Connect with us

Latest

ನಾವಿಬ್ಬರು, ನಮಗಿಬ್ಬರು- ನಾಲ್ವರಿಂದ ದೇಶದ ಆಡಳಿತ: ಕೇಂದ್ರದ ವಿರುದ್ಧ ರಾಹುಲ್ ಕಟು ಟೀಕೆ

Published

on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ನಾವಿಬ್ಬರು, ನಮಗಿಬ್ಬರು ಎನ್ನುವ ತತ್ವದಡಿ ದೇಶವನ್ನು ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಸಂಸತ್‍ನಲ್ಲಿ ಆಕ್ರೋಶಭರಿತರಾಗಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ಅವರು, ನಾವಿಬ್ಬರು, ನಮಗಿಬ್ಬರು ತತ್ವದ ಆಧಾರದಲ್ಲಿಯೇ ಬಿಜೆಪಿ ಸರ್ಕಾರ ನಗದು ಅಮಾನ್ಯೀಕರಣ ಮಾಡಿದೆ, ಜಿಎಸ್‍ಟಿ ತಂದಿದೆ, ಲಾಕ್‍ಡೌನ್ ಹಾಗೂ ಇತ್ತೀಚೆಗೆ ಕೃಷಿ ಕಾನೂನುಗಳನ್ನು ಜಾರಿಗೆ ತಂದಿದೆ ಎಂದು ಕಿಡಿಕಾರಿದ್ದಾರೆ.

ಜನಸಂಖ್ಯೆ ನಿಯಂತ್ರಣಕ್ಕೆ ಈ ಹಿಂದೆ ಕುಟುಂಬ ಕಲ್ಯಾಣ ಇಲಾಖೆಯಿಂದ ನಾವಿಬ್ಬರು, ನಮಗಿಬ್ಬರು ಘೋಷ ವಾಕ್ಯವನ್ನು ಜಾರಿಗೆ ತರಲಾಗಿತ್ತು. ಇದೇ ಘೋಷವಾಕ್ಯದ ಮೂಲಕ ಇದೀಗ ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಆಕ್ರಮಣ ಮಾಡಿದ್ದಾರೆ. ನೇರವಾಗಿ ಯಾರ ಹೆಸರನ್ನೂ ಹೇಳದೆ, ನಾವಿಬ್ಬರು, ನಮಗಿಬ್ಬರು ಯಾರೆಂದು ಎಲ್ಲರಿಗೂ ತಿಳಿದಿದೆ ಎಂದರು.

ಇತ್ತೀಚೆಗೆ ರೈತರು ಮಾತ್ರ ಹೋರಾಟ ನಡೆಸಿದ್ದಾರೆ. ಆದರೆ ಇದು ಕೇವಲ ರೈತರ ಹೋರಾಟ ಮಾತ್ರವಲ್ಲ. ಇದು ಇಡೀ ದೇಶದ ಹೋರಾಟವಾಗಿದೆ. ಹೋರಾಟದ ಪ್ರತಿನಿಧಿಗಳಾಗಿ ರೈತರು ಮಾತ್ರ ಭಾಗವಹಿಸಿದ್ದಾರೆ. ಇದು ಕೇವಲ ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟವಾಗಿದೆ. ಈ ಕಾನೂನುಗಳು ರೈತರನ್ನು ಹಾಳು ಮಾಡುವುದು ಮಾತ್ರವಲ್ಲ, ಮಧ್ಯವರ್ತಿಗಳನ್ನು ಮುಗಿಸಿ, ಸಣ್ಣ ಅಂಗಡಿಯವರು, ಸಣ್ಣ ಉದ್ಯಮಿಗಳ ಮೇಲೆ ವಿನಾಶಕಾರಿ ಪರಿಣಾಮ ಬೀರುತ್ತವೆ. ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಭಾರೀ ಹೊಡೆತ ಬೀಳಲಿದೆ. ಈ ಕಾನೂನುಗಳು ಗ್ರಾಮೀಣ ಆರ್ಥಿಕತೆಯನ್ನು ನಾಶಪಡಿಸುತ್ತವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಭಾರತ ಬೆಳವಣಿಗೆ ಹೊಂದಲು ಸಾಧ್ಯವಾಗುವುದಿಲ್ಲ, ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಇದಕ್ಕೆ ಕಾರಣ ಹಮ್ ದೋ, ಹಮಾರೆ ದೋ ಪದ್ಧತಿ. ಇವರ ಲಾಭಕ್ಕಾಗಿ ನಮ್ಮ ದೇಶದ ಬೆನ್ನಲುಬನ್ನು ಸರ್ವ ನಾಶ ಮಾಡಲಾಗುತ್ತಿದೆ ಎಂದರು.

ರಾಹುಲ್ ಗಾಂಧಿ ಮಾತನಾಡುವುದನ್ನು ಮುಗಿಸುವ ಸಂದರ್ಭದಲ್ಲಿ ಹುತಾತ್ಮ ರೈತರಿಗೆ 2 ನಿಮಿಷ ಮೌನಾಚರಣೆ ನಡೆಸಿದರು. ಸದನದ ಒಪ್ಪಿಗೆ ಪಡೆಯದೆ ಮೌನಾಚರಣೆ ಆಚರಿಸಿದ್ದಕ್ಕೆ ಸ್ಪೀಕರ್ ಓಂ ಬಿರ್ಲಾ ಅವರು ವಿರೋಧ ಪಕ್ಷಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು.

Click to comment

Leave a Reply

Your email address will not be published. Required fields are marked *