Monday, 19th August 2019

Recent News

ಜೆಡಿಎಸ್ ಮುಖಂಡರಲ್ಲಿ ಭಿನ್ನಮತ- ಚೇರ್‌ನಿಂದ ಹೊಡೆದಾಡಿಕೊಂಡ ಕಾರ್ಯಕರ್ತರು

ರಾಮನಗರ: ಸಿಎಂ ಎಚ್.ಡಿ ಕುಮಾರಸ್ವಾಮಿ ಕ್ಷೇತ್ರ ಚನ್ನಪಟ್ಟಣದಲ್ಲಿ ಜೆಡಿಎಸ್ ಮುಖಂಡರ ಮಧ್ಯೆ ಭಿನ್ನಮತ ಸ್ಫೋಟಗೊಂಡಿದ್ದು, ಎರಡು ಗುಂಪುಗಳ ನಾಯಕರು ಹಾಗೂ ಕಾರ್ಯಕರ್ತರು ಕೈ ಕೈ ಮಿಲಾಯಿಸಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ.

ತಾಲೂಕು ಅಧ್ಯಕ್ಷ ಜಯಮುತ್ತು ಅವರ ಅನುಪಸ್ಥಿತಿಯಲ್ಲಿ ಸಭೆ ನಡೆಸುತ್ತಿರುವುದು ಸರಿಯಲ್ಲ ಎಂದು ಕೆಲವು ಕಾರ್ಯಕರ್ತರು ಪಟ್ಟು ಹಿಡಿದರು. ಈ ಹಿನ್ನೆಲೆಯಲ್ಲಿ ಕಚೇರಿಯಲ್ಲಿ ಮಾತಿಗೆ ಮಾತು ಬೆಳೆದು ಸ್ಥಳೀಯ ಜೆಡಿಎಸ್ ಮುಖಂಡರಾದ ಲಿಂಗೇಶ್ ಕುಮಾರ್ ಮತ್ತು ಜಯಮುತ್ತು ಬಣಗಳ ನಡುವೆ ಜಗಳವಾಗಿದೆ.

ಕಾರ್ಯಕರ್ತರು ಚೇರ್ ಎತ್ತಿಕೊಂಡು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಪರಿಣಾಮ ಕೆಲವರಿಗೆ ಗಾಯವಾಗಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಚೇರ್ ಹಾಗೂ ಪೀಠೋಪಕರಣಗಳು ಪುಡಿಪುಡಿಯಾಗಿವೆ. ಈ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ವಾತಾವರಣ ತಿಳಿಗೊಳಿಸಲು ಹರಸಾಹಸ ಪಡಬೇಕಾಯಿತು. ಆದರೂ ಕಾರ್ಯಕರ್ತರು ಪರಸ್ಪರ ಜಗಳವಾಡಿಕೊಂಡಿದ್ದಾರೆ.

ಶಾಸಕಿ ಅನಿತಾ ಕುಮಾರಸ್ವಾಮಿ ಅವರ ಮುಂದೆ ಕೆಲವರು ಚಾಡಿ ಹೇಳುತ್ತಿದ್ದಾರೆ. ಸಿಎಂ ಕುಮಾರಸ್ವಾಮಿ ಅವರು ಮಧ್ಯಪ್ರವೇಶ ಮಾಡಿದರೆ ಮಾತ್ರ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತದೆ. ಯಾರೊಬ್ಬರೂ ಗಲಾಟೆಯನ್ನು ನಿಲ್ಲಿಸಲು ಮುಂದಾಗುತ್ತಿಲ್ಲ ಎಂದು ಕಾರ್ಯಕರ್ತರೊಬ್ಬರು ದೂರಿದ್ದಾರೆ.

ಅಧ್ಯಕ್ಷರಿಗೆ ಯಾವುದೇ ಕಿಮ್ಮತ್ತು ನೀಡುತ್ತಿಲ್ಲ. ಅವರ ಮಾತನ್ನು ಯಾರೂ ಕೇಳುತ್ತಿಲ್ಲ. ಹೆಸರಿಗೆ ಮಾತ್ರ ಅಧಿಕಾರದಲ್ಲಿ ಇದ್ದಾರೆ. ಹೈಕಮಾಂಡ್ ಆದೇಶದಂತೆ ಎಲ್ಲವೂ ನಡೆಯುತ್ತದೆ. ರಾಮನಗರ ಹಾಗೂ ಚನ್ನಪಟ್ಟಣದಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರೇ ನಾಯಕತ್ವ ವಹಿಸುತ್ತಿದ್ದಾರೆ. ಇದರಿಂದಾಗಿ ಮುಖಂಡರು ಪರಸ್ಪರ ಜಗಳಕ್ಕೆ ಇಳಿದಿದ್ದಾರೆ ಎಂದು ಜೆಡಿಎಸ್ ಕಾರ್ಯಕರ್ತ ಸಿಂಗ್ರಿಗೌಡ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

ಸುಮ್ಮನೆ ನಮ್ಮ ಮೇಲೆ ಆರೋಪ ಮಾಡಲಾಗುತ್ತಿದೆ. ನಾವು ಜಗಳ ಮಾಡಿಲ್ಲ. ಕಚೇರಿಯಲ್ಲಿ ಯಾವುದೇ ಗಲಾಟೆಯಾಗಿಲ್ಲ. ನನಗೂ ಗಾಯವಾಗಿಲ್ಲ. ಚೇರ್ ಪುಡಿಪುಡಿಯಾಗಿಲ್ಲ ಎಂದು ಘಟನೆಯನ್ನು ಮುಚ್ಚಿಹಾಕಲು ಜಯರಾಂ ಯತ್ನಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *