Connect with us

Districts

ರಾಯಚೂರಿನ ನಡುಗಡ್ಡೆ ಗ್ರಾಮಕ್ಕೆ ಮೊಸಳೆ ಕಾಟ – ಜೀವ ಭಯದಲ್ಲೇ ಜನ ನಿತ್ಯ ಓಡಾಟ

Published

on

– ಸೇತುವೆ ಇಲ್ಲದೇ ತೆಪ್ಪದಲ್ಲೇ ವಿದ್ಯಾರ್ಥಿಗಳ ಸಂಚಾರ

ರಾಯಚೂರು: ಜಿಲ್ಲೆಯ ಗ್ರಾಮವೊಂದರ ವಿದ್ಯಾರ್ಥಿಗಳು ಶಾಲೆಗೆ ಹೋದವರು ಮರಳಿ ಬರ್ತಾರೆ ಅನ್ನೋ ನಂಬಿಕೆಯೇ ಇಲ್ಲಾ. ಅದೊಂದು ಭಯದಿಂದ ಈಗಾಗ್ಲೇ ಎಷ್ಟೊ ವಿದ್ಯಾರ್ಥಿಗಳು ಶಾಲೆ ಬಿಟ್ಟು ಮನೆಯಲ್ಲೇ ಉಳಿದಿದ್ದಾರೆ. ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದ ಸೇತುವೆ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಇಲ್ಲಿನ ಗ್ರಾಮಸ್ಥರು ನಿತ್ಯ ಜೀವ ಭಯದಲ್ಲೇ ಓಡಾಡುವಂತಾಗಿದೆ.

ರಾಯಚೂರು ಜಿಲ್ಲೆಯಲ್ಲಿ ಹರಿಯುವ ಕೃಷ್ಣಾ ನದಿಯಲ್ಲಿ ಹಲವಾರು ಜನವಸತಿಯಿರುವ ನಡುಗಡ್ಡೆಗಳಿವೆ. ಒಂದೊಂದು ನಡುಗಡ್ಡೆಯದ್ದೂ ಒಂದೊಂದು ಗೋಳಿನ ಕತೆ. ನಡುಗಡ್ಡೆಗಳಲ್ಲಿಯೇ ದೊಡ್ಡದಾದ ಹಾಗೂ ಹೆಚ್ಚು ಜನಸಂಖ್ಯೆ ಹೊಂದಿರುವ ಕುರ್ವಕುರ್ದಾ ಗ್ರಾಮಸ್ಥರು ಈಗ ಮೊಸಳೆ ಕಾಟಕ್ಕೆ ಸಿಲುಕಿ ತತ್ತರಿಸಿ ಹೋಗಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳಂತೂ ಮೊಸಳೆ ಭಯಕ್ಕೆ ಜೀವವನ್ನ ಕೈಯಲ್ಲಿಡಿದೆ ತೆಪ್ಪದಲ್ಲಿ ಡೊಂಗರಾಂಪುರ ಗ್ರಾಮದ ಶಾಲೆಗೆ ಬರುತ್ತಾರೆ. ಕುರ್ವಕುರ್ದಾದಲ್ಲಿ ಐದನೇ ತರಗತಿವರೆಗೆ ಮಾತ್ರ ಶಾಲೆಯಿದ್ದು ಗ್ರಾಮದಿಂದ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ತೆರಳಲು ತೆಪ್ಪವನ್ನೇ ಅವಲಂಬಿಸಿದ್ದಾರೆ.

ಇತ್ತೀಚೆಗೆ ವಿದ್ಯಾರ್ಥಿಯೊಬ್ಬನನ್ನ ಮೊಸಳೆ ತಿಂದು ಹಾಕಿತ್ತು. ಇದರಿಂದ ಎಷ್ಟೋ ವಿದ್ಯಾರ್ಥಿಗಳು ನದಿದಾಟಿ ಶಾಲೆಗೆ ಬರಬೇಕು ಎಂಬ ಭಯದಿಂದಲೇ ಶಾಲೆ ಬಿಟ್ಟು ಮನೆಯಲ್ಲೇ ಉಳಿದಿದ್ದಾರೆ. ಮೊಸಳೆ ಭಯದಿಂದ ಸರಿಯಾದ ಸಮಯಕ್ಕೆ ತೆಪ್ಪ ನಡೆಸುವವರು ಸಹ ಸಿಗುತ್ತಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಶಾಲೆಗೆ ಹೋಗಲು ಆಗದೆ ಪರದಾಡ್ತಿದ್ದಾರೆ. ಸೇತುವೆ ಕಾಮಗಾರಿ ಕಾರ್ಯ ಪೂರ್ಣಗೊಳ್ಳದಿರುವುದೇ ಈ ಎಲ್ಲಾ ಅವಾಂತರಗಳಿಗೆ ಕಾರಣವಾಗಿದೆ.

10 ವರ್ಷಗಳ ಹಿಂದೆ ಆರಂಭವಾದ ಸೇತುವೆ ಕಾಮಗಾರಿ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಕಳೆದ ಬಾರಿಯ ಪ್ರವಾಹದ ಹೊಡೆತಕ್ಕೆ ಅರ್ಧ ಕಾಮಗಾರಿ ಕಂಡಿದ್ದ ಸೇತುವೆಯ ಸ್ಲಾಬ್‍ಗಳು ನದಿಗೆ ಉರುಳಿ ಬಿದ್ದಿದ್ದು, ಸರ್ಕಾರ ಮಾತ್ರ ಪುನಃ ಕಾಮಗಾರಿ ಕೈಗೆತ್ತಿಕೊಂಡಿಲ್ಲ. ಹೀಗಾಗಿ ಪ್ರತಿಯೊಂದಕ್ಕೂ ವಿದ್ಯಾರ್ಥಿಗಳು ಸೇರಿ ನಡುಗಡ್ಡೆಯ ನೂರಾರು ಜನ ತೆಪ್ಪಗಳನ್ನೇ ಅವಲಂಬಿಸುವಂತಾಗಿದ್ದು, ಸುಮಾರು 750 ಎಕರೆ ಕೃಷಿ ಭೂಮಿ ಇರುವುದರಿಂದ ಜನ ನಡುಗಡ್ಡೆಯಲ್ಲೇ ಬದುಕು ಸಾಗಿಸುತ್ತಿದ್ದಾರೆ. ಬೀಜ, ಗೊಬ್ಬರ, ಕೃಷಿ ಸಲಕರಣೆ ತರಲು, ಬೆಳೆಗಳನ್ನು ಮಾರುಕಟ್ಟೆ ಸಾಗಿಸಲು ಸಹ ತೆಪ್ಪವನ್ನೇ ನಂಬಿಕೊಂಡಿದ್ದಾರೆ. ಆದರೆ ಇತ್ತೀಚೆಗೆ ಮೊಸಳೆ ಕಾಟ ಬೇರೆ ಹೆಚ್ಚಾಗಿರುವುದು ಜನರ ಬದುಕನ್ನ ಮತ್ತಷ್ಟು ತಲ್ಲಣಗೊಳಿಸಿದೆ.

ಸೇತುವೆ ಕಾಮಗಾರಿ ಆರಂಭವಾದ ಬಳಿಕ ಮೂವರು ಶಾಸಕರು ಬದಲಾದರೂ ನಮ್ಮ ಹಣೆಬರಹ ಮಾತ್ರ ಬದಲಾಗಿಲ್ಲ ಅಂತ ಇಲ್ಲಿನ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಗ್ರಾಮದ ಸ್ಥಿತಿ ಸರ್ಕಾರಗಳು, ಜನಪ್ರತಿನಿಧಿಗಳು, ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಂತಿದೆ. ಇನ್ನಾದ್ರೂ ಸರ್ಕಾರ ಇಲ್ಲಿನ ಜನರ ಸಮಸ್ಯೆ ಆಲಿಸಲು ಮುಂದಾಗಬೇಕಿದ್ದು, ಅರ್ಧಕ್ಕೆ ನಿಂತಿರುವ ಸೇತುವೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ಇಲ್ಲಿನ ಗ್ರಾಮಸ್ಥರ ಕಣ್ಣೀರು ಒರೆಸಬೇಕಿದೆ.

Click to comment

Leave a Reply

Your email address will not be published. Required fields are marked *