Thursday, 21st November 2019

ರಸ್ತೆಯಲ್ಲಿ ನೀರು ನಿಂತು ಟ್ರಾಫಿಕ್ ಜಾಮ್- ಹಳ್ಳದಂತಾದ ಬಡಾವಣೆಗಳು

– ಶಾಸಕರ ವಿರುದ್ಧ ಜನತೆ ಆಕ್ರೋಶ

ಧಾರವಾಡ: ಜಿಲ್ಲೆಯಲ್ಲಿ ಮಳೆ ಬಂದರೆ ಸಾಕು ಕೆಲ ಬಡಾವಣೆಗಳಲ್ಲಿ ನೀರು ತುಂಬಿ ಹರಿಯುತ್ತದೆ. ಆದರೆ ಧಾರವಾಡ ನಗರದ ಜನ್ನತ್ ನಗರದ ಜನರಿಗೆ ಇದೊಂದು ದೊಡ್ಡ ಸಮಸ್ಯೆಯಾಗಿದೆ. ಇದಕ್ಕೆ ಕಾರಣ ಸರ್ಕಾರ ಹಾಗೂ ಜನಪ್ರತಿನಿಧಿಗಳು ಎಂದು ಜನರು ಹಿಡಿಶಾಪ ಹಾಕುತ್ತಿದ್ದಾರೆ.

ಮಳೆಗಾಲದ ಮೊದಲೇ ಈ ನೀರು ಹರಿಯುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿತ್ತು. ಆದರೆ ಶಾಸಕರು ರೇಸಾರ್ಟಿಗೆ ಹೋದರೆ, ಇತ್ತ ಅಧಿಕಾರಿಗಳು ಯಾವುದೇ ಕೆಲಸ ಮಾಡದೆ ಕಾಲಹರಣ ಮಾಡುತ್ತಿದ್ದಾರೆ. ಮಳೆ ಬಂದಾಗ ಧಾರವಾಡ ಟೊಲನಾಕಾ ಬಳಿ ಇದೇ ರೀತಿ ನೀರು ನಿಂತು ಟ್ರಾಫಿಕ್ ಜಾಮ್ ಆಗುತ್ತದೆ. ಇದೇ ನೀರು ಜನ್ನತ್ ನಗರದ ಬಡಾವಣೆಗೆ ಹೋಗಿ ನೀರು ಹೊಳೆಯಂತೆ ಹರಿಯುತ್ತದೆ.

ಶಾಸಕ ಅರವಿಂದ ಬೆಲ್ಲದ್ ಈ ಕ್ಷೇತ್ರದ ಶಾಸಕರಾಗಿದ್ದಾರೆ. ಆದರೆ ಅವರು ಇಲ್ಲಿಗೆ ಬರುವುದು ಚುನಾವಣೆ ಇದ್ದಾಗ ಮಾತ್ರ. ಹೀಗಾಗಿ ಇಲ್ಲಿಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಜನ ಕಿಡಿಕಾರುತ್ತಿದ್ದಾರೆ.

ಬಿಆರ್‌ಟಿಎಸ್ ಬಸ್ ಯೋಜನೆ ತಂದಾಗಿನಿಂದ ಈ ಸಮಸ್ಯೆ ಇನ್ನೂ ಹೆಚ್ಚಾಗಿ ಹೋಗಿದೆ. ನೀರು ಹೋಗಲು ಸರಿ ದಾರಿ ಮಾಡದೇ ಜನರು ಪರದಾಡುತ್ತಿದ್ದಾರೆ ಎಂದು ಬಡಾವಣೆ ಮಹಿಳೆ ಮುಮ್ತಾಜ್ ಗರಂ ಆಗಿದ್ದಾರೆ.

ಮುಂಗಾರು ಮಳೆ ಅನೇಕ ಕಡೆ ಬೀಳುತ್ತಿದೆ. ಇದರಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ಕೊಡಗಿನಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿದ್ದು, ಶಾಲಾ-ಕಾಲೇಜುಗಳಿಗೆ ರಜೆ ಫೋಷಣೆ ಮಾಡಲಾಗಿದೆ. ಅನೇಕ ನದಿಗಳು ತುಂಬಿ ಹರಿಯುತ್ತಿವೆ. ಮಹಾರಾಷ್ಟ್ರದಲ್ಲಿ ಅಧಿಕ ಮಳೆಯಾದ ಪರಿಣಾಮ ಚಿಕ್ಕೋಡಿಯಲ್ಲಿ ಏಳು ಸೇತುವೆಗಳು ಜಲಾವೃತಗೊಂಡಿದ್ದು, ದೇವಾಲಯಗಳಿಗೂ ನೀರು ನುಗ್ಗಿತ್ತು. ಜನರು ಮಳೆಯಿಂದ ಅನೇಕ ತೊಂದರೆ ಅನುಭವಿಸುತ್ತಿದ್ದಾರೆ. ಆದರೆ ಅದನ್ನು ಪರಿಹರಿಸಬೇಕಾದ ಶಾಸಕರು ಮಾತ್ರ ಹೋಟೆಲ್, ರೆಸಾರ್ಟ್ ಎಂದು ಎಂಜಾಯ್ ಮಾಡುತ್ತಿರುವುದು ಜನಸಾಮಾನ್ಯರ ಕೆಂಗಣ್ಣಿಗೆ ಗುರಿಯಾಗಿದೆ.

Leave a Reply

Your email address will not be published. Required fields are marked *