Saturday, 7th December 2019

ರಾಮಲಿಂಗಾ ರೆಡ್ಡಿ ನಡೆ ನಿಗೂಢ – ಸ್ಪೀಕರ್ ವಿಚಾರಣೆಗೆ ಗೈರು

ಬೆಂಗಳೂರು: ಪಕ್ಷದ ನಾಯಕರ ವಿರುದ್ಧ ಅಸಮಾಧಾನಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಾಮಲಿಂಗಾ ರೆಡ್ಡಿ ಅವರ ನಡೆ ಇಂದಿಗೂ ನಿಗೂಢವಾಗಿದ್ದು, ಇಂದು ಸ್ಪೀಕರ್ ಎದುರು ವಿಚಾರಣೆ ಹಾಜರಾಗಲು ಆಗುತ್ತಿಲ್ಲ ಎಂದು ತಿಳಿಸಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದ ಸಚಿವ ಎಂಟಿಬಿ ನಾಗರಾಜ್ ಅವರ ರೀತಿಯಲ್ಲೇ ರಾಮಲಿಂಗಾ ರೆಡ್ಡಿ ಅವರು ಕೂಡ ಮುಂಬೈಗೆ ತೆರಳುತ್ತಾರೆ ಎಂಬ ಚರ್ಚೆ ಜೋರಾಗಿತ್ತು. ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ಅವರು, ಕೆಲವರು ಅನಗತ್ಯವಾಗಿ ನಾನು ಮುಂಬೈಗೆ ಹೋಗುತ್ತಾರೆ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ. ನಾನು ಬೆಂಗಳೂರಲ್ಲೇ ಇದ್ದೇನೆ. ಮುಂಬೈಗೆ ಹೋಗುತ್ತಿದ್ದೇನೆ ಎಂಬುದು ಕಪೋಲಕಲ್ಪಿತ ಎಂದಿದ್ದರು. ಅಲ್ಲದೇ ಇಂತಹ ಸುದ್ದಿಗಳಿಗೆ ಮಾಧ್ಯಮ ಸ್ನೇಹಿತರು ಯಾರು ಕಿವಿಗೊಡಬಾರದು ಎಂದು ಮನವಿ ಮಾಡಿದ್ದರು.

ಇತ್ತ ಶಾಸಕ ಸ್ಥಾನದ ರಾಜೀನಾಮೆ ವಿಚಾರವಾಗಿ ಸ್ಪೀಕರ್ ಎದುರು ಇವತ್ತು ರಾಮಲಿಂಗಾರೆಡ್ಡಿ ಹಾಗೂ ಗೋಪಾಲಯ್ಯ ಹಾಜರಾಗಬೇಕಿತ್ತು. ಆದರೆ, ಕಣ್ಣಿನ ಸಮಸ್ಯೆಯಿಂದ ಆಸ್ಪತ್ರೆಗೆ ತೆರಳಿದ್ದೇನೆ. ಹಾಗಾಗಿ, ಇವತ್ತು ಬರಲು ಸಾಧ್ಯವಾಗ್ತಿಲ್ಲ ಅಂತ ಕರೆ ಮಾಡಿ ಸ್ಪೀಕರ್‍ಗೆ ರಾಮಲಿಂಗಾ ರೆಡ್ಡಿ ಅವರು ತಿಳಿಸಿದ್ದಾರೆ. ಮಂಗಳವಾರ ಅಥವಾ ಬುಧವಾರ ಭೇಟಿಯಾಗುವಂತೆ ಸ್ಪೀಕರ್ ತಿಳಿಸಿದ್ದಾರೆ.

ಇದೇ ವೇಳೆ ಪಕ್ಷದ ನಾಯಕರ ಭೇಟಿ ವಿಚಾರವಾಗಿ ಮಾತನಾಡಿ, ನಿನ್ನೆಯೇ ಎಲ್ಲ ನಾಯಕರು ಬಂದಿದರು. ಅವರು ಆಹ್ವಾನ ನೀಡಿದ್ದರೆ ನಾನೇ ಹೋಗಿ ನಾಯಕರನ್ನ ಭೇಟಿ ಮಾಡುತ್ತಿದೆ ಎಂದರು. ಅಲ್ಲದೇ ರಾಜೀನಾಮೆ ಅಂಗೀಕಾರ ಆಗುವವರೆಗೂ ನಾನು ಸದನದ ಸದಸ್ಯ ಆಗಿರುತ್ತೇನೆ ಎಂದು ಸ್ಪಷ್ಟಪಡಿಸಿದ್ದರು. ಈ ನಡುವೆ ಮಹಾಲಕ್ಷ್ಮಿ ಲೇಔಟ್‍ನ ಜೆಡಿಎಸ್ ಶಾಸಕ, ಮುಂಬೈನಲ್ಲಿರೋ ಅತೃಪ್ತ ಗೋಪಾಲಯ್ಯ ಸಹ, ಕೆಲವೊಂದು ಅನಿವಾರ್ಯ ಕಾರಣಗಳಿಂದ ಸ್ಪೀಕರ್ ವಿಚಾರಣೆಗೆ ಬರಲು ಆಗತ್ತಿಲ್ಲ. ಮುಂದಿನ ವಿಚಾರಣೆಗೆ ಹಾಜರಾಗುತ್ತೇವೆ ಎಂದು ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.

Leave a Reply

Your email address will not be published. Required fields are marked *