Connect with us

Districts

ರಾಜಕೀಯ ಪ್ರವೇಶದ ಬಗ್ಗೆ ಖಡಕ್ ಉತ್ತರ ನೀಡಿದ ರಾಜಮಾತೆ ಪ್ರಮೋದಾದೇವಿ!

Published

on

ಮೈಸೂರು: ಯದುವಂಶದ ಪ್ರಮೋದಾದೇವಿ ಒಡೆಯರ್ ರಾಜಕೀಯ ಪ್ರವೇಶಿಸುತ್ತಾರೆ ಎಂಬ ಊಹಾಪೋಹಗಳಿಗೆ ಸ್ವತಃ ಪ್ರಮೋದಾದೇವಿ ಒಡೆಯರ್ ಅವರೇ ಇಂದು ತೆರೆ ಎಳೆದಿದ್ದಾರೆ.

ಮೈಸೂರಿನ ಅರಮನೆಯಲ್ಲಿ ಎಂದು ಸುದ್ದಿಗೋಷ್ಠಿ ನಡೆಸಿ ರಾಜಕೀಯದ ಬಗ್ಗೆ ಸ್ಪಷ್ಟನೆ ನೀಡಿದರು. ನನಗೆ ರಾಜಕಾರಣ ಬಗ್ಗೆ ಆಸಕ್ತಿ ಇಲ್ಲ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತಮ್ಮನ್ನು ಭೇಟಿಯಾಗಿದ್ದರಲ್ಲಿ ಯಾವುದೇ ವಿಶೇಷ ಇಲ್ಲ. ಈ ಹಿಂದೆ ತುಂಬಾ ಜನ ರಾಜಕಾರಣಿಗಳು ಅರಮನೆಗೆ ಬಂದಿದ್ದಾರೆ. ಆಗ ಮಾಧ್ಯಮಗಳು ಹೆಚ್ಚು ಇರಲಿಲ್ಲ. ಇದೀಗ ಮಾಧ್ಯಮಗಳು ಹೆಚ್ಚಾಗಿದ್ದರಿಂದ ವಿಷಯ ದೊಡ್ಡದಾಗಿದೆ ಅಷ್ಟೇ ಎಂದು ಪ್ರಮೋದಾದೇವಿ ತಿಳಿಸಿದರು.

ಅಮೀತ್ ಶಾ ಭೇಟಿ ಸೌಜನ್ಯದ ಭೇಟಿ ಎಂದು ಸ್ಪಷ್ಟಪಡಿಸಿದರು. ಅವರು ರಾಜ್ಯಸಭಾ ಸ್ಥಾನದ ಆಫರ್ ಕೊಟ್ಟಿಲ್ಲ. ಹಾಗೇನಾದ್ದರು ಕೊಟ್ಟರೆ ತಕ್ಷಣ ನಿಮ್ಮನ್ನ ಕರೆದು ಹೇಳುತ್ತೇನೆ. ನನಗೆ ಖಂಡಿತವಾಗಲೂ ರಾಜಕೀಯ ಮತ್ತು ಚುನಾವಣೆಯಲ್ಲಿ ಆಸಕ್ತಿ ಇಲ್ಲ. ಹೀಗಾಗಿ ಯಾವುದೇ ಪಕ್ಷದ ಜೊತೆ ಗುರುತಿಸಿಕೊಳ್ಳುವುದಿಲ್ಲ. ಯಾರ ಪರವಾಗಿಯೂ ಪ್ರಚಾರ ಮಾಡುವುದಿಲ್ಲ. ಕೇವಲ ಜನರ ಪರವಾಗಿ ಕೆಲಸ ಮಾಡುತ್ತೇವೆ ಅಷ್ಟೇ ಎಂದು ಹೇಳಿದರು.

ನನ್ನ ಮಗ ಯದುವೀರ್‍ಗೆ ರಾಜಕೀಯ ಇಷ್ಟವಿದ್ದರೆ ಹೋಗಬಹುದು. ಅವರು ಅದಕ್ಕೆ ನನ್ನ ಅನುಮತಿ ಪಡೆಯುವ ಅಗತ್ಯವಿಲ್ಲ. ಅವರಿಗೆ ಏನು ಇಷ್ಟ ಅದನ್ನು ಮಾಡಬಹುದು. ನನ್ನ ಸಮ್ಮತಿ ಕೇಳಿ ಅವರು ರಾಜಕೀಯಕ್ಕೆ ಬರಬೇಕಿಲ್ಲ. ಆದರೆ ಯದುವೀರ್ ತಮಗೆ ರಾಜಕೀಯ ಇಷ್ಟವಿಲ್ಲ ಎಂದು ಹೇಳಿದ್ದಾರೆ. ಈ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಲು ಅವರು ಸ್ವತಂತ್ರರೂ ಎಂದು ಕೂಡ ಸ್ಪಷ್ಟಪಡಿಸಿದರು.

ಇದೇ ವೇಳೆ ಪ್ರಮೋದಾ ದೇವಿ ಒಡೆಯರ್ ನಾ ರಾಜಕೀಯಕ್ಕೆ ಬರಬೇಕಾ ಬೇಡವಾ ನೀವೇ ಹೇಳಿ ಎಂದು ಮಾಧ್ಯಮದವರನ್ನು ಪ್ರಶ್ನಿಸಿ, ಈಗ ನಮ್ಮ ಕೆಲ ವಿಚಾರಗಳನ್ನು ಮಾಧ್ಯಮಗಳಲ್ಲೇ ತಿಳಿದುಕೊಳ್ಳುವಂತಾಗಿದೆ. ಹಾಗಾಗಿ ನೀವೇ ಹೇಳಿ ನಾ ರಾಜಕೀಯಕ್ಕೆ ಬರಬೇಕೇ? ಬೇಡವೇ ಎಂದು ಅವರು ಪತ್ರಕರ್ತರಿಗೆ ಪ್ರಶ್ನೆ ಮಾಡಿದರು.