Monday, 24th June 2019

Recent News

ರಫೇಲ್ ಡೀಲ್ ಬಗ್ಗೆ ಸುಮ್ನೆ ಮಾತಾಡ್ಬೇಡಿ- ಕಾಂಗ್ರೆಸ್ ನಾಯಕರಿಗೆ ರಿಲಯನ್ಸ್ ನೋಟಿಸ್

ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಬಹುದೊಡ್ಡ ಹಗರಣ ನಡೆದಿದ್ದು, ಹಗರಣದಲ್ಲಿ ಸಂಸ್ಥೆ ಭಾಗಿಯಾಗಿದೆ ಎಂದು ಆರೋಪ ಮಾಡುತ್ತಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ರಿಲಯನ್ಸ್ ನೋಟಿಸ್ ಜಾರಿ ಮಾಡಿದೆ.

ರಫೇಲ್ ಯುದ್ಧ ವಿಮಾನ ಖರೀದಿ ಸಂಬಂಧಿಸಿದಂತೆ ಸಂಸ್ಥೆಯ ಕುರಿತು ಆರೋಪ ಮಾಡುವ ವೇಳೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಲು ತಿಳಿಸಿರುವ ಸಂಸ್ಥೆ, ಈ ಕುರಿತು ಕಾನೂನು ಕ್ರಮ ಜರುಗಿಸುವ ಕುರಿತು ಎಚ್ಚರಿಕೆ ನೀಡಿದೆ.

ರಫೇಲ್ ಯುದ್ಧ ವಿಮಾನ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ತಪ್ಪು ಮಾಹಿತಿ ನೀಡಿದ್ದಾರೆ. ಅವರು ಮಾಡುತ್ತಿರುವ ಆರೋಪ ನಿರಾಧಾರವಾಗಿದೆ ಎಂದು ರಿಲಯನ್ಸ್ ಸಂಸ್ಥೆ ಈ ನೋಟಿಸ್ ಜಾರಿ ಮಾಡಿದೆ. ಕಾಂಗ್ರೆಸ್ ಆರೋಪದ ಕುರಿತು ರಿಲಯನ್ಸ್ ಸಂಸ್ಥೆಯ ಅಧ್ಯಕ್ಷ ಅನಿಲ್ ಅಂಬಾನಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದ ಬಳಿಕ ಕಾನೂನು ಕ್ರಮಕ್ಕೆ ಸಂಸ್ಥೆ ಮುಂದಾಗಿದೆ.

ಈ ಸಂಬಂಧ ಟ್ವೀಟ್ ಮೂಲಕ ಉತ್ತರಿಸಿರುವ ಕಾಂಗ್ರೆಸ್ ನಾಯಕ ಜೈವೀರ್ ಶೇರ್‍ಗಿಲ್, ನಾನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿದ್ದು, ಇಂತಹ ಬೆದರಿಕೆಗಳಿಗೆಲ್ಲ ಮಣಿಯುವುದಿಲ್ಲ. ದೇಶದ ತೆರಿಗೆದಾರನಾದ ನಾನು ಸರ್ಕಾರ ಯಾಕೆ 42 ಸಾವಿರ ಕೋಟಿ ರೂ. ಹೆಚ್ಚು ಹಣ ನೀಡಿತು ಎಂಬುದನ್ನು ತಿಳಿಯುವ ಅಧಿಕಾರ ನನಗಿದೆ ಎಂದು ಬರೆದುಕೊಂಡಿದ್ದಾರೆ.

ಕಾಂಗ್ರೆಸ್ ಆರೋಪ:
ಎನ್‍ಡಿಎ ಅಧಿಕಾರ ಅವಧಿಯಲ್ಲಿ ಮಾಡಲಾದ ರಫೇಲ್ ಒಪ್ಪಂದದಿಂದ ದೇಶದ 41 ಸಾವಿರ ಕೋಟಿ ರೂ. ನಷ್ಟವಾಗಿದ್ದು, ಸರ್ಕಾರಿ ಸ್ವಾಮ್ಯದ ಹಿಂದುಸ್ಥಾನ್ ಏರೊನಾಟಿಕಲ್ಸ್ ಕಂಪೆನಿಗೆ ನೀಡಿದ್ದ ಒಪ್ಪಂದವನ್ನು ಯಾವುದೇ ಕಾರಣ ನೀಡದೆ ಖಾಸಗಿ ಕಂಪೆನಿಗೆ ನೀಡಿ ಕೇಂದ್ರ ಸರ್ಕಾರ ಅಕ್ರಮ ಎಸಗಿದೆ ಎಂದು ಆರೋಪಿಸಿದೆ. ಈ ಕುರಿತು ಕಳೆದ ಬಾರಿ ಸಂಸತ್ ನಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿ ಆರೋಪಗಳ ಸುರಿಮಳೆಗೈದಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

 

Leave a Reply

Your email address will not be published. Required fields are marked *