ಜೈಪುರ್: ರಾಜಸ್ಥಾನದ 21 ವರ್ಷದ ಮಯಾಂಕ್ ಪ್ರತಾಪ್ ಸಿಂಗ್ ಅವರು ದೇಶದ ಅತ್ಯಂತ ಕಿರಿಯ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.
ರಾಜಸ್ಥಾನ ನ್ಯಾಯಾಂಗ ಸೇವೆ (ಆರ್ಜೆಎಸ್) 2018ರ ಪರೀಕ್ಷೆಯಲ್ಲಿ 197 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಮಯಾಂಕ್ ಕೇವಲ 21 ವರ್ಷ 10 ತಿಂಗಳು 9 ದಿನಗಳ ವಯಸ್ಸಿನಲ್ಲಿ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅಷ್ಟೇ ಅಲ್ಲದೆ ಮೊದಲ ಪ್ರಯತ್ನದಲ್ಲಿ ಅಗ್ರಸ್ಥಾನದಲ್ಲಿ ಪಾಸಾಗಿದ್ದಾರೆ. ಆರ್ಜೆಎಸ್ ಪರೀಕ್ಷೆಗೆ ಹಾಜರಾಗಲು ಈ ಹಿಂದೆ ಕನಿಷ್ಠ ವಯಸ್ಸು 23 ನಿಗದಿಯಾಗಿತ್ತು. ಆದರೆ ಈ ವರ್ಷ ಅದನ್ನು 21 ವಯಸ್ಸಿಗೆ ಇಳಿಸಲಾಗಿದೆ.
Advertisement
Advertisement
ನ್ಯಾಯಾಂಗ ಸೇವೆಯ ಆರ್ಜೆಎಸ್ ಮುಖ್ಯ ಪರೀಕ್ಷೆ 2018ರ ಫಲಿತಾಂಶವನ್ನು ಮಂಗಳವಾರ ಪ್ರಕಟಿಸಲಾಗಿದೆ. ಟಾಪ್-10 ಅಭ್ಯರ್ಥಿಗಳಲ್ಲಿ ಪ್ರಥಮ ಮತ್ತು 10ನೇ ಸ್ಥಾನವನ್ನು ಹೊರತುಪಡಿಸಿ ಉಳಿದ 8 ಸ್ಥಾನಗಳಲ್ಲಿ ಯುವತಿಯರೇ ಇದ್ದಾರೆ. 197 ಅಂಕ ಗಳಿಸಿರುವ ಮಯಾಂಕ್ ಪ್ರಥಮ ಮತ್ತು 187.5 ಅಂಕ ಪಡೆದಿರುವ ತನ್ವಿ ಮಾಥುರ್ ಎರಡನೇ ಸ್ಥಾನದಲ್ಲಿದ್ದಾರೆ. ಈ ಮೂಲಕ ಮಹಿಳಾ ವಿಭಾಗದಲ್ಲಿ ತನ್ವಿ ರಾಜ್ಯದಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಸಂದರ್ಶನದಲ್ಲಿ ಹಾಜರಾದ 499 ಅಭ್ಯರ್ಥಿಗಳ ಪೈಕಿ 197 ಜನರನ್ನು ಆಯ್ಕೆ ಮಾಡಲಾಗಿದೆ.
Advertisement
ಮಯಾಂಕ್ ತಂದೆ ರಾಜ್ಕುಮಾರ್ ಸಿಂಗ್ ಮತ್ತು ತಾಯಿ ಡಾ.ಮಂಜು ಸಿಂಗ್ ಶಿಕ್ಷಕರಾಗಿದ್ದಾರೆ. 2014ರಲ್ಲಿ ರಾಜಸ್ಥಾನ್ ವಿಶ್ವವಿದ್ಯಾಲಯಕ್ಕೆ ಸೇರಿಕೊಂಡ ಮಯಾಂಕ್, ಇದೇ ವರ್ಷ ಅವರು 5 ವರ್ಷಗಳ ಎಲ್ಎಲ್ಬಿ ವ್ಯಾಸಂಗ ಪೂರ್ಣಗೊಳಿಸಿದರು. ಈ ಮಧ್ಯೆ 2018ರಲ್ಲಿ ಆರ್ಜೆಎಸ್ ಪರೀಕ್ಷೆ ಬರೆದು, ಮೊದಲ ಪ್ರಯತ್ನದಲ್ಲಿ ಉತ್ತೀರ್ಣರಾಗಿದ್ದಾರೆ. ಈ ಸಾಧನೆಯು ಮಯಾಂಕ್ ಅವರಿಗೆ ವಿಶೇಷವಾಗಿದೆ. ಏಕೆಂದರೆ ಅವರು ತಮ್ಮ ಕುಟುಂಬದಲ್ಲಿ ಕಾನೂನು ಕ್ಷೇತ್ರಕ್ಕೆ ಹೋದ ಮೊದಲ ವ್ಯಕ್ತಿಯಾಗಿದ್ದಾರೆ.
Advertisement
ಈ ಕುರಿತು ಮಾತನಾಡಿರುವ ಮಯಾಂಕ್, ಆಯ್ಕೆ ಆಗುತ್ತೇನೆ ಎನ್ನುವ ಭರವಸೆ ಇತ್ತು. ಆದರೆ ಅಗ್ರಸ್ಥಾನದಲ್ಲಿ ಇರುತ್ತೇನೆ ಎಂದು ಯೋಚಿಸಿರಲಿಲ್ಲ. ಆರ್ಜೆಎಸ್ ಪರೀಕ್ಷೆ ಬರೆಯಲು ಇದ್ದ ಕನಿಷ್ಠ ವಯಸ್ಸಿನ ಮಿತಿಯನ್ನು 23ರಿಂದ 21ಕ್ಕೆ ಇಳಿಸಿದ್ದರಿಂದ ನನ್ನ ವೃತ್ತಿಜೀವನವನ್ನು ಬಹು ಬೇಗ ಪ್ರಾರಂಭಿಸಲು ಅವಕಾಶ ಸಿಕ್ಕಿತು. ಕಿರಿಯ ವಯಸ್ಸಿನಲ್ಲಿ ಈ ಸೇವೆಗೆ ಬರುವಂತಾಯಿತು ಎಂದು ಹೇಳಿದ್ದಾರೆ.
ಮಯಾಂಕ್ ಪ್ರತಿದಿನ 5 ರಿಂದ 7 ಗಂಟೆಗಳ ಕಾಲ ಅಭ್ಯಾಸ ಮಾಡುತ್ತಾರೆ. ಬಿಡುವಿನ ವೇಳೆ ಕಾದಂಬರಿಗಳನ್ನು ಓದುವುದರ ಬಗ್ಗೆಯೂ ಒಲವು ತೋರುತ್ತಾರೆ. ಜೊತೆಗೆ ಅನೇಕ ಎನ್ಜಿಓ ಗಳೊಂದಿಗೆ ಗುರುತಿಸಿಕೊಂಡಿದ್ದಾರೆ.