Connect with us

Districts

ತುಂಗಭದ್ರಾ ಪುಷ್ಕರಕ್ಕೆ ಮಂತ್ರಾಲಯ ಮಠದಲ್ಲಿ ಭರ್ಜರಿ ಸಿದ್ಧತೆ

Published

on

ರಾಯಚೂರು: 12 ವರ್ಷಕ್ಕೆ ಒಂದು ಬಾರಿ ಬರುವ ಸಂಭ್ರಮದ ಪುಷ್ಕರ ಈ ಬಾರಿ ತುಂಗಭದ್ರಾ ನದಿಯಲ್ಲಿ ನಡೆಯಲಿದೆ. ಹೀಗಾಗಿ ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿ ಮಠ ಪುಷ್ಕರಕ್ಕೆ ಭರ್ಜರಿ ತಯಾರಿ ನಡೆಸಿದೆ. ಭಕ್ತರ ಪುಣ್ಯ ಸ್ನಾನಕ್ಕೆ ಹದಿನೈದು ದಿನಗಳ ಮುಂಚಿತವಾಗಿಯೇ ಮಠ ಅಂತಿಮ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ.

ತುಂಗಭದ್ರಾ ನದಿಯ ಪುಷ್ಕರ ಪುಣ್ಯ ಸ್ನಾನಕ್ಕೆ ಈಗ ದಿನಗಣನೇ ಆರಂಭವಾಗಿದೆ. 12 ವರ್ಷಕ್ಕೆ ಒಂದು ಬಾರಿ ಬರುವ ಪುಷ್ಕರ ಆಚರಣೆ ಈ ವರ್ಷ ತುಂಗಾಭದ್ರ ನದಿಗೆ ಬಂದಿದೆ. ಪುಷ್ಕರವನ್ನು ಗುರು ಮಕರ ರಾಶಿಗೆ ಪ್ರವೇಶಿಸಿದ ಸಮಯದಿಂದ 12 ದಿನಗಳವರೆಗೆ ಆಚರಿಸಲಾಗುತ್ತದೆ. ನವೆಂಬರ್ 20ರಿಂದ ಡಿಸೆಂಬರ್ 1ರ ವರೆಗೆ ತುಂಗಭದ್ರಾ ನದಿಯ ಪುಷ್ಕರ ನಡೆಯಲಿದೆ. ಈ ವೇಳೆ ನದಿಯಲ್ಲಿ ಸ್ನಾನ ಮಾಡಿದರೆ ಪುಣ್ಯ ಲಭಿಸುತ್ತದೆ ಅನ್ನೋ ನಂಬಿಕೆಯಿದೆ. ಈ ಹಿನ್ನೆಲೆ ಮಂತ್ರಾಲಯದಲ್ಲಿ ಗುರು ರಾಯರ ಉತ್ಸವದೊಂದಿಗೆ ತುಂಗಭದ್ರಾ ನದಿಯ ತೀರದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ.

ಮಠದಲ್ಲಿ ಅನ್ನಪ್ರಸಾದ, ಪರಿಮಳ ಪ್ರಸಾದದ ವ್ಯವಸ್ಥೆಯನ್ನು ಭಕ್ತರಿಗೆ ಕಲ್ಪಿಸಲಾಗಿದೆ. ಕೋವಿಡ್ ಹಿನ್ನೆಲೆ ಸಾಮಾಜಿಕ ಅಂತರ, ಮಾಸ್ಕ್ ಹಾಗೂ ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸುವ ನಿಯಮಪಾಲನೆಗೆ ಒತ್ತುಕೊಡಲಾಗಿದೆ. ಪುಷ್ಕರದ ವೇಳೆ ದಿನಕ್ಕೆ 25 ಸಾವಿರ ಭಕ್ತಾಧಿಗಳು ಬರುವ ಸಾಧ್ಯತೆ ಇದೆ. ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕ ಮುಖ್ಯಮಂತ್ರಿಗಳಿಗೆ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ ಎಂದು ಮಠದ ಪೀಠಾಧಿಪತಿ ಸುಬುಧೇಂದ್ರತೀರ್ಥ ಸ್ವಾಮಿ ತಿಳಿಸಿದ್ದಾರೆ.

ಪುಷ್ಕರ ವೇಳೆ ದೇಶದ ಮೂಲೆ ಮೂಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ಹಿನ್ನೆಲೆ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ಸರ್ಕಾರಗಳಿಗೆ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಮಠ ಮನವಿ ಮಾಡಿದೆ. ಕೋವಿಡ್ ನಿಯಮ ಕಟ್ಟುನಿಟ್ಟಾಗಿ ಪಾಲಿಸಲು ಇಲ್ಲಿನ ಐದು ಘಾಟ್‍ಗಳಲ್ಲಿ ಒಂದು ಘಾಟ್ ನಲ್ಲಿ ಒಂದು ಗಂಟೆಗೆ 60 ಜನ ಸ್ನಾನ ಮಾಡಲು ಅವಕಾಶ ನೀಡಲಾಗುತ್ತದೆ. ಬೆಳಿಗ್ಗೆ 6 ಗಂಟೆಯಿಂದ 6 ಗಂಟೆಯವರೆಗೆ ತುಂಗಾಸ್ನಾನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.

ಮಠದ ಸಿಬ್ಬಂದಿಯಿಂದ ಆವರಣದಲ್ಲಿ ಕೋವಿಡ್ ನಿಯಮ ಪಾಲಿಸುವಂತೆ ಭಕ್ತರಿಗೆ ತಿಳುವಳಿಕೆ ನೀಡಲು ಸಿದ್ಧತೆ ನಡೆದಿದೆ. ವಿವಿಧೆಡೆಯಿಂದ ಪುಣ್ಯ ಸ್ನಾನ ಹಾಗೂ ರಾಯರ ದರ್ಶನಕ್ಕೆ ಬರುವ ಭಕ್ತಾಧಿಗಳಿಗೆ ವಸತಿ ಗೃಹ, ತಾತ್ಕಾಲಿಕ ಶಾಮಿಯಾನ ಕಲ್ಪಿಸಲಾಗುತ್ತಿದೆ. ಪ್ರಾಥಮಿಕ ಚಿಕಿತ್ಸೆ, ಶುದ್ಧ ಕುಡಿಯುವ ನೀರು ಸೇರಿದಂತೆ ಎಲ್ಲಾ ತಯಾರಿಗಳನ್ನು ಮಠದ ಆಡಳಿತ ಮಂಡಳಿ ನಡೆಸಿದೆ.

Click to comment

Leave a Reply

Your email address will not be published. Required fields are marked *