Chamarajanagar
ಎಜಿ ಸಮರ್ಥವಾಗಿ ವಾದ ಮಂಡಿಸಿದ್ದಾರೆ- ವಿಶ್ವನಾಥ್ಗೆ ಅಶೋಕ್ ಟಾಂಗ್

ಚಾಮರಾಜನಗರ: ಅಡ್ವೊಕೇಟ್ ಜನರಲ್ ಉತ್ತಮವಾಗಿ ವಾದ ಮಂಡಿಸಿದ್ದಾರೆ. ಹಿನ್ನಡೆಯಾಗಿದ್ದಕ್ಕೆ ಎಚ್.ವಿಶ್ವನಾಥ್ ಅಸಮಾಧಾನ ಹೊರ ಹಾಕುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್ ಅಶೋಕ್ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ಗೆ ಟಾಂಗ್ ನೀಡಿದ್ದಾರೆ.
ಈ ಕುರಿತು ಜಿಲ್ಲೆಯ ಕೊಳ್ಳೇಗಾಲದಲ್ಲಿ ಮಾತನಾಡಿದ ಅವರು, ವಿಶ್ವನಾಥ್ ಅವರಿಗೆ ಕೋರ್ಟ್ ನಲ್ಲಿ ಹಿನ್ನೆಡೆಯಾಗಿದೆ. ಹೀಗಾಗಿ ಅಡ್ವೊಕೇಟ್ ಜನರಲ್ ಸರಿಯಾಗಿ ವಾದ ಮಂಡಿಸಲಿಲ್ಲ ಎಂದು ನೋವಿನಿಂದ ಮಾತನಾಡಿದ್ದಾರೆ. ಆದರೆ ನಮ್ಮ ಅಡ್ವೊಕೇಟ್ ಜನರಲ್ ಉತ್ತಮವಾಗಿ ವಾದ ಮಂಡಿಸಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಅವರು ಹಿರಿಯ ವಕೀಲರಿದ್ದಾರೆ. ಸುಪ್ರೀಂ ಕೋರ್ಟ್ ಕೋಟ್ಟಿರುವ ತೀರ್ಪಿನ ಪ್ರಕಾರ ಹೈ ಕೋರ್ಟ್ ತೀರ್ಪು ಕೊಟ್ಟಿದೆ ಎಂದು ವಕೀಲರು ಸಹ ಹೇಳಿದ್ದಾರೆ. ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಪಕ್ಷ ಈಗಾಗಲೇ ತೀರ್ಮಾನ ಮಾಡಿದೆ. ವಿಶ್ವನಾಥ್ ದೃತಿಗೆಡುವುದು ಬೇಡ ನಾವೆಲ್ಲರೂ ವಿಶ್ವನಾಥ್ ಜೊತೆಗಿದ್ದೇವೆ ಎಂದು ಮಾಹಿತಿ ನೀಡಿದರು.
ಚುನಾವಣೆಯಲ್ಲಿ ಸೋತರೂ ವಿಧಾನ ಪರಿಷತ್ ಸದಸ್ಯರನ್ನಾಗಿಸಿದ್ದೇವೆ. ವಿಶ್ವನಾಥ್ ಅವರನ್ನು ಮಂತ್ರಿ ಮಾಡಬೇಕೆಂದು ಯಡಿಯೂರಪ್ಪನವರು ಸಹ ನಮ್ಮ ಜೊತೆ ಮಾತನಾಡಿದ್ದರು. ಕೇಂದ್ರಕ್ಕೆ ಪಟ್ಟಿಯನ್ನು ಸಹ ಸಲ್ಲಿಸಲಾಗಿತ್ತು ಎಂದು ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
