯಾಗಿ ನಡೆಯಲಿಲ್ಲ. ಭಾರತ ದೇಶದ ರೇಪ್ ಕೇಸುಗಳಲ್ಲಿ ನಾನು ನೋಡಿದಂತೆ ಅರೆಸ್ಟ್ ಮಾಡದೆ ಇರುವುದು ಈ ಕೇಸ್ ಮಾತ್ರ. ಅವರು ಓಡಾಡಿಕೊಂಡಿದ್ದಾರೆ. ಅವರನ್ನು ಅರೆಸ್ಟ್ ಮಾಡಿಲ್ಲ. ಸಂಪೂರ್ಣ ಸರ್ಕಾರ ರಕ್ಷಣೆ ಕೊಡುತ್ತಿದೆ. ಎಸ್‍ಐಟಿ ಮುಖ್ಯಸ್ಥ ಸೋಮೇಂದು ಮುಖರ್ಜಿಯನ್ನ ರಜೆ ಮೇಲೆ ಕಳುಹಿಸಲಾಗಿದೆ ಎಂದು ಆರೋಪಿಸಿದರು.

ಹಿಂದಿನ ಶನಿವಾರ ಹುಬ್ಬಳ್ಳಿಯಲ್ಲಿ ರಮೇಶ್ ಜಾರಕಿಹೋಳಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿಯನ್ನ ಭೇಟಿ ಮಾಡಿ 2 ಗಂಟೆ ಚರ್ಚೆ ನಡೆಸಿದ್ದಾರೆ. ಸುಧಾಕರ್ ಹಾಗೂ ಬೈರತಿ ಬಸವರಾಜ್ ಸಹ ಜೊತೆಗಿದ್ದರು. ಆನಂತರ ಪ್ರಹ್ಲಾದ್ ಜೋಷಿಯನ್ನು ಭೇಟಿ ಮಾಡಿ ಮಾತನಾಡಿದ್ದಾರೆ. ರೇಪ್ ಆರೋಪ ಹೊತ್ತ ವ್ಯಕ್ತಿ ಗೃಹ ಸಚಿವರನ್ನ ಭೇಟಿ ಮಾಡಿ ಚರ್ಚೆ ಮಾಡಿದ್ದು ಇದೇ ಮೊದಲಾಗಿದೆ ಎಂದು ಹೇಳಿದರು.

ಇಷ್ಟು ದಿನ ನಾನಲ್ಲ ಅನ್ನುತ್ತಿದ್ದ ರಮೇಶ್ ಜಾರಕಿಹೋಳಿ, ಎಸ್‍ಐಟಿ ಮುಂದೆ ನಾನು ನಾನೇ ಅವಳು ಅವಳೇ ಎಂದು ಒಪ್ಪಿಕೊಂಡಿದ್ದಾರೆ. ಬಿಪಿ, ಶುಗರ್ ಆರೋಗ್ಯ ತಪಾಸಣೆ ಮಾಡಿದ್ದಾರೆ. ಆದರೆ ಇದುವರೆಗೆ ಡಿಎನ್ ಎ ಟೆಸ್ಟ್ ಮಾಡಿಲ್ಲ. ಶಾಸಕರಿಗೊಂದು ಸಾಮಾನ್ಯ ಜನರಿಗೊಂದು ಕಾನೂನು ಇದೆಯಾ…? ಮೆಡಿಕಲ್ ಟೆಸ್ಟ್ ಮ್ಯಾಂಡೆಟ್ರಿ ಅದನ್ನೆ ಮಾಡಿಲ್ಲ. ಸುಪ್ರೀಂ ಕೋರ್ಟ್ ಸಹಾ ಮೆಡಿಕಲ್ ಟೆಸ್ಟ್ ಕಡ್ಡಾಯ ಅಂದಿದೆ. ಆದರೆ ಪೊಲೀಸರಿಗೆ ಮಾಡಬೇಡಿ ಎನ್ನಲಾಗಿದೆ. ಏನಾಗುತ್ತೆ ನೋಡೋಣ ಎನ್ನಲಾಗಿದೆ. ಅಲ್ಲದೆ 60 ದಿನದಲ್ಲಿ ಪೂರ್ಣಗೊಳಿಸಬೇಕಿದ್ದ ತನಿಖೆ ಇನ್ನು ಪೂರ್ಣಗೊಂಡಿಲ್ಲ ಎಂದರು.

ರಮೇಶ್ ಜಾರಕಿಹೋಳಿ ಸಮ್ಮತಿ ಸೆಕ್ಸ್ ಅಂತಾರೆ ಯುವತಿ ಸಮ್ಮತಿ ಅಲ್ಲಾ ದುರ್ಬಳಕೆ ಅಂದಿದ್ದಾರೆ. ಮಾಧ್ಯಮಗಳಲ್ಲಿ ಇದು ವರದಿ ಆಗಿದೆ. ರಾಜಕೀಯ ಮಧ್ಯ ಪ್ರವೇಶವಾಗಿದೆ. ಮಹಿಳೆಯರ ಪರ ಮಾತಾಡ್ತಾರೆ, ರಾಮನ ಜಪ ಮಾಡ್ತಾರೆ ಆದರೆ ಈಗ ಕಾನೂನನ್ನು ತಿರುಚುತ್ತಿದ್ದಾರೆ. ಸರ್ಕಾರ ಬರೋಕೆ ರಮೇಶ್ ಜಾರಕಿಹೋಳಿ ಸಹಾಯ ಮಾಡಿದ್ದಾರೆ. ಅದಕ್ಕಾಗಿ ರಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ದೂರಿದರು.

ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸ್ವತಃ ರಮೇಶ್ ಜಾರಕಿಹೋಳಿ ರಕ್ಷಣೆ ಮಾಡುತ್ತಿದ್ದಾರೆ. ಅವರಿಗೆ ಗೃಹ ಸಚಿವರಾಗಿ ಮುಂದುವರಿಯುವ ನೈತಿಕತೆ ಇಲ್ಲಾ. ಅವರು ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಲೇಬೇಕು. ಆರೋಪಿಯನ್ನ ತಕ್ಷಣ ಬಂಧಿಸಬೇಕು. ಹೈಕೋರ್ಟ್ ಕಣ್ಗಾವಲಿನಲ್ಲಿ ಸ್ವತಂತ್ರ ಸಂಸ್ಥೆ ಯಿಂದ ತನಿಖೆ ಆಗಬೇಕು. ಬೇರೆ ಯಾವೆಲ್ಲಾ ಸಚಿವರು ಇವರ ಪರ ಇದ್ದಾರೆ ಅನ್ನೋದು ಬಹಿರಂಗವಾಗಬೇಕು. ಈ ಸರ್ಕಾರದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂದು ಸಿದ್ದರಾಮಯ್ಯ ಆತಂಕ ಹೊರಹಾಕಿದರು.

Advertisement
Advertisement