Wednesday, 17th July 2019

ಸಿಎಂಗೆ ಸೊಳ್ಳೆ ಕಚ್ಚಬಾರದೆಂದು ಸಿಬ್ಬಂದಿಯಿಂದ 7 ದಿನ ನಿರಂತರ ಫಾಗಿಂಗ್

ರಾಯಚೂರು: ಗ್ರಾಮ ವಾಸ್ತವ್ಯ ಹೂಡಲಿರುವ ಸಿಎಂ ಅವರಿಗೆ ಸೊಳ್ಳೆ ಕಚ್ಚಬಾರದೆಂದು ಶಾಲೆಯ ಸುತ್ತ ಕಳೆದ ಏಳು ದಿನಗಳಿಂದ ಫಾಗಿಂಗ್ ಮಾಡಲಾಗುತ್ತಿದೆ.

ಗ್ರಾಮವಾಸ್ತವ್ಯ ಮುಂದುವರಿಸಿರುವ ಮುಖ್ಯಮಂತ್ರಿಗಳು ಬುಧವಾರ ರಾಯಚೂರಿನ ಮಾನ್ವಿ ತಾಲೂಕಿನ ಕರೇಗುಡ್ಡ ಗ್ರಾಮದಲ್ಲಿ ಜನತಾದರ್ಶನ ಹಾಗೂ ಗ್ರಾಮ ವಾಸ್ತವ್ಯ ನಡೆಸಲಿದ್ದಾರೆ. ಹೀಗಾಗಿ ಇಂದು ಸಂಜೆ ಕೂಡ ಗ್ರಾಮ ಪಂಚಾಯತಿ ಸಿಬ್ಬಂದಿಯು ಶಾಲೆಯ ಕೊಠಡಿಗಳು ಹಾಗೂ ಆವರಣದಲ್ಲಿ ಫಾಗಿಂಗ್ ಮಾಡಿದೆ.

ಬೆಂಗಳೂರು ಕಂಟೋನ್ಮೆಂಟ್‍ನಿಂದ ರಾತ್ರಿ 8.45ಕ್ಕೆ ಈಗಾಗಲೇ ಉದ್ಯಾನ ಎಕ್ಸ್‍ಪ್ರೆಸ್ ಟ್ರೈನ್ ಮೂಲಕ ಪ್ರಯಾಣ ಬೆಳೆಸಿರುವ ಸಿಎಂ ಬೆಳಗ್ಗೆ ರಾಯಚೂರು ರೈಲ್ವೇ ನಿಲ್ದಾಣ ತಲುಪಲಿದ್ದಾರೆ. ಅಲ್ಲಿಂದ ನೇರವಾಗಿ ಯರಮರಸ್ ಸರ್ಕೀಟ್ ಹೌಸ್‍ಗೆ ಹೋಗಿ ವಿಶ್ರಾಂತಿ ಪಡೆಯಲಿದ್ದಾರೆ. ನಂತರ ಬೆಳಗ್ಗೆ 8:30ಕ್ಕೆ ಕೆಎಸ್‍ಆರ್ ಟಿಸಿ ಬಸ್‍ನಲ್ಲಿ ಪ್ರಯಾಣಿಸಿ ವಾಸ್ತವ್ಯ  ಹೂಡಲಿರುವ ಕರೇಗುಡ್ಡ ಗ್ರಾಮಕ್ಕೆ ಬರಲಿದ್ದಾರೆ.

ಮುಖ್ಯಮಂತ್ರಿಗಳು ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ಉದ್ಘಾಟಿಸಿದ ಮೇಲೆ ವೇದಿಕೆ ಕಾರ್ಯಕ್ರಮ ಮುಗಿಸಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ. ರಾತ್ರಿ 8 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ 10 ಗಂಟೆಗೆ ಊಟ ಮಾಡಿ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಮಾಡಲಿದ್ದಾರೆ. ನೀರಾವರಿಗಾಗಿ ಆಗ್ರಹಿಸಿ ಜಿಲ್ಲೆಯ 25ಕ್ಕೂ ಹೆಚ್ಚು ಸ್ವಾಮೀಜಿಗಳು ಮನವಿ ಸಲ್ಲಿಸಲಿದ್ದಾರೆ.

ಮಳೆಯಾಗಿದ್ದರಿಂದ ಕಲಬುರಗಿಯ ಹೆರೂರು ಬಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ರದ್ದಾಗಿತ್ತು. ಹೀಗಾಗಿ, 600*300 ಅಡಿ ವಿಸ್ತೀರ್ಣದ ವಾಟರ್ ಪ್ರೂಫ್ ಬೃಹತ್ ಪೆಂಡಾಲ್ ಹಾಕಲಾಗಿದೆ. ಪೊಲೀಸ್ ಭದ್ರತೆ ಹಾಗೂ ವಿವಿಧ ಅಧಿಕಾರಿಗಳು ಈಗಾಗಲೇ ಕರೇಗುಡ್ಡ ಗ್ರಾಮಕ್ಕೆ ಆಗಮಿಸಿದ್ದಾರೆ.

Leave a Reply

Your email address will not be published. Required fields are marked *