Saturday, 7th December 2019

Recent News

ಸರ್ಕಾರಿ ಹುದ್ದೆಗೆ ಗುಡ್‍ಬೈ, ಪ್ರಕೃತಿ ಮಾತೆಗೆ ಜೈ ಅಂದ್ರು ಕೋಲಾರದ ರಾಜಶೇಖರ್

ಕೋಲಾರ: ಕೈ ಕೆಸರಾದರೆ ಬಾಯಿ ಮೊಸರು. ಈ ಗಾದೆಗೆ ಇಂದಿನ ಪಬ್ಲಿಕ್ ಹೀರೋ ಕೋಲಾರದ ರಾಜಶೇಖರ್ ಅವರು ನಿದರ್ಶನವಾಗಿದ್ದಾರೆ. ರ‍್ಯಾಂಕ್ ಪಡೆದ ಎಂಜಿನಿಯರ್ ಪದವೀಧರರಾಗಿದ್ದರೂ, ಆರೋಗ್ಯ ಕೈಕೊಟ್ಟಿತ್ತು. ಆದರೆ, ಭೂಮಾತೆಯನ್ನು ನಂಬಿದ ರಾಜಶೇಖರ್‍ಗೆ ಆರೋಗ್ಯ-ಐಶ್ವರ್ಯ ಎಲ್ಲವೂ ಸಿಕ್ಕಿದೆ.

ಹೌದು. ಕೋಲಾರದ ಚಾಮರಹಳ್ಳಿಯ ರಾಜಶೇಖರ್ ಅವರು ತಮ್ಮ 40 ಎಕರೆಯಲ್ಲಿ ಮರಗಳನ್ನು ಬೆಳೆದಿದ್ದಾರೆ. ಸಾರಿಗೆ ಇಲಾಖೆಯಲ್ಲಿ 19 ವರ್ಷ ಸೇವೆ ಸಲ್ಲಿಸಿದ್ದ ರಾಜಶೇಖರ್ ಅವರಿಗೆ ಹಲವು ಬಗೆಯ ಕಾಯಿಲೆಗಳು ಬಾಧಿಸುತ್ತಿದ್ದವು. ಇದರಿಂದ ನೊಂದು ಜೀವನವೇ ಬೇಡ ಅಂತಿದ್ದವರು, ಸ್ನೇಹಿತರ ಮಾತಿನಂತೆ ನಿಸರ್ಗ ಜೀವನ ನಡೆಸಿ ಈಗ ಆರೋಗ್ಯಯುತರಾಗಿದ್ದಾರೆ. ತಮ್ಮ ಜಮೀನಿನಲ್ಲಿ ಮಾವು, ಬೇವು, ಹಲಸು, ಸೀತಾಫಲ, ಸಪೋಟ, ಸೀಬೆ, ನೇರಳೆ, ನೆಲ್ಲಿಕಾಯಿ ಸೇರಿದಂತೆ ಅರಳಿ ಹೀಗೆ ಹತ್ತಾರು ಬಗೆಯ ಔಷಧೀಯ ಹಾಗೂ ಅಪರೂಪದ ಸುಮಾರು 4,500ಕ್ಕೂ ಹೆಚ್ಚು ಮರಗಳನ್ನು ಬೆಳೆಸಿದ್ದಾರೆ.

ಜಿಲ್ಲೆಯಲ್ಲಿ ಸಾವಿರ ಅಡಿಗೂ ನೀರು ಸಿಗದ ಹೊತ್ತಲ್ಲಿ ತಮ್ಮ ಜಮೀನಿನಲ್ಲಿ ಮಳೆ ಕೊಯ್ಲು, ಹಿಂಗುಗುಂಡಿ, ಕೃಷಿ ಹೊಂಡಗಳ ಮೂಲಕ ಕೇವಲ 350 ಅಡಿಗೇ ನೀರು ಸಿಗುವಂತೆ ಅಂತರ್ಜಲ ಮಟ್ಟ ಏರಿಸಿದ್ದಾರೆ. ಹನಿ ನೀರಾವರಿ, ಇಂಗು-ಗುಂಡಿಗಳ ಮೂಲಕ ತೇವಾಂಶ ಕಾಯ್ದುಕೊಳ್ಳುವಂತೆ ಮಾಡಿ, ಸಾವಿರಾರು ಸಸಿಗಳನ್ನು ಕಾಪಾಡಿಕೊಂಡಿದ್ದಾರೆ. ಜೈವಿಕ ಆಹಾರ ಮತ್ತು ಆರೋಗ್ಯ ಕೇಂದ್ರವನ್ನಾಗಿ ಮಾರ್ಪಡಿಸಿದ್ದಾರೆ ಎಂದು ರಾಜಶೇಖರ್ ಸ್ನೇಹಿತ ಪದ್ಮನಾಭ್ ಹೇಳುತ್ತಾರೆ.

ಒಳ್ಳೆಯ ಗಾಳಿ, ನೀರು, ಸೇರಿದಂತೆ ಔಷಧೀಯ ಗಿಡಗಳಿಂದ ಆರೋಗ್ಯದ ಜೊತೆಗೆ ಲಕ್ಷಾಂತರ ರೂಪಾಯಿ ಲಾಭವನ್ನೂ ಪಡೆಯುತ್ತಿದ್ದಾರೆ.

Leave a Reply

Your email address will not be published. Required fields are marked *