Monday, 25th March 2019

ಹೊರಗಡೆ ಮಾಂಸ ತಿಂದು ಮನೆಯಲ್ಲಿ ತಾಯಿಗೆ ಕಿರುಕುಳ: ಶ್ರುತಿ ಆರೋಪಕ್ಕೆ ರಾಜೇಶ್ ಧ್ರುವ ತಿರುಗೇಟು

ಬೆಂಗಳೂರು: ನಮ್ಮದು ಸಂಪ್ರದಾಯ ಕುಟುಂಬವಾಗಿದ್ದು, ಶ್ರುತಿ ಹೊರಗಡೆ ಮಾಂಸ ತಿಂದು ಮಾನಸಿಕವಾಗಿ ನನ್ನ ತಾಯಿಗೆ ಹಿಂಸೆ ನೀಡುತ್ತಿದ್ದರು. ನಾನು ಯಾವುದೇ ಕಿರುಕುಳ ನೀಡಿಲ್ಲ. ನಾನು ಕಿರುಕುಳ ನೀಡಿದ್ದಕ್ಕೆ ಸಾಕ್ಷಿ ನೀಡಲಿ ಎಂದು ‘ಅಗ್ನಿಸಾಕ್ಷಿ’ ಧಾರಾವಾಹಿಯ ಅಖಿಲ್ ಪಾತ್ರಧಾರಿಯಾಗಿರುವ ನಟ ರಾಜೇಶ್ ಧ್ರುವ ಅವರು ಶ್ರುತಿ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

ತನ್ನ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ಈ ವಿಷಯದ ಕುರಿತು ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಗೆ ಕೊಟ್ಟಿರುವ ದೂರನ್ನು ನಾನು ನಿಮಗೆ ಕಳುಹಿಸುತ್ತೇನೆ. ಅದರಲ್ಲಿ ಯಾರು ಯಾರಿಗೆ ಕಿರುಕುಳ ನೀಡುತ್ತಿದ್ದರು ಅಂತ ಉಲ್ಲೇಖವಾಗಿದೆ. ನಮ್ಮ ತಾಯಿಗೆ ಯಾರಿಂದ ಕಿರುಕುಳ ಆಗುತ್ತಿದೆ ಅಂತ ದೂರಿನಲ್ಲಿದೆ. ಒಟ್ಟು ಮೂರು ದೂರು ದಾಖಲಾಗಿದೆ. ಕಳೆದ ಜುಲೈನಲ್ಲಿ ವಿಚ್ಛೇದನ ಕೋರಿ ಶ್ರುತಿ ಅರ್ಜಿ ಹಾಕಿದ್ದಾರೆ. ಆಗ ಯಾಕೆ ಶ್ರುತಿ ವರದಕ್ಷಿಣೆ ಕೇಸ್ ಹಾಕಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಅಗ್ನಿಸಾಕ್ಷಿ ಅಖಿಲ್ ವಿರುದ್ಧ ದೂರು ದಾಖಲು

ವರದಕ್ಷಿಣೆ ಆರೋಪ ಮಾಡುತ್ತಿರೋದು ಅವರು. ಅದಕ್ಕೆ ಸಾಕ್ಷಿ ನೀಡಲು ಹೇಳಿ. ನಿರೀಕ್ಷಣಾ ಜಾಮೀನಿಗಾಗಿ ನಾನು ಓಡಾಡುತ್ತಿದ್ದೆ. ಈಗ ನಿರೀಕ್ಷಣಾ ಜಾಮೀನು ಸಿಕ್ಕಿದೆ. 28ಕ್ಕೆ ಪೊಲೀಸ್ ಠಾಣೆಗೆ ಹೋಗಿ ಸಹಿ ಹಾಕಿ ಬರಬೇಕು. ಆಗ ನಾನು ಠಾಣೆಗೆ ಹೋಗ್ತೀನಿ ಎಂದು ಸ್ಪಷ್ಟಪಡಿಸಿದ್ದಾರೆ.

ನಾನು ನಟನಾಗಿರುವುದೇ ಅವರಿಗೆ ಸಮಸ್ಯೆಯಾಗಿದೆ. ಏನೇ ಮಾಡಿದರೂ ನ್ಯೂಸ್ ಚಾನೆಲ್‍ಗೆ ಕೊಡ್ತೀನಿ ಅಂತ ಹೆದರಿಸುತ್ತಿದ್ದರು. ಆದರೆ ಈಗ ಮಾಧ್ಯಮಗಳಿಗೆ ಸುಳ್ಳು ಸುದ್ದಿ ನೀಡಿದ್ದಾರೆ. ನನ್ನ ಪತ್ನಿ ಶ್ರುತಿ ಮಾನಸಿಕವಾಗಿ ತನ್ನ ತಾಯಿಗೆ ಹಿಂಸೆ ನೀಡುತ್ತಿದ್ದರು. ನನ್ನ ತಾಯಿಗೆ ಅವಾಚ್ಯ ಶಬ್ದಗಳನ್ನು ಬಳಸಿ ಬೈಯ್ಯುತ್ತಿದ್ದರು. ಅಲ್ಲದೆ ಅವರ ನಡತೆ ಬಗ್ಗೆ ಮಾತನಾಡುತ್ತಿದ್ದರು. ಅಲ್ಲದೇ ನನ್ನ ಮೇಲೆಯೇ ಶ್ರುತಿ ಅನುಮಾನ ಪಡುತ್ತಿದ್ದರು. ಶೃತಿ ಅವರು ಹೊರಗಡೆ ಮಾಂಸ ತಿಂದು ಬಂದು ಮನೆಯನ್ನೆಲ್ಲಾ ಗಬ್ಬು ವಾಸನೆ ಎಬ್ಬಿಸುತ್ತಿದ್ದರು. ನಮ್ಮ ತಾಯಿ ಮಡಿವಂತಿಕೆಯನ್ನು ನಂಬಿದವರು. ಹೀಗೆಲ್ಲಾ ಮಾಡಿ ಮಾನಸಿಕವಾಗಿ ತಾಯಿಗೆ ಶೃತಿ ಹಿಂಸೆ ನೀಡುತ್ತಿದ್ದರು. ಹೊರಗೆ ತಿಂದು ಸುಮ್ಮನ್ನಿರುತ್ತಿರಲಿಲ್ಲ. ಮನೆಯಲ್ಲಿದ್ದ ಪಾತ್ರೆಗಳನ್ನು ಮುಟ್ಟಿ ಅಶುದ್ಧ ಮಾಡುತ್ತಿದ್ದರು ಎಂದು ರಾಜೇಶ್ ಧ್ರುವ ಆರೋಪಿಸಿದ್ದಾರೆ.

ರಾಜೇಶ್ ಧ್ರುವ ವಿರುದ್ಧ ಪತ್ನಿಯೇ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರಾಜೇಶ್ ಧ್ರುವ 2017ರಲ್ಲಿ ನನ್ನನ್ನು ಮದುವೆಯಾದ ಬಳಿಕ ವರದಕ್ಷಿಣೆ ತರುವಂತೆ ಟಾರ್ಚರ್ ನೀಡಿದ್ದಾರೆ. ಅಲ್ಲದೇ ಮಾನಸಿಕ ಹಿಂಸೆ ನೀಡಿ ಮನೆಯಿಂದ ಹೊರ ಹಾಕಿದ್ದಾರೆ ಎಂದು ಶ್ರುತಿ ಆರೋಪಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *