Connect with us

Bengaluru City

ಪೌರ ಕಾರ್ಮಿಕರೊಂದಿಗೆ ತುಪ್ಪದ ಬೆಡಗಿ ಚಾಯ್ ಪೇ ಚರ್ಚಾ

Published

on

ಬೆಂಗಳೂರು: ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟಿವ್ ಆಗಿದ್ದು, ತಮ್ಮ ವಿಭಿನ್ನ ರೆಸಿಪಿ ಹಾಗೂ ಬ್ಯೂಟಿ ಟಿಪ್ಸ್ ಗಳ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಸದಾ ಒಂದಿಲ್ಲೊಂದು ರೆಸಿಪಿಯನ್ನು ನೆಟ್ಟಿಗರಿಗೆ ಪರಿಚಯಿಸುತ್ತಾರೆ. ಈ ಮೂಲಕ ಆಹಾರ ಪ್ರಿಯರನ್ನು ಸೆಳೆಯುತ್ತಿರುತ್ತಾರೆ. ಇದೀಗ ವಿಭಿನ್ನ ಪೋಸ್ಟ್ ಮೂಲಕ ಗಮನಸೆಳೆದಿದ್ದಾರೆ.

ಕೊರೊನಾ ಭೀತಿ ಹಿನ್ನೆಲೆ ಎಲ್ಲ ನಟ, ನಟಿಯರು ಸ್ವಯಂ ದಿಗ್ಬಂಧನ ವಿಧಿಸಿಕೊಂಡಿದ್ದು, ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ನಟಿ ರಾಗಿಣಿ ಸಹ ಪುಸ್ತಕ ಓದುವುದು, ವಿಭಿನ್ನ ರೆಸಿಪಿ ಮಾಡುವುದು, ಹಲವು ಬ್ಯೂಟಿ ಟಿಪ್ಸ್‍ಗಳ ಕುರಿತು ಮಾಹಿತಿ ನೀಡುತ್ತಿದ್ದಾರೆ. ಇತ್ತೀಚೆಗೆ ತಮ್ಮ ತಾಯಿ ಮಾಡಿದ ಪೀ ಪಲಾವ್ ಕುರಿತು ಮಾಹಿತಿ ಹಂಚಿಕೊಂಡಿದ್ದರು. ನೀವು ಟ್ರೈ ಮಾಡಿ ಎಂದು ಅಭಿಮಾನಿಗಳಿಗೆ ತಿಳಿಸಿದ್ದರು.

ಹೋಮ್ ಕ್ವಾರೆಂಟೈನ್ ಹಿನ್ನೆಲೆ ಕೂದಲು, ಚರ್ಮ, ಸೌಂದರ್ಯ, ಫಿಟ್ನೆಸ್ ಹೀಗೆ ಹಲವು ವಿಚಾರದ ಕುರಿತು ಗಮನಹರಿಸುತ್ತಿದ್ದಾರೆ. ಇದೆಲ್ಲರ ಮಧ್ಯೆ ಇನ್‍ಸ್ಟಾಗ್ರಾಮ್‍ನಲ್ಲಿ ವಿಭಿನ್ನ ಪೋಸ್ಟ್ ಒಂದನ್ನು ಮಾಡಿದ್ದು, ಪೌರ ಕಾರ್ಮಿಕರೊಂದಿಗೆ ಚರ್ಚೆ ಮಾಡಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಪೌರ ಕಾರ್ಮಿಕರ ನಿತ್ಯದ ಬದುಕು ಹಾಗೂ ಅವರ ಆಗುಹೋಗುಗಳ ಕುರಿತು ವಿಚಾರಿಸಿದ್ದಾರೆ.

ಆರೋಗ್ಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿಯೂ ವೈದ್ಯರು, ನರ್ಸ್, ಪೌರ ಕಾರ್ಮಿಕರು ಹಾಗೂ ಮಾಧ್ಯಮದವರು ಯಾವುದೇ ಭಯವಿಲ್ಲದೆ ಕಾರ್ಯನಿರ್ವಹಿಸುತ್ತಿದ್ದು, ಈ ಕುರಿತು ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೇ ವೇಳೆ ರಾಗಿಣಿಯವರು ಸಹ ಪೌರ ಕಾರ್ಮಿಕರೊಂದಿಗೆ ಚರ್ಚೆ ನಡೆಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಪೋಸ್ಟ್ ನಲ್ಲಿ ಬರೆದುಕೊಂಡಿರುವ ಅವರು, ಇಂದು ನಾನು ಒಂದು ಮುಖ್ಯವಾದ ನಿರ್ಧಾರ ಮಾಡಿದೆ. ಬಿಬಿಎಂಪಿ ಯಲಹಂಕದ ಪೌರ ಕಾರ್ಮಿಕರೊಂದಿಗೆ ಚಾಯ್ ಪೇ ಚರ್ಚಾ ಮಾಡಿದೆ. ಕಸ ಸ್ವಚ್ಛಗೊಳಿಸಲು ಹಾಗೂ ಗಾರ್ಬೇಜ್ ಕೊಂಡೊಯ್ಯಲು ಎರಡು ದಿನಕ್ಕೊಮ್ಮೆ ಇವರು ಬರುತ್ತಾರೆ. ಈ ಹಿಂದೆ ಸಹ ಇವರನ್ನು ನೋಡುತ್ತಿದ್ದೆ, ಆದರೆ ಇವರೊಂದಿಗೆ ಮಾತನಾಡಲು ಅವಕಾಶ ಸಿಕ್ಕಿರಲಿಲ್ಲ. ಇಂತಹ ಅದ್ಭುತ ವ್ಯಕ್ತಿಗಳು ಯಾವುದೇ ಸ್ವಾರ್ಥವಿಲ್ಲದೆ ನಮಗಾಗಿ ಕೆಲಸ ಮಾಡುತ್ತಿದ್ದಾರೆ. ಮುಗ್ದ ನಗುವಿನ ಇವರ ಮುಖ ಹಾಗೂ ನಡವಳಿಕೆ ಇಷ್ಟವಾಯಿತು. ಜೀವನದ ಬಗ್ಗೆ ಇವರಿಂದ ನೀವು ತುಂಬಾ ಕಲಿಯುತ್ತೀರಿ. ಈ ಕ್ಷಣ ಮನಮುಟ್ಟಿತು ಎಂದು ಪೋಸ್ಟ್ ಮಾಡಿದ್ದಾರೆ.

ಇವರು ಎರಡು ದಿನಕ್ಕೊಮ್ಮೆ ಬರುತ್ತಾರೆ. ನಾನೂ ಸಹ ನಾಲ್ಕೈದು ಬಾರಿ ನೋಡಿದ್ದೇನೆ. ಸ್ವಾರ್ಥವಿಲ್ಲದ ಕೆಲಸ ಹೀಗಿರುತ್ತದೆ. ಇದನ್ನು ನೋಡಿದಾಗ ತುಂಬಾ ಖುಷಿಯಾಗುತ್ತದೆ. ಹೀಗಾಗಿ ಇವರಿಗೊಂದು ಥ್ಯಾಂಕ್ಸ್ ಹೇಳಲು ಬಂದೆ. ಬಿಬಿಎಂಪಿಯವರು ತುಂಬಾ ಕಷ್ಟಪಡುತ್ತಿದ್ದಾರೆ. ಹೀಗಾಗಿ ಬೆಂಗಳೂರನ್ನು ಇಷ್ಟು ಸ್ವಚ್ಛವಾಗಿಡಲು ಸಾಧ್ಯವಾಗಿದೆ. ಮುಂದಿನ ಸಾರಿ ಬಂದಾಗ ನಮ್ಮ ಮನೆಗೆ ಬನ್ನಿ ಕುಳಿತು ಊಟ ಮಾಡೋಣ, ಥ್ಯಾಂಕ್ಯೂ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.