ಬಳ್ಳಾರಿ: ಸುಡುಬಿಸಿಲಿನಿಂದ ಕಾದು ಕಾದ ಕಬ್ಬಿಣದಂತಾಗಿದ್ದ ಗಣಿ ಜಿಲ್ಲೆ ಬಳ್ಳಾರಿಗೆ(Ballari) ಸುಮಾರು ಎರಡು ತಿಂಗಳ ಸುದೀರ್ಘ ಕಾಯುವಿಕೆಯ ನಂತರ ಮಳೆರಾಯ(Rain) ತಂಪೆರೆದಿದ್ದಾನೆ.
ಶುಕ್ರವಾರ ನಗರದಲ್ಲಿ ಸುಮಾರು ಒಂದು ಗಂಟೆಗಳ ಕಾಲ ಅಬ್ಬರಿಸಿದ ಧಾರಾಕಾರ ಮಳೆ ಜನರಿಗೆ ಧಗೆಯಿಂದ ಮುಕ್ತಿ ನೀಡಿದೆಯಾದರೂ, ಅವೈಜ್ಞಾನಿಕ ಚರಂಡಿ ವ್ಯವಸ್ಥೆಯಿಂದಾಗಿ ನಗರದ ಹಲವೆಡೆ ಅವಾಂತರ ಸೃಷ್ಟಿಸಿದೆ.
ಕೇವಲ ಒಂದು ಗಂಟೆ ಸುರಿದ ಬಿರುಸಿನ ಮಳೆಗೆ ನಗರದ ಪ್ರಮುಖ ತಗ್ಗು ಪ್ರದೇಶಗಳು ಮತ್ತು ರಸ್ತೆಗಳು ಹೊಳೆಯಂತಾಗಿದ್ದವು. ವಿಶೇಷವಾಗಿ ಎಸ್.ಎನ್. ಪೇಟೆ ಬಳಿಯ ರೈಲ್ವೆ ಅಂಡರ್‌ಪಾಸ್‌ನಲ್ಲಿ(Underpass) ಭಾರೀ ಪ್ರಮಾಣದ ಮಳೆ ನೀರು ಸಂಗ್ರಹಗೊಂಡು ಕೆರೆಯಂತಾಗಿ ಮಾರ್ಪಟ್ಟಿತ್ತು. ನೀರಿನ ಆಳ ಅರಿಯದೆ ಅಂಡರ್‌ಪಾಸ್ ಪ್ರವೇಶಿಸಿದ ವಾಹನ ಸವಾರರು ಸಿಲುಕಿಕೊಂಡು ಪರದಾಡಿದರು. ಪರಿಣಾಮವಾಗಿ, ಈ ಮಾರ್ಗದಲ್ಲಿ ದೀರ್ಘಕಾಲದವರೆಗೆ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು.
ಇತ್ತ ನಗರದ ಪ್ರಸಿದ್ಧ ಶ್ರೀ ಕನಕ ದುರ್ಗಮ್ಮ ದೇವಸ್ಥಾನದ ಮುಖ್ಯ ರಸ್ತೆಯಲ್ಲೂ ಮಳೆ ನೀರು ಉಕ್ಕಿ ಹರಿದ ಪರಿಣಾಮ, ಭಕ್ತಾದಿಗಳು ಹಾಗೂ ಸಾರ್ವಜನಿಕರು ಮೊಣಕಾಲುದ್ದ ನೀರಿನಲ್ಲೇ ವಾಹನಗಳನ್ನು ಚಲಾಯಿಸಲು ಹರಸಾಹಸ ಪಡುವಂತಾಯಿತು. ಪಾದಚಾರಿಗಳು ರಸ್ತೆ ದಾಟಲು ಸಾಧ್ಯವಾಗದೆ ಗಂಟೆಗಟ್ಟಲೆ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
ಬಳ್ಳಾರಿ ನಗರದಲ್ಲಿ ಸಾಧಾರಣ ಮಳೆಯಾದರೂ ರಸ್ತೆಗಳು ಮತ್ತು ರೈಲ್ವೆ ಅಂಡರ್‌ಪಾಸ್‌ಗಳು ಮುಳುಗಡೆಯಾಗುವುದು ಹೊಸತೇನಲ್ಲ. ಪ್ರತಿ ಬಾರಿಯೂ ಇದೇ ಸಮಸ್ಯೆ ಎದುರಾಗುತ್ತಿದ್ದರೂ ಶಾಶ್ವತ ಚರಂಡಿ ವ್ಯವಸ್ಥೆ ಕಲ್ಪಿಸದ ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಮತ್ತು ವಾಹನ ಸವಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಹಿಡಿಶಾಪ ಹಾಕಿದ್ದಾರೆ.
