Tuesday, 21st January 2020

Recent News

ರಾಜೀನಾಮೆ ಪರ್ವಕ್ಕೆ ಆನಂದ್ ಸಿಂಗ್ ಗುದ್ದಲಿ ಪೂಜೆ, 2 ದಿನ ಕಾದು ನೋಡಿ ಎಲ್ಲಾ ಗೊತ್ತಾಗುತ್ತೆ: ಆರ್. ಅಶೋಕ್

ಮೈಸೂರು: ಆನಂದ್ ಸಿಂಗ್ ರಾಜೀನಾಮೆ ಆರಂಭ ಅಷ್ಟೇ. ಇನ್ನೆರಡು ದಿನ ಕಾದು ನೋಡಿ. ಎಲ್ಲಾ ಗೊತ್ತಾಗುತ್ತೆ ಎಂದು ಮೈಸೂರಿನಲ್ಲಿ ಮಾಜಿ ಡಿಸಿಎಂ ಆರ್. ಅಶೋಕ್ ಹೇಳಿಕೆ ಹೊಸ ಬಾಂಬ್ ಸಿಡಿಸಿದ್ದಾರೆ.

ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಆರ್. ಅಶೋಕ್, ಆನಂದ್ ಸಿಂಗ್ ಅವರು ರಾಜೀನಾಮೆ ಕೊಟ್ಟು ಒಳ್ಳೆಯ ನಿರ್ಧಾರ ಮಾಡಿದ್ದಾರೆ. ಆನಂದ್ ಸಿಂಗ್ ಕಾಂಗ್ರೆಸ್‍ನಲ್ಲಿ ಇದ್ದರೂ ಕೂಡ ಜಿಂದಾಲ್ ಹಗರಣವನ್ನು ವಿರೋಧ ಮಾಡಿ ರಾಜೀನಾಮೆ ಕೊಡಲು ಸಿದ್ಧ ಎಂದು ಒಂದು ವಾರದ ಹಿಂದೆ ಹೇಳಿದ್ದರು. ರಾಜ್ಯದ ಸಂಪತ್ತಿಗೋಸ್ಕರ, ರಾಜ್ಯದ ಸಂಪತ್ತನ್ನು ಉಳಿಸೋಕ್ಕಾಗಿ ಅವರು ರಾಜೀನಾಮೆ ನೀಡಿದ್ದಾರೆ. ನಾನು ಅವರ ನಿಲುವನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ ಎಂದು ಹೇಳಿದರು.

ಆನಂದ್ ಸಿಂಗ್ ರಾಜೀನಾಮೆಯಿಂದ ಸರ್ಕಾರ ಪತನವಾಗುತ್ತದೆ. ಇದು ಬೀಳುವ ಸರ್ಕಾರ. ಅದಷ್ಟು ಬೇಗ ಸರ್ಕಾರ ಬೀಳಿಸಲು ಕಾಂಗ್ರೆಸ್-ಜೆಡಿಎಸ್‍ನಲ್ಲಿ ಅತೃಪ್ತ ಶಾಸಕರು ಗುಂಪುಗಾರಿಕೆ ಶುರು ಮಾಡಿದ್ದಾರೆ. ಅದು ಸ್ಫೋಟ ಆಗುವುದಕ್ಕೆ ಆನಂದ್ ಸಿಂಗ್ ಅವರು ಗುದ್ದಲಿ ಪೂಜೆಯನ್ನು ಮಾಡಿದ್ದಾರೆ. ಆನಂದ್ ಸಿಂಗ್ ತಮ್ಮ ಮಾತನ್ನು ಅನುಸರಿಸುತ್ತಾರೆ. ಸಾಕಷ್ಟು ಜನರು ಈ ಸಮ್ಮಿಶ್ರ ಸರ್ಕಾರ ಬೇಗ ತೊಲಗಲಿ ಎಂದು ಕಾಯುತ್ತಿದ್ದಾರೆ. ಈ ಸರ್ಕಾರದಲ್ಲಿ ಶಾಸಕರಿಗೆ ಬೆಲೆ ಇಲ್ಲ. ಕೇವಲ ಸಿಎಂ ಹಾಗೂ ಡಿಕೆಶಿಗೆ ಮಾತ್ರ ಈ ಸರ್ಕಾರ ಬೇಕು ಎಂದರು.

ಸರ್ಕಾರ ಬೀಳಿಸಲು ನಾವು ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಇದು ಅದಾಗಿ ಅದೇ ಬೀಳುವ ಸರ್ಕಾರ. ಈ ಸರ್ಕಾರಕ್ಕೆ ದಿಕ್ಕು-ದೆಸೆ ಇಲ್ಲ. ಸ್ವತಃ ದೇವೇಗೌಡರೇ ಚುನಾವಣೆಯಲ್ಲಿ ಸೋತ ಮೇಲೆ ಈ ಸರ್ಕಾರ ಸೂತ್ರ ಇಲ್ಲದ ಗಾಳಿಪಟದಂತಾಗಿದೆ. ಎಲ್ಲಿ ಬೇಕೋ ಹಾರಡಿಕೊಂಡು ಹೋಗಿ ಕೊನೆಗೆ ಲೈಟ್ ಕಂಬಕ್ಕೆ ತಗಲಾಗಿಕೊಳ್ಳುತ್ತದೆ. ಆನಂದ್ ಸಿಂಗ್ ಅವರು ಇದನ್ನು ಪ್ರಾರಂಭಿಸಿದ್ದಾರೆ. ಯಾರು ಮುಕ್ತಾಯ ಮಾಡುತ್ತಾರೋ ಕಾದು ನೋಡಬೇಕಿದೆ ಎಂದು ಅಶೋಕ್ ತಿಳಿಸಿದ್ದಾರೆ.

ಬಿಜೆಪಿ ಆಪರೇಶನ್ ಕಮಲ ಮಾಡಲ್ಲ. ಸರ್ಕಾರವೇ ಬೀಳುತ್ತಿರುವಾಗ ನಾವು ಏಕೆ ಆಪರೇಶನ್ ಕಮಲ ಮಾಡಬೇಕು. ನಾವು ಯಾವ ಶಾಸಕರನ್ನು ಸಂಪರ್ಕಿಸಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ ಆಂತರಿಕ ಹೊಡೆದಾಟ, ಬಡಿದಾಟದಿಂದ ಇಂದು ಸರ್ಕಾರ ಬಿದ್ದುಹೋಗುತ್ತಿದೆ. ಇದರಲ್ಲಿ ಬಿಜೆಪಿ ಪಾತ್ರವಿಲ್ಲ. ಈ ವಾರದಲ್ಲಿ ದೊಡ್ಡ ಸಂಖ್ಯೆಯಲ್ಲಿ ಈ ಸರ್ಕಾರದಲ್ಲಿ ಗೊಂದಲ ಪ್ರಾರಂಭವಾಗಲಿದೆ. ಸಿಎಂ ಈಗ ವಿದೇಶ ಪ್ರವಾಸದಲ್ಲಿದ್ದಾರೆ ಈ ಸಂದರ್ಭ ನೋಡಿಕೊಂಡು ಕಾಂಗ್ರೆಸ್‍ನ ಸ್ಫೋಟ ಮುಗಿಲು ಮುಟ್ಟುತ್ತೆ ಎಂದು ಭವಿಷ್ಯ ನುಡಿದರು.

ಸಿಎಂ ವಿದೇಶ ಪ್ರವಾಸ ಮುಗಿಸಿ ಬಂದರೆ ಇಲ್ಲಿ ದೊಡ್ಡ ಬದಲಾವಣೆ ಆಗಲಿದೆ. ನಾನು ಟೈಂ ಕೊಡುವುದಕ್ಕೆ ಆಗಲ್ಲ. ಏಕೆಂದರೆ ನಾವು ರೇವಣ್ಣ ಅವರ ರೀತಿ ನಿಂಬೆಹಣ್ಣು ಭವಿಷ್ಯ ಇಟ್ಟುಕೊಂಡಿಲ್ಲ. ಜ್ಯೋತಿಷಿ ರೇವಣ್ಣ ಅವರು ಹೇಳುತ್ತಾರೆ. ನಾವು ಅದನ್ನು ಹೇಳಲು ಆಗುವುದಿಲ್ಲ. ಬಿಜೆಪಿ ಹಾಗೂ ಕರ್ನಾಟಕದ ಜನ ಸಮ್ಮಿಶ್ರ ಸರ್ಕಾರದ ನಾಟಕವನ್ನು ನೋಡುತ್ತಿದ್ದಾರೆ. ಈ ಸರ್ಕಾರ ತೊಲಗಲಿ ಎಂಬುದು ಎಲ್ಲರ ಮನಸ್ಸಲ್ಲಿ ಇದೆ ಎಂದು ಮಾಜಿ ಡಿಸಿಎಂ ಆರ್. ಅಶೋಕ್ ತಿಳಿಸಿದರು.

Leave a Reply

Your email address will not be published. Required fields are marked *