Connect with us

Cricket

2 ಸ್ಟಂಪ್, 2 ಕ್ಯಾಚ್ ಕೀಪಿಂಗ್‍ನಲ್ಲೂ ಚೆನ್ನೈ ಕಾಡಿದ ಸ್ಯಾಮ್ಸನ್ – ಸಿಎಸ್‍ಕೆಗೆ ಮೊದಲ ಸೋಲು

Published

on

– ಕ್ರೀಸ್‍ನಲ್ಲಿದ್ದೂ ಮೋಡಿ ಮಾಡದ ಧೋನಿ, ಡು ಪ್ಲೆಸಿಸ್ ಅಬ್ಬರ ವ್ಯರ್ಥ

ಅಬುಧಾಬಿ: ರಾಜಸ್ಥಾನ್ ರಾಯಲ್ಸ್ ತಂಡ ತನ್ನ ಉತ್ತಮ ಬೌಲಿಂಗ್ ಮತ್ತು ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಮೊದಲ ಪಂದ್ಯವನ್ನು ಗೆಲ್ಲುವ ಮೂಲಕ ಐಪಿಎಲ್-2020ಯಲ್ಲಿ ಶುಭಾರಂಭ ಮಾಡಿದೆ.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ಸಂಜು ಸ್ಯಾಮ್ಸನ್ ಮತ್ತು ಸ್ಟೀವ್ ಸ್ಮಿತ್ ಅವರ ಉತ್ತಮ ಬ್ಯಾಟಿಂಗ್ ಹಾಗೂ ಕೊನೆಯಲ್ಲಿ ಜೋಫ್ರಾ ಆರ್ಚರ್ ಅವರ ಮಿಂಚಿನಂತ ಹೊಡೆತಗಳ ಸಲುವಾಗಿ ಭರ್ಜರಿ 217 ರನ್‍ಗಳ ಟಾರ್ಗೆಟ್ ನೀಡಿತ್ತು. ಆದರೆ ಇದನ್ನು ಬೆನ್ನಟ್ಟಿದ ಚೆನ್ನೈ ತಂಡ ರಾಯಲ್ಸ್ ತಂಡದ ಬಿಗಿ ಬೌಲಿಂಗ್ ದಾಳಿಗೆ ನಲುಗಿ ನಿಗದಿತ 20 ಓವರಿನಲ್ಲಿ ಕೇವಲ 199 ರನ್ ಗಳಿಸಿ 16 ರನ್‍ಗಳಿಂದ ಸೋಲುಂಡಿತು.

ಬ್ಯಾಟಿಂಗ್ ಮೂಲಕ ಚೆನ್ನೈ ತಂಡವನ್ನು ಕಾಡಿದ್ದ ಸಂಜು ಸ್ಯಾಮ್ಸನ್, ಕೀಪಿಂಗ್‍ನಲ್ಲೂ ಮೋಡಿ ಮಾಡಿದರು. ಇಂದಿನ ಪಂದ್ಯದಲ್ಲಿ ಎರಡು ಸ್ಟಂಪ್ ಮತ್ತು ಎರಡು ಕ್ಯಾಚ್ ಹಿಡಿದು ಸಿಎಸ್‍ಕೆ ತಂಡವನ್ನು ಕಟ್ಟಿ ಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು. ಫಾಫ್ ಡು ಪ್ಲೆಸಿಸ್ ಮತ್ತು ಕೇದಾರ್ ಜಾಧವ್ ಅವರನ್ನು ಕ್ಯಾಚ್ ಹಿಡಿದು ಔಟ್ ಮಾಡಿದರೆ, ಸ್ಯಾಮ್ ಕರ್ರನ್ ಮತ್ತು ರುತುರಾಜ್ ಗಾಯಕವಾಡ್ ಅವರನ್ನು ಸ್ಟಂಪ್ ಮಾಡಿ ಪೆವಿಲಿಯನ್‍ಗೆ ಅಟ್ಟಿದರು.

ಚೆನ್ನೈ ಉತ್ತಮ ಆರಂಭ ನೀಡಿದ ಮುರಳಿ ವಿಜಯ್ ಮತ್ತು ಶೇನ್ ವ್ಯಾಟ್ಸನ್, ಪವರ್ ಪ್ಲೇ ಮುಕ್ತಾಯದ ವೇಳೆಗೆ ಯಾವುದೇ ವಿಕೆಟ್ ಕಳೆದು ಕೊಳ್ಳದೇ 53 ರನ್ ಸೇರಿದರು. ಆದರೆ ಆರನೇ ಓವರಿನಲ್ಲಿ ಲೆಗ್ ಸೈಡ್ ಕಡೆ ದೊಡ್ಡ ಹೊಡೆತಕ್ಕೆ ಕೈ ಹಾಕಿದ ಶೇನ್ ವ್ಯಾಟ್ಸನ್ (21 ಎಸೆತ, 33 ರನ್) ರಾಹುಲ್ ತೇವಟಿಯಾ ಅವರಿಗೆ ಬೌಲ್ಡ್ ಆದರು. ನಂತರ ಶ್ರೇಯಾಸ್ ಗೋಪಾಲ್ ಅವರ ಓವರಿನಲ್ಲಿ 21 ರನ್ ಗಳಿಸಿ ಆಡುತ್ತಿದ್ದ ಮುರುಳಿ ವಿಜಯ್ ಕೂಡ ಓಟ್ ಆದರು.

ಮುರುಳಿ ವಿಜಯ್ ನಂತರ ಬಂದ ಸ್ಯಾಮ್ ಕರ್ರನ್ ಅವರು ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಸಿಡಿಸಿ ಅಬ್ಬರಿಸುವ ಮುನ್ಸೂಚನೆ ನೀಡಿದರು. ಆದರೆ ಮುಂದೆ ಬಂದು ಹೊಡೆಯುವ ಪ್ರಯತ್ನದಲ್ಲಿ ತೇವಟಿಯಾ ಬೌಲಿಂಗ್‍ನಲ್ಲಿ ಸ್ಟಂಪಿಂಗ್ ಬಲೆಗೆ ಬಿದ್ದರು. ಇದಾದ ನಂತರ ಬಂದ ರುತುರಾಜ್ ಗಾಯಕವಾಡ್ ಅವರು ಸೊನ್ನೆ ಸುತ್ತಿ ಬಂದ ದಾರಿ ಸುಂಕವಿಲ್ಲ ಎಂಬಂತೆ ವಾಪಸ್ ಹೋದರು.

ಈ ವಿಕೆಟ್ ನಂತರ ಜೊತೆಯಾದ ಫಾಫ್ ಡು ಪ್ಲೆಸಿಸ್ ಮತ್ತು ಕೇದಾರ್ ಜಾಧವ್ ಅವರು ತಂಡಕ್ಕೆ ಸ್ವಲ್ಪ ಚೇತರಿಕೆ ನೀಡಿದರು. ಆದರೆ 16 ಬಾಲಿನಲ್ಲಿ 22 ರನ್ ಹೊಡೆದು ಆಡುತ್ತಿದ್ದ ಕೇದಾರ್ ಜಾಧವ್ ಅವರು ಟಾಮ್ ಕುರ್ರನ್ ಅವರ ಬೌಲಿಂಗ್‍ನಲ್ಲಿ ಸಂಜು ಸ್ಯಾಮ್ಸನ್ ಅವರು ಹಿಡಿದ ಸೂಪರ್ ಕ್ಯಾಚ್‍ಗೆ ಬಲಿಯಾದರು. ನಂತರ ಪ್ಲೆಸಿಸ್ (37 ಎಸೆತ, 72 ರನ್) ಅವರು ಓಟ್ ಆದರು. ಆದರೆ ಕೊನೆಯ ಬಾಲ್‍ವರೆಗೂ ಕ್ರೀಸಿನಲ್ಲಿದ್ದ ಧೋನಿ ಯಾವುದೇ ಮೋಡಿ ಮಾಡಲಿಲ್ಲ.

Click to comment

Leave a Reply

Your email address will not be published. Required fields are marked *