Wednesday, 17th July 2019

ಪರೀಕ್ಷೆ ಬರೆಯದ ಮೋದಿ ವಿದ್ಯಾರ್ಥಿಗಳಿಗೆ ಪಾಠ ಹೇಳಲು ಹೋದ್ರು: ರಾಗಾ ವ್ಯಂಗ್ಯ

ನವದೆಹಲಿ: ಲೋಕಸಭೆ ಅಧಿವೇಶನ ನಡೆಯುತ್ತಿದ್ದು, ಸದನದಲ್ಲಿ ಪಕ್ಷ-ವಿಪಕ್ಷಗಳು ಆರೋಪ ಪ್ರತ್ಯಾರೋಪದಲ್ಲಿ ತೊಡಗಿಕೊಂಡಿವೆ. ಸದನದಲ್ಲಿ ಮಾತ್ರವಲ್ಲದೇ ಟ್ವಿಟ್ಟರ್ ನಲ್ಲಿಯೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ವಾಗ್ದಾಳಿಯನ್ನು ಮುಂದುವರಿಸಿದ್ದಾರೆ. ಬುಧವಾರದ ಸದನಕ್ಕೆ ಪ್ರಧಾನಿ ಮೋದಿ ಗೈರಾಗಿದ್ದರಿಂದ ರಫೇಲ್ ಚರ್ಚೆಗೆ ಮಾತನಾಡಲು ಧೈರ್ಯವಿಲ್ಲದೇ ಮನೆಯ ಕೋಣೆಯೊಂದರಲ್ಲಿ ಅಡಗಿ ಕುಳಿತಿದ್ದಾರೆ ಅಂತಾ ವ್ಯಂಗ್ಯಮಾಡಿದ್ದರು.

ಇಂದು ಮೋದಿಯವರು ಪಂಜಾಬ್ ರಾಜ್ಯದ ಲವಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ಸಂಬಂಧ ಟ್ವಿಟ್ಟರ್ ನಲ್ಲಿ ಬಿಜೆಪಿಯ ಕಾಲೆಳೆದಿರುವ ರಾಹುಲ್ ಗಾಂಧಿ, ಪ್ರಧಾನಿಗಳಿಗೆ ಮೊದಲೇ ಪ್ರಶ್ನೆಗಳನ್ನು ನೀಡುವುದರ ಜೊತೆಗೆ ಪುಸ್ತಕದ ಸಹಾಯದೊಂದಿಗೆ ರಫೇಲ್ ಪರೀಕ್ಷೆಯನ್ನು ಎದುರಿಸಬೇಕಿತ್ತು. ಆದ್ರೆ ಪರೀಕ್ಷೆ ಬರೆಯದೇ ಲವಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಮೋದಿ ಉಪನ್ಯಾಸ ನೀಡಲು ಪಂಜಾಬ್ ಗೆ ತೆರಳಿದ್ದಾರೆ. ಅಲ್ಲಿರುವ ವಿದ್ಯಾರ್ಥಿಗಳು ನಾನು ಬುಧವಾರ ಕೇಳಿದ ನಾಲ್ಕು ಪ್ರಶ್ನೆಗಳನ್ನು ಪ್ರಧಾನಿಗಳಿಗೆ ಕೇಳಿ ಎಂದು ಮನವಿ ಮಾಡಿಕೊಂಡಿದ್ದಾರೆ.

ನಾಲ್ಕು ಪ್ರಶ್ನೆಗಳು:
ಬುಧವಾರ ನಡೆದ ಸದನದಲ್ಲಿ ಕಾಂಗ್ರೆಸ್ ರಫೇಲ್ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಲು ಸಮಯಾವಕಾಶ ಕೇಳಿತ್ತು. ಆರೋಪ-ಪ್ರತ್ಯಾರೋಪಗಳ ನಡುವೆ ಗೋವಾ ಸಿಎಂ, ಮಾಜಿ ರಕ್ಷಣಾ ಸಚಿವ ಆಪ್ತರೊಂದಿಗೆ ರಫೇಲ್ ಬಗ್ಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋವನ್ನು ಕಾಂಗ್ರೆಸ್ ರಿಲೀಸ್ ಮಾಡಿತ್ತು. ಪ್ರಧಾನಿಗಳು ನಮ್ಮ ಪ್ರಶ್ನೆಗಳಿಗೆ ಉತ್ತರಿಸಬೇಕೆಂದು ವಿಪಕ್ಷ ನಾಯಕರು ಬಿಗಿಪಟ್ಟು ಹಿಡಿದಿದ್ದರು. ಸದನದ ಬಳಿಕ ಸುದ್ದಿಗೋಷ್ಠಿ ನಡೆಸಿದ್ದ ರಾಹುಲ್ ಗಾಂಧಿ, ರಫೇಲ್ ವಿಚಾರವಾಗಿ ಬಿಜೆಪಿ ವಿರುದ್ಧ ಸಾಲು ಸಾಲು ಅರೋಪಗಳನ್ನು ಮಾಡಿದ್ದರು. ಕೊನೆಗೆ ಟ್ವಿಟ್ಟರ್ ನಲ್ಲಿ ನಾಳೆಯ ಅಧಿವೇಶನಕ್ಕೆ ಈ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧರಾಗಿ ಬನ್ನಿ ಎಂದು ಸವಾಲು ಹಾಕಿದ್ದರು.

ಪ್ರಶ್ನೆ 1. 36 ಏರ್ ಕ್ರಾಫ್ಟ್ ಬದಲಾಗಿ 126 ಏರ್ ಕ್ರಾಫ್ಟ್ ಖರೀದಿಸುವ ಅವಶ್ಯಕತೆ ಏನಿತ್ತು?
ಪ್ರಶ್ನೆ 2. ಪ್ರತಿ ವಿಮಾನಕ್ಕೆ 560 ಕೋಟಿಯ ಬದಲಾಗಿ 1,600 ಕೋಟಿ ನೀಡಿದ್ಯಾಕೆ?
ಪ್ರಶ್ನೆ 3. ಹೆಚ್‍ಎಎಲ್ ಬದಲಾಗಿ ಅನಿಲ್ ಅಂಬಾನಿ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ಯಾಕೆ?
ಪ್ರಶ್ನೆ 4. ಈ ಎಲ್ಲ ಬದಲಾವಣೆ ಏನನ್ನು ತೋರಿಸುತ್ತದೆ?

ಪ್ರಧಾನಿಗಳು ಸಂಸತ್ತಿನ ನಾಯಕರಾಗಿದ್ದು, ನಮ್ಮೆಲ್ಲರ ಪ್ರಶ್ನೆಗಳಿಗೆ ಉತ್ತರ ನೀಡಬೇಕಿದೆ. ಸಂಸತ್ ನಾಯಕರಾಗಿರುವ ಮೋದಿಯವರು ಸದನದಲ್ಲಿಯೇ ಇಲ್ಲ. ತಮ್ಮ ಗೆಳೆಯನಿಗೆ ಸಹಾಯ ಮಾಡಿದ್ದಾರೆ ಎಂಬ ನೇರ ಆರೋಪಗಳು ಪ್ರಧಾನಿಯವರ ಮೇಲಿದೆ. ಸದನದಲ್ಲಿ ತಮ್ಮ ಪರ ವಕಾಲತ್ತು ವಹಿಸಲು ಬೇರೆಯವರನ್ನು ನೇಮಿಸುವುದು ಸೂಕ್ತವಲ್ಲ ಎಂದು ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಬಿಜೆಪಿಯನ್ನು ಪ್ರಶ್ನೆ ಮಾಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *