Connect with us

Districts

ಭೀಕರ ಪ್ರವಾಹದ ಹೊಡೆತಕ್ಕೆ ಹಾಳಾಗಿದ್ದ ಶಾಲೆಗೆ ಹೈಟೆಕ್ ಟಚ್

Published

on

ರಾಯಚೂರು: ಪ್ರವಾಹಕ್ಕೆ ತುತ್ತಾಗಿದ್ದ ರಾಯಚೂರು ತಾಲೂಕಿನ ತುಂಗಭದ್ರಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಹೈಟೆಕ್ ಸ್ಪರ್ಶ ಪಡೆದುಕೊಂಡಿದೆ.

ತುಂಗಭದ್ರಾ ಗ್ರಾಮವು ಕರ್ನಾಟಕ-ಆಂಧ್ರಪ್ರದೇಶದ ಗಡಿ ಭಾಗದಲ್ಲಿದ್ದು, 2009ರ ಭೀಕರ ಪ್ರವಾಹಕ್ಕೆ ತುತ್ತಾಗಿ ಗ್ರಾಮ ಅಕ್ಷರಶಃ ನಲುಗಿ ಹೋಗಿತ್ತು. ಇಲ್ಲಿನ ಶಾಲೆ ಸಂಪೂರ್ಣವಾಗಿ ಹಾಳಾಗಿತ್ತು. ಅತ್ಯಂತ ದುಸ್ಥಿತಿಯಲ್ಲೇ ಇದ್ದ ಶಾಲೆಯಲ್ಲೇ ವಿದ್ಯಾರ್ಥಿಗಳು ಪಾಠ ಕೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಈಗ ಖಾಸಗಿ ಶಾಲೆಗಳಿಂತಲೂ ಹೈಟೆಕ್ ಸ್ಪರ್ಶ ಪಡೆದುಕೊಂಡಿದೆ. ಇದನ್ನೂ ಓದಿ: ಬಯಲಿನಲ್ಲೇ ಮಕ್ಕಳಿಗೆ ಪಾಠ- ಸಚಿವರ ಕ್ಷೇತ್ರದ ಶಾಲೆಯ ಕಥೆ

ಗ್ರಾಮಕ್ಕೆ 2009ರಲ್ಲಿ ಅಪ್ಪಳಿಸಿದ ತುಂಗಭದ್ರಾ ನದಿಯ ಪ್ರವಾಹದಿಂದ ಶಾಲೆ ಸಂಪೂರ್ಣವಾಗಿ ಹಾಳಾಗಿತ್ತು. ಆಗ ಒನ್ ಸ್ಕೂಲ್ ಆಟ್ ಎ ಟೈಮ್(ಓಸಾಟ್) ಸರ್ಕಾರೇತರ ಸಂಸ್ಥೆ ಶಾಲೆ ಕಟ್ಟಡವನ್ನ ಪುನರ್ ನಿರ್ಮಾಣಕ್ಕೆ ಮುಂದೆ ಬಂತು. ನಾನಾ ಸಮಸ್ಯೆ ಬಳಿಕ ಈಗ ಜಿಲ್ಲೆಯಲ್ಲಿ ಎಲ್ಲೂ ಇಲ್ಲದಂತ ನಾಲ್ಕು ಕೊಠಡಿಗಳ ಹೈಟೆಕ್ ಶಾಲೆ ವಿದ್ಯಾರ್ಥಿಗಳಿಗಾಗಿ ಸಿದ್ಧವಾಗಿದೆ. ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸುವ ಮೂಲಕ ಇಲ್ಲಿನ 1ರಿಂದ 8ನೇ ತರಗತಿವರೆಗಿನ 255 ಮಕ್ಕಳ ಕಲಿಕೆಗೆ ಅನುಕೂಲಕರ ವಾತಾವರಣ ಸೃಷ್ಟಿಯಾಗಿದೆ. ಇದನ್ನೂ ಓದಿ: ಮಧ್ಯಾಹ್ನವಾದ್ರೂ ಶಾಲೆಗೆ ಹಾಜರಾಗದ ಶಿಕ್ಷಕರು – ವಿಡಿಯೋ ಮಾಡಿ ಗ್ರಾಮಸ್ಥರ ಆಕ್ರೋಶ

ಶಾಲೆಯ ಕಟ್ಟಡವು ಆಕರ್ಷಕವಾಗಿ ನಿರ್ಮಾಣಗೊಂಡಿದ್ದು, ಕೊಠಡಿಯೊಳಗೆ ಬಣ್ಣ ಬಣ್ಣದ ಬೆಂಚ್ ಹಾಕಲಾಗಿದೆ. ಜೊತೆಗೆ ಶಾಲೆಯಲ್ಲಿ ಹೈಟೆಕ್ ಶೌಚಾಲಯ ನಿರ್ಮಿಸಲಾಗಿದೆ. ನೆಲದ ಮೇಲೆ ಕುಳಿತು ಪಾಠ ಕೇಳುತ್ತಿದ್ದ ಮಕ್ಕಳಿಗಾಗಿ ಬೆಂಚ್ ವ್ಯವಸ್ಥೆ ಮಾಡಲಾಗಿದೆ. ಒಟ್ಟು ಎಂಟು ಕೊಠಡಿ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದ ಓಸಾಟ್ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅನುದಾನದಲ್ಲಿ ನಾಲ್ಕು ಕೊಠಡಿಗೆ ಹಣ ಮೀಸಲಿಟ್ಟಿದ್ದರಿಂದ ನಾಲ್ಕು ಕೊಠಡಿ ಮಾತ್ರ ನಿರ್ಮಿಸಿದೆ. ಯುಎಸ್‍ಎ ಸಿಲಿಕಾನ್ ಸೇಜ್ ಬಿಲ್ಡರ್ಸ್ ಕಂಪನಿಯ ಸಂಜೀವ ಆಚಾರ್ಯ, ಐಐಟಿ ಮುಂಬೈನ 92 ಸ್ನೇಹಿತರ ತಂಡ, ಬೆಂಗಳೂರಿನ ಮಂಜುಳಾ, ನವದೆಹಲಿಯ ಭಾರತೀಯ ಕೊಳಾಯಿ ಸಂಘದ ಆರ್ಥಿಕ ಸಹಾಯದಿಂದ 40 ಲಕ್ಷ ರೂಪಾಯಿ ವೆಚ್ಚದಲ್ಲಿ ಹೈಟೆಕ್ ಮಾದರಿಯಲ್ಲಿ 4 ಕೊಠಡಿಗಳನ್ನು ನಿರ್ಮಾಣಗೊಂಡಿವೆ.

2009ರಲ್ಲೇ ಪ್ರವಾಹ ಬಳಿಕ ಓಸಾಟ್ ಸಂಸ್ಥೆ ಶಾಲೆ ಕಟ್ಟಡ ನಿರ್ಮಾಣಕ್ಕೆ ಮುಂದಾದರೂ, ಭೂ ದಾಖಲೆಗಳ ಸಮಸ್ಯೆಯಿಂದ 2019ರ ಜನವರಿಯಲ್ಲಿ ಕಾಮಗಾರಿಯನ್ನ ಆರಂಭಿಸಬೇಕಾಯಿತು. ಇದೀಗ ಕಾಮಗಾರಿ ಪೂರ್ಣಗೊಂಡಿದ್ದು, ಕೆಲವು ದಿನಗಳಲ್ಲಿ ಶಿಕ್ಷಣ ಇಲಾಖೆಗೆ ಶಾಲೆಯನ್ನು ಹಸ್ತಾಂತರಿಸಲಾಗುತ್ತಿದೆ. ಹೈಟೆಕ್ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವೂ ಸಿಗಬೇಕಿದೆ.