Connect with us

Districts

ಮತ್ತೆ ಮುಂದುವರಿದ ವರುಣನ ಅಬ್ಬರ – ಮನೆ, ರಸ್ತೆಗಳು ಜಲಾವೃತ

Published

on

– ಉಡುಪಿಯಲ್ಲಿ ಮೂರು ದಿನ ಎಲ್ಲೋ ಅಲರ್ಟ್

ತುಮಕೂರು/ಉಡುಪಿ: ರಾಜ್ಯದ ಕೆಲವೆಡೆ ಮತ್ತೆ ವರುಣನ ಆರ್ಭಟ ಮುಂದುವರಿದಿದೆ. ಮಂಗಳವಾರ ರಾತ್ರಿ ತುಮಕೂರು ಜಿಲ್ಲೆಯ ಹಲವೆಡೆ ಧಾರಾಕಾರ ಮಳೆ ಸುರಿದಿದ್ದು, ಹಲವಾರು ಮನೆಗಳು ಜಲಾವೃತಗೊಂಡಿವೆ.

ಮಧುಗಿರಿ ತಾಲೂಕಿನ ಕಡಗತ್ತೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಗೇನಹಳ್ಳಿ ಗ್ರಾಮದಲ್ಲಿ ಹಲವು ಮನೆಗಳು ಜಲಾವೃತಗೊಂಡಿದೆ. ರಸ್ತೆಗಳಲ್ಲಿ ನೀರು ನಿಂತಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಹಲವು ಮನೆಗಳ ಛಾವಣಿ ಹಾಗೂ ಗೋಡೆಗಳಿಗೆ ಹಾನಿಯಾಗಿದ್ದು, ಮನೆಯಲ್ಲಿನ ವಸ್ತುಗಳು ನಷ್ಟವಾಗಿದೆ.

ನಾಗೇನಹಳ್ಳಿಯಲ್ಲಿ ನೀರು ಹರಿದು ಹೋಗುವ ಪ್ರಮುಖ ಹಳ್ಳ ಮುಚ್ಚಿರೋದು ಈ ಅವಾಂತರಕ್ಕೆ ಕಾರಣ ಎನ್ನಲಾಗಿದೆ. ಇತ್ತ ಕೊಡಗು ಜಿಲ್ಲೆಯಲ್ಲಿ ಮತ್ತೊಂದು ವಾರ ಮಳೆ ಆಗುವ ಸಾಧ್ಯತೆ ಇದೆ.  ಎರಡು ದಿನಗಳಿಂದ ಜಿಲ್ಲೆಯ ಅಲ್ಲಲ್ಲಿ ಮಳೆ ಸುರಿಯುತ್ತಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲೇ ಎನ್‍ಡಿಆರ್‍ಎಫ್ ತಂಡ ಬೀಡುಬಿಟ್ಟಿದೆ.

ಚಿತ್ರದುರ್ಗ ಜಿಲ್ಲೆಯಲ್ಲೂ ಹಲವೆಡೆ ಭಾರೀ ಮಳೆಯಾದ ಹಿನ್ನೆಲೆಯಲ್ಲಿ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ ದೊಡ್ಡಹಳ್ಳ ಭರ್ತಿಯಾಗಿದೆ. ರಾತ್ರಿ ಸುರಿದ ಮಳೆಯಿಂದಾಗಿ ರಸ್ತೆ ಮೇಲೆ ನೀರು ನಿಂತಿದ್ದು, ರಸ್ತೆ ದಾಟಲಾಗದೇ ವಾಹನ ಸವಾರರ ಪರದಾಡಿದ್ದಾರೆ. ಇನ್ನೂ ಕೆಲಕಾಲ ರಸ್ತೆದಾಟಲಾಗದೆ ಅಂಬುಲೆನ್ಸ್ ನಿಂತಿತ್ತು. ನಂತರ ಸ್ಥಳೀಯ ಯುವಕರ ಸಹಾಯದಿಂದ ಅಂಬುಲೆನ್ಸ್ ರಸ್ತೆ ದಾಟಿದೆ.

ಕರಾವಳಿಯಲ್ಲಿ ಮಖಾ ನಕ್ಷತ್ರ ಕಡಿಮೆ ಮಳೆ ತಂದಿದ್ದು, ಹುಬ್ಬಾ ನಕ್ಷತ್ರ ಹೆಚ್ಚು ಮಳೆ ತರುವ ಸಾಧ್ಯತೆ ಇದೆ. ಹೀಗಾಗಿ ಉಡುಪಿಯಲ್ಲಿ ಮೂರು ದಿನ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ರಾಜ್ಯ ಹವಾಮಾನ ಇಲಾಖೆ ಮಳೆ ಮುನ್ಸೂಚನೆ ನೀಡಿದ್ದು, ಸೆಪ್ಟೆಂಬರ್ 3 ರಿಂದ 5ರವರೆಗೆ ಭಾರೀ ಮಳೆ ಬೀಳಲಿದೆ ಎಂದು ವರದಿ ಕೊಟ್ಟಿದೆ.

ಜಿಲ್ಲೆಯಾದ್ಯಂತ 65ರಿಂದ 115 ಮಿಲಿ ಮೀಟರ್ ನಷ್ಟು ಮಳೆ ಬೀಳುವ ಸಾಧ್ಯತೆ ಇದ್ದು, ಜನರು ಎಚ್ಚರಿಕೆಯಿಂದ ಇರಬೇಕು. ನದಿಪಾತ್ರ ಮತ್ತು ಸಮುದ್ರ ಪಾತ್ರದ ಜನರು ನೀರಿಗೆ ಇಳಿಯಬಾರದು ಎಂದು ಮುನ್ನೆಚ್ಚರಿಕೆ ರವಾನಿಸಿದೆ. ಆಳ ಸಮುದ್ರ ಮೀನುಗಾರಿಕೆಗೆ ತೆರಳುವ ಮೀನುಗಾರರು ಕೂಡ ಎಚ್ಚರಿಕೆಯಿಂದ ಇರಬೇಕು. ಜೊತೆಗೆ ಹವಾಮಾನ ಇಲಾಖೆ ಮುಂದೆ ನೀಡುವ ಎಲ್ಲಾ ಮುನ್ಸೂಚನೆಗಳನ್ನು ತಪ್ಪದೇ ಪಾಲಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

Click to comment

Leave a Reply

Your email address will not be published. Required fields are marked *