Connect with us

Districts

ಸಾವಿನ ದವಡೆಯಿಂದ ಕ್ಯಾನ್ಸರ್ ರೋಗಿ ಪಾರು – 3 ಕೆ.ಜಿ ಗಡ್ಡೆಯನ್ನ ಹೊರ ತೆಗೆದ ವೈದ್ಯರು

Published

on

ರಾಯಚೂರು: ಸುಮಾರು ತಿಂಗಳುಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವೃದ್ಧೆಯ ಹೊಟ್ಟೆಯಿಂದ ಮೂರು ಕೆ.ಜಿ. ತೂಕದ ಕ್ಯಾನ್ಸರ್ ಗಡ್ಡೆಯನ್ನ ರಾಯಚೂರಿನ ವೈದ್ಯರು ಯಶಸ್ವಿಯಾಗಿ ಹೊರತೆಗೆದು ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಅಪರೂಪದ ಶಸ್ತ್ರಚಿಕಿತ್ಸೆ ಇದಾಗಿದ್ದು ರಾಯಚೂರಿನಲ್ಲಿ ಮೊದಲ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.

ಜಿಲ್ಲೆಯ ಸಿಂಧನೂರು ತಾಲೂಕಿನ ಬಳಗಾನೂರು ಗ್ರಾಮದ 60 ವರ್ಷದ ವೃದ್ಧೆ ಬೇಗಂ ಬೀ ಸುಮಾರು 8 ತಿಂಗಳುಗಳಿಂದ ಹೊಟ್ಟೆ ನೋವಿನಿಂದ ನರಳುತ್ತಿದ್ದರು. ಹೊಟ್ಟೆಯಲ್ಲಿದ್ದ ಗಡ್ಡೆಯ ಗಾತ್ರ ನೋಡಿ ಸುಮಾರು ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿರಲಿಲ್ಲ. ಹುಬ್ಬಳ್ಳಿ, ಬಾಗಲಕೋಟೆ ಸೇರಿ ವಿವಿಧೆಡೆ ತೋರಿಸಿದರು ಪ್ರಯೋಜನವಾಗಿರಲಿಲ್ಲ. ಕುಟುಂಬದವರಿಗೆ ಬೇಗಂ ಬೀಯನ್ನು ಉಳಿಸಿಕೊಳ್ಳುವ ಭರವಸೆಯೇ ಹೊರಟುಹೋಗಿತ್ತು. ವೈದ್ಯರು ಸಹ ಕೈ ಚೆಲ್ಲಿದ್ದರು. ಆದರೆ ಈಗ ರಾಯಚೂರಿನ ಭಂಡಾರಿ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿ ಹೊಟ್ಟೆಯಲ್ಲಿದ್ದ ಮೂರು ಕೆ.ಜಿ ತೂಕದ ಕ್ಯಾನ್ಸರ್ ಗಡ್ಡೆಯನ್ನು ಹೊರಗೆ ತೆಗೆದಿದ್ದಾರೆ.

ಇದಕ್ಕಿಂತಲೂ ದೊಡ್ಡ ಗಾತ್ರದ ಗಡ್ಡೆಗಳನ್ನು ಗರ್ಭಕೋಶ ಸೇರಿ ದೇಹದ ಇತರ ಭಾಗದಿಂದ ಯಶಸ್ವಿಯಾಗಿ ಹೊರ ತೆಗೆದ ಉದಾಹರಣೆಗಳಿವೆ. ಆದರೆ ಜಠರ, ಸಣ್ಣಕರಳು ಸೇರಿದಂತೆ ದೇಹದ ಬಹು ಅಂಗಗಳ ರಕ್ತನಾಳಗಳಿಗೆ ತೊಂದರೆಯಾಗದಂತೆ ದೊಡ್ಡದಾಗಿ ಬೆಳೆದ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯುವುದೇ ವೈದ್ಯರಿಗೆ ದೊಡ್ಡ ಸವಾಲಾಗಿತ್ತು. ತಜ್ಞ ವೈದ್ಯ ಡಾ.ರಮೇಶ್ ಸಿ ಸಾಗರ್ ನೇತೃತ್ವದ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದೆ.

ಶಸ್ತ್ರಚಿಕಿತ್ಸೆ ಮಾಡದಿದ್ದರೆ ಕೆಲವೇ ದಿನಗಳಲ್ಲಿ ಪ್ರಾಣಾಪಾಯ ಎದುರಿಸಬೇಕಿದ್ದ ವೃದ್ಧೆ ಈಗ ಗುಣಮುಖಳಾಗುತ್ತಿದ್ದಾರೆ. ರಾಯಚೂರಿನಲ್ಲಿ ಈ ಮೊದಲು ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಸೌಲಭ್ಯ ಇರಲಿಲ್ಲ. ಬೆಂಗಳೂರು, ಹೈದ್ರಾಬಾದ್‍ಗೆ ಹೋಗಬೇಕಿದ್ದ ರೋಗಿಗಳಿಗೆ ಈಗ ಜಿಲ್ಲೆಯಲ್ಲೇ ಚಿಕಿತ್ಸೆ ಸಿಗುವಂತಾಗಿದೆ.