Connect with us

Corona

ರಾಯಚೂರಿನ ಕೊರೊನಾ ಹಾಟ್‍ಸ್ಪಾಟ್ ಗ್ರಾಮ ಸಂಪೂರ್ಣ ಸೋಂಕು ಮುಕ್ತ

Published

on

ರಾಯಚೂರು: ಜಿಲ್ಲೆಯ ತಲಮಾರಿ ಗ್ರಾಮದಲ್ಲಿ ಕಳೆದ ತಿಂಗಳು ಬರೋಬ್ಬರಿ 72 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದವು. ಇದರಿಂದಾಗಿ ಗ್ರಾಮದಲ್ಲಿ ಆತಂಕ ಸೃಷ್ಠಿಯಾಗಿತ್ತು, ಆದರೆ ಗ್ರಾಮಸ್ಥರು, ಜಿಲ್ಲಾಡಳಿತದ ದಿಟ್ಟ ಕ್ರಮದಿಂದಾಗಿ ಈ ಗ್ರಾಮದಲ್ಲಿ ಈಗ ಕೊರೊನಾ ದೂರವಾಗಿದ್ದು ಸೋಂಕು ಮುಕ್ತ ಗ್ರಾಮವಾಗಿದೆ.

ಕೊರೊನಾದಿಂದ ಆಸ್ಪತ್ರೆ ಸೇರಿದವರು ಈಗ ಗುಣಮುಖರಾಗಿ ತಮ್ಮ ನಿತ್ಯ ಕೆಲಸದಲ್ಲಿ ತೊಡಗಿದ್ದಾರೆ. ಇಡೀ ಜಿಲ್ಲೆಗೆ ಕೊರೊನಾ ಹಾಟ್‍ಸ್ಪಾಟ್ ಆಗಿದ್ದ ಗ್ರಾಮ ಈಗ ಮಾದರಿಯಾಗಿದೆ. ಗ್ರಾಮದಲ್ಲಿ ನಡೆದ ಐದು ಮದುವೆಗಳಿಂದ ಹದಿನೈದು ದಿನಗಳಲ್ಲಿ ಗ್ರಾಮದಲ್ಲಿ ಬರೋಬ್ಬರಿ 72 ಜನರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಸುಮಾರು 1,080 ಮನೆಗಳಿರುವ 5,000 ಜನಸಂಖ್ಯೆಯ ತಲಮಾರಿ ಗ್ರಾಮದಲ್ಲಿ ನಿತ್ಯ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಾ ಬಂದಿತ್ತು.

ಒಂದೇ ದಿನ 30 ಜನರಿಗೆ ಸೋಂಕು ದೃಢಪಟ್ಟ ನಂತರ ಏನಾದರೂ ಮಾಡಿ ನಿಯಂತ್ರಿಸಲೇ ಬೇಕೆಂದು ತೀರ್ಮಾನಿಸಿದ ಜಿಲ್ಲಾಡಳಿತ ಪ್ರತ್ಯೇಕವಾಗಿ ಲಾಕ್‍ಡೌನ್ ಘೋಷಣೆ ಮಾಡಿ ಗ್ರಾಮಕ್ಕೆ ಗ್ರಾಮವನ್ನೇ ಸೀಲ್‍ಡೌನ್ ಮಾಡುವ ಮೂಲಕ, ಹೊರಗಿನವರು ಬಾರದಂತೆ, ಗ್ರಾಮದಿಂದ ಹೊರಗಡೆ ಹೋಗದಂತೆ ಕಠಿಣ ಕ್ರಮಕೈಗೊಂಡಿತು. ಅಲ್ಲದೆ ಸಂಪರ್ಕಿತರು, ಗ್ರಾಮದಲ್ಲಿ ವಯಸ್ಸಾದವರ ಗಂಟಲ ದ್ರವ ಪರೀಕ್ಷೆ ಮಾಡಿ ಸೋಂಕಿತರಿಗೆ ಐಸೊಲೇಷನ್ ಮಾಡಿದ್ದು, ಜಿಲ್ಲಾಧಿಕಾರಿಗಳು ಜಿಲ್ಲಾ ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಗ್ರಾಮದಲ್ಲಿ ಕೊರೊನಾ ನಿಯಂತ್ರಣಕ್ಕೆ ಯತ್ನಿಸಿದ್ದರು. ಇದರಿಂದಾಗಿ ಆಗಸ್ಟ್ ಆರಂಭದಿಂದ ಈ ಗ್ರಾಮದಲ್ಲಿ ಸೋಂಕು ಮತ್ತೆ ಪತ್ತೆಯಾಗಿಲ್ಲ.

ಗ್ರಾಮದಲ್ಲಿ ಅಧಿಕ ಪ್ರಮಾಣದಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದ ಇಡೀ ಗ್ರಾಮದಲ್ಲಿ ಆತಂಕ ಮನೆ ಮಾಡಿತ್ತು. ನಂತರ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯ ನಿರ್ಧಾರಕ್ಕೆ ಗ್ರಾಮಸ್ಥರು ಅಗತ್ಯ ಸಹಕಾರ ನೀಡಿದ್ದರು. ಹಾಗಾಗಿ ಇಲ್ಲಿಯ ಸೋಂಕಿತರು ಈಗ ಚಿಕಿತ್ಸೆಯ ನಂತರ ಸಂಪೂರ್ಣವಾಗಿ ಗುಣಮುಖರಾಗಿ ಬಂದಿದ್ದು, ಬಹುತೇಕರು ತಮ್ಮ ತಮ್ಮ ಕೆಲಸದಲ್ಲಿ ನಿರತರಾಗಿದ್ದಾರೆ. ಕೊರೊನಾದಿಂದ ಆತಂಕಗೊಂಡವರು ಈಗ ನಿರಾತಂಕಗೊಂಡಿದ್ದಾರೆ. ಒಟ್ಟು 72 ಸೋಂಕಿತರು ಈಗ ಗುಣಮುಖರಾಗಿ ಬಂದಿದ್ದಾರೆ. ಅವರೆಲ್ಲರನ್ನೂ ಯರಮರಸ್ ನಲ್ಲಿರುವ ಕೊವಿಡ್ ಕೇರ್ ಸೆಂಟರ್ ನಲ್ಲಿ ಆರೈಕೆಗೆ ಇರಿಸಲಾಗಿತ್ತು. ಈಗ ಎಲ್ಲರೂ ಗುಣಮುಖರಾಗಿದ್ದು, ಯಾವುದೇ ಹೊಸ ಪ್ರಕರಣ ದಾಖಲಾಗಿಲ್ಲ.

Click to comment

Leave a Reply

Your email address will not be published. Required fields are marked *