Crime
ಮಗನ ಅಗಲಿಕೆಯಿಂದ ಆತ್ಮಹತ್ಯೆಗೆ ಶರಣಾದ ಇಡೀ ಕುಟುಂಬ

ಜೈಪುರ: 45 ವರ್ಷದ ವ್ಯಕ್ತಿಯೊರ್ವ ತನ್ನ ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳೊಂದಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಭಾನುವಾರ ರಾಜಸ್ಥಾನದ ಸಿಕಾರ್ ಜಿಲ್ಲೆಯಲ್ಲಿ ನಡೆದಿದೆ.
ಮೃತ ಪಟ್ಟ ವ್ಯಕ್ತಿ ಹನುಮಾನ್ ಪ್ರಸಾದ್(45), ಪತ್ನಿ ತಾರಾ(40), ಇಬ್ಬರು ಮಕ್ಕಳಾದ ಪೂಜಾ(22) ಹಾಗೂ ಅನು(22) ಎಂದು ಗುರುತಿಸಲಾಗಿದೆ.
ಈ ಘಟನೆ ಉದ್ಯೋಗ್ ನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಈ ಕುರಿತಂತೆ ಮಾತನಾಡಿದ ಹಿರಿಯ ಪೊಲೀಸ್ ಅಧಿಕಾರಿ ಕುನ್ವರ್ ರಾಷ್ಟ್ರದೀಪ್, ಐದು ತಿಂಗಳ ಹಿಂದೆ ಹನುಮಾನ್ ಪ್ರಸಾದ್ರವರ ಏಕೈಕ ಪುತ್ರ ಹೃದಯಾಘಾತದಿಂದ ಅಗಲಿದ್ದಾರೆ. ಇದರಿಂದ ಇಡೀ ಕುಟುಂಬ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಿದ್ದಾರೆ.
ಸೂಸೈಡ್ ಡೆತ್ ನೋಟ್ವೊಂದು ಪತ್ತೆಯಾಗಿದ್ದು, ಇದರಲ್ಲಿ ಹನುಮಾನ್ ಪ್ರಸಾದ್, ನಮ್ಮ ಮಗನ ಮರಣದ ನಂತರ ಇನ್ನುಮುಂದೆ ನಾವು ಬದುಕಲು ಇಚ್ಛಿಸುವುದಿಲ್ಲ ಎಂದು ಹೇಳಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
