ರಾಜಕೀಯ ಭವಿಷ್ಯಕ್ಕಾಗಿ ಮಾಯಾವತಿ ಆದೇಶ ಧಿಕ್ಕರಿಸಿದ್ರಾ ಎನ್.ಮಹೇಶ್?

ಚಾಮರಾಜನಗರ: ರಾಜಕೀಯ ಭವಿಷ್ಯಕ್ಕಾಗಿ ಬಿಎಸ್‍ಪಿ ಶಾಸಕ ಎನ್.ಮಹೇಶ್ ಅವರು ಪಕ್ಷದ ನಾಯಕಿ ಮಾಯಾವತಿ ಅವರ ಆದೇಶವನ್ನು ಧಿಕ್ಕರಿಸಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‍ಪಿಯು ಕೇವಲ ಒಂದೇ ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ. ಒಂದು ವೇಳೆ ಬಿಎಸ್‍ಪಿಯಲ್ಲಿ ಮುಂದುವರಿದರೆ ಮುಂದಿನ ದಿನಗಳಲ್ಲಿ ರಾಜಕೀಯ ಜೀವನ ಕಷ್ಟವಾಗುತ್ತದೆ. ಹೀಗಾಗಿ ಬಿಜೆಪಿಗೆ ಸೇರಿಕೊಳ್ಳುವುದು ಉತ್ತಮ ಎಂಬ ವಿಚಾರ ಎನ್.ಮಹೇಶ್ ಅವರಿಗೆ ಬಂದಿತ್ತು. ಆದ್ದರಿಂದ ಮಂಗಳವಾರ ನಡೆದ ವಿಶ್ವಾಸ ಮತಯಾಚನೆಗೆ ಹಾಜರಾಗಿಲ್ಲ ಎಂದು ಶಾಸಕರ ಆಪ್ತ ಮೂಲಗಳಿಂದ ಮಾಹಿತಿ ಲಭಿಸಿದೆ.

ಮಾಯಾವತಿ ಅವರು ಈಗಾಗಲೇ ಟ್ವೀಟ್ ಮಾಡಿದ್ದು, ಕರ್ನಾಟಕದ ಕುಮಾರಸ್ವಾಮಿ ಸರ್ಕಾರಕ್ಕೆ ಬೆಂಬಲ ನೀಡುವಂತೆ ನಮ್ಮ ಶಾಸಕರಾದ ಎನ್.ಮಹೇಶ್ ಅವರಿಗೆ ಸೂಚನೆ ನೀಡಲಾಗಿತ್ತು. ಪಕ್ಷದ ಆದೇಶವನ್ನು ಉಲ್ಲಂಘಿಸಿದ ಎನ್.ಮಹೇಶ್ ಕಲಾಪಕ್ಕೆ ಗೈರಾಗುವ ಮೂಲಕ ಅಶಿಸ್ತು ತೋರಿಸಿದ್ದಾರೆ. ಹೈಕಮಾಂಡ್ ನಿರ್ಣಯದ ವಿರುದ್ಧ ನಡೆದುಕೊಂಡ ಹಿನ್ನೆಲೆಯಲ್ಲಿ ಎನ್.ಮಹೇಶ್ ಅವರನ್ನು ಪಕ್ಷದಿಂದ ಉಚ್ಛಾಟನೆಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ರಾಜಕೀಯ ಹೈಡ್ರಾಮಾ ವೇಳೆಯೇ ಎನ್.ಮಹೇಶ್ ಅವರು ಬಿಜೆಪಿ ಮುಖಂಡರ ಸಂಪರ್ಕದಲ್ಲಿದ್ದರು. ಅಷ್ಟೇ ಅಲ್ಲದೆ ಬಿಜೆಪಿ ನಾಯಕರು ಎನ್.ಮಹೇಶ್ ಅವರಿಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರೆ. ಹೀಗಾಗಿ ಹೈಕಮಾಂಡ್ ಆದೇಶವನ್ನು ಮೀರಿ ವಿಶ್ವಾಸ ಮತಯಾಚನೆಯಿಂದ ದೂರ ಉಳಿದರು ಎನ್ನಲಾಗಿದೆ.

ಈ ಹಿಂದೆಯೇ ಎನ್.ಮಹೇಶ್ ಅವರು ಆನೆಯಿಂದ ಕೆಳಗಿಳಿದು ಕಮಲ ಹಿಡಿಯುವ ಸ್ಕೇಚ್ ಹಾಕಿದ್ದರು. ಆದರೆ ಈ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಈಗ ಬಿಎಸ್‍ಪಿಯೇ ಉಚ್ಛಾಟನೆ ಮಾಡಿದ್ದರಿಂದ ಶಾಸಕರಿಗೆ ಕಮಲ ಪಡೆ ಸೇರಿಕೊಳ್ಳಲು ಸಹಾಯಕವಾಗಲಿದೆ. ಇನ್ನೇನು ಕೆಲವೇ ದಿನಗಳಲ್ಲಿ ಎನ್.ಮಹೇಶ್ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ.

Leave a Reply

Your email address will not be published. Required fields are marked *