Bengaluru City
ಸಹವಾಸವೇ ಬೇಡ ಎಂದು ಕೈಮುಗಿದ ಸಚಿವ ಈಶ್ವರಪ್ಪ

ಬೆಂಗಳೂರು: ಸಾಹುಕಾರನ ರಾಸಲೀಲೆ ಸಿಡಿ ಔಟ್ ಪ್ರಕರಣ ಸಂಬಂಧ ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್ ಈಶ್ವರಪ್ಪ ಮಾಧ್ಯಮದವರ ಎದುರು ಕೈಮುಗಿಯುತ್ತಾ ನಿಮ್ಮ ಸಹವಾಸವೇ ಬೇಡ ಎಂದು ಹೇಳುತ್ತಾ ಹೋಗಿದ್ದಾರೆ.
ರಾಸಲೀಲೆ ಸಿಡಿ ಔಟ್ ಪ್ರಕರಣ ಸಂಬಂಧ ಮಾಧ್ಯಮದವರು ಸಚಿವರ ಹೇಳಿಕೆಯನ್ನು ತೆಗೆದುಕೊಳ್ಳಲು ಮುಂದಾದಾಗ ನಿಮ್ಮ ಸಹವಾಸವೇ ಬೇಡ ಎಂದು ಹೇಳುತ್ತಾ ಮುಂದೆ ಸಾಗಿದ್ದಾರೆ.
ನೀರಾವರಿ ಸಚಿವ ರಮೇಶ್ ಜಾರಕಿಹೊಳಿಯವರ ಅಶ್ಲೀಲ ದೃಶ್ಯಗಳನ್ನು ಒಳಗೊಂಡ ಸಿಡಿ ನಿನ್ನೆ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಈ ಕುರಿತಾಗಿ ರಮೇಶ್ ಜಾರಕಿ ಹೊಳಿ ಅದು ನಾನು ಅಲ್ಲ. ಈ ಕುರಿತು ತನಿಖೆ ಆಗಲಿ. ನಾನು ರಾಜೀನಾಮೆ ಕೊಡುವುದಿಲ್ಲ. ಸಿಎಂ ಭೇಟಿ ಮಾಡಿ ಹೈಕಮಾಂಡ್ ಭೇಟಿ ಮಾಡಲು ದೆಹಲಿಗೆ ಹೋಗ್ತೀನಿ ಎಂದು ಹೇಳಿದ ಜಾರಕಿ ಹೊಳಿ ಇದೀಗ ರಾಜೀನಾಮೆ ಕೊಟ್ಟಿದ್ದಾರೆ.
ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಡಬಾರದು. ಪ್ರಕರಣದ ತನಿಖೆಯ ಬಳಿಕವಷ್ಟೇ ರಾಜೀನಾಮೆ ಕೊಡಲಿ. ಇದೊಂದು ನಕಲಿ ವೀಡಿಯೋ ಅಂತ ತನಿಖೆಗೆ ಸಿಎಂಗೆ ಒತ್ತಾಯಿಸಿದ್ದೇವೆ ಎಂದು ಸಹೋದರ ಬಾಲಚಂದ್ರ ಜಾರಕಿಹೊಳಿ ಅಣ್ಣನ ಪರವಾಗಿ ಬ್ಯಾಟಿಂಗ್ ಮಾಡಿದ್ದರು.
ಸಾಹುಕಾರ ರಾಸಲೀಲೆ ಕುರಿತಾಗಿ ವಿರೋಧ ಪಕ್ಷದ ನಾಯಕರು, ಅನೇಕರು ಈ ಕುರಿತಾಗಿ ಮಾಧ್ಯಮದವರೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಆದರೆ ಈಶ್ವರಪ್ಪ ಮಾತ್ರ ಈ ಕುರಿತಾಗಿ ಮಾತನಾಡದೆ ಹೋಗಿದ್ದಾರೆ.
