Connect with us

Districts

ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಏರಿಕೆ

Published

on

ನವದೆಹಲಿ: ನೋಟ್ ಬ್ಯಾನ್ ಮತ್ತು ತರಾತುರಿಯಲ್ಲಿ ಸರಕು ಮತ್ತು ಸೇವಾ ತೆರಿಗೆ ಜಾರಿಗೊಳಿಸಿದ್ದರಿಂದ ದೇಶದ ಆರ್ಥಿಕ ಬೆಳವಣಿಗೆ ದರ(ಜಿಡಿಪಿ) ಕುಸಿದಿದೆ ಎನ್ನುವ ಮಂದಿ ಉತ್ತರ ಎನ್ನುವಂತೆ ಸೆಪ್ಟೆಂಬರ್ ಅಂತ್ಯಕ್ಕೆ ಮುಕ್ತಾಯವಾದ ಎರಡನೇ ತ್ರೈಮಾಸಿಕದಲ್ಲಿ ಏರಿಕೆಯಾಗಿದೆ.

ಜುಲೈ, ಅಗಸ್ಟ್, ಸೆಪ್ಟೆಂಬರ್ ಅವಧಿಯ ಜಿಡಿಪಿ ದರ 6.3% ಏರಿಕೆಯಾಗಿದೆ ಎಂದು ಕೇಂದ್ರ ಸಾಂಖ್ಯಿಕ ಕಚೇರಿ ತಿಳಿಸಿದೆ. ಏಪ್ರಿಲ್ ನಿಂದ ಜೂನ್ ವರೆಗೆ ಅಂತ್ಯಗೊಂಡ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ದರ 5.7% ದಾಖಲಿಸುವ ಮೂಲಕ ಕುಸಿದಿತ್ತು. ನೋಟು ರದ್ದತಿಯ ಬಳಿಕ ಜಿಡಿಪಿ ಪ್ರಗತಿ ಶೇ 1.3 ರಷ್ಟು ಇಳಿಕೆ ಕಂಡಿತ್ತು.

ಜಿಡಿಪಿ ದರ ಏರಿಕೆಯಾಗಿರುವ ವಿಚಾರ ಪ್ರಕಟವಾದ ಬಳಿಕ ಬಿಜೆಪಿ ನಾಯಕರು ಟ್ವೀಟ್ ಮಾಡಿ ಸರ್ಕಾರದ ಸಾಧನೆಯನ್ನು ಹೊಗಳುತ್ತಿದ್ದಾರೆ. ಅಷ್ಟೇ ಅಲ್ಲದೇ ಈ ಹಿಂದೆ ಟೀಕಿಸಿದ್ದ ಮಂದಿ ಎಲ್ಲಿದ್ದೀರಿ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. (ಇದನ್ನೂ ಓದಿ: 13 ವರ್ಷದ ಬಳಿಕ ಏರಿಕೆ ಕಂಡಿತು ಭಾರತದ ಮೂಡೀಸ್ ರೇಟಿಂಗ್)

ಜಿಡಿಪಿ ದರ ಇಳಿಕೆ ತಾತ್ಕಾಲಿಕ ಮುಂದಿನ ದಿನಗಳಲ್ಲಿ ಏರಿಕೆಯಾಗಲಿದೆ ಎಂದು ಈ ಹಿಂದೆ ವಿಶ್ವಬ್ಯಾಂಕ್ ಹೇಳಿತ್ತು.(ಇದನ್ನೂ ಓದಿ:ನೋಟು ಬ್ಯಾನ್ ಆದ್ರೂ ಆರ್ಥಿಕ ಅಭಿವೃದ್ಧಿ ದರದಲ್ಲಿ ವಿಶ್ವದಲ್ಲಿ ಭಾರತವೇ ನಂಬರ್ ಒನ್)

ನವೆಂಬರ್ 8ರಂದು 500, 1 ಸಾವಿರ ರೂ. ಮುಖಬೆಲೆ ನೋಟುಗಳನ್ನು ನಿಷೇಧಿಸಿದ ಬಳಿಕ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಭಾರತದ ಜಿಡಿಪಿ ಇಳಿಕೆಯಾಗಲಿದೆ ಎಂದು ಹೇಳಿತ್ತು. 2015 -16ರಲ್ಲಿ ಶೇ. 7.6 ರಷ್ಟಿದ್ದ ಜಿಡಿಪಿ ದರ 2016- 17ರಲ್ಲಿ ಶೇ 6.6 ರಷ್ಟು ಕಡಿಮೆ ಮಟ್ಟದಲ್ಲಿರಲಿದೆ ಎಂದು ಅದು ತಿಳಿಸಿತ್ತು.

ಮಮತಾ ಟೀಕೆ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕೆ ಮಾಡಿ ಈ ಹಿಂದೆ ಈ ಅವಧಿಯಲ್ಲಿ 7.5% ದಾಖಲಾಗಿತ್ತು. ಆದರೆ ಈಗ 6.3% ದಾಖಲಾಗಿದೆ. ಈ ಸರ್ಕಾರ ಕೇವಲ ಭಾಷಣ ಮಾತ್ರ ಮಾಡುತ್ತಿದೆ ಹೊರತು ಯಾವುದೇ ಕೆಲಸ ಮಾಡುವುದಿಲ್ಲ .ಉದ್ಯೋಗದಲ್ಲಿ ಯಾವುದೇ ಪ್ರಗತಿ ಆಗಿಲ್ಲ ಎಂದು  ಸರಣಿ ಟ್ವೀಟ್ ಮಾಡಿ ವಾಗ್ದಾಳಿ ನಡೆಸಿದ್ದಾರೆ.

ಯಾವ ಅವಧಿಯಲ್ಲಿ ಎಷ್ಟಿತ್ತು?
ಮಾರ್ಚ್ 2016 – 9.2%
ಜೂನ್ 2016 – 7.9%
ಸೆಪ್ಟೆಂಬರ್ 2016 – 7.5%
ಡಿಸೆಂಬರ್ 2016 – 7%
ಮಾರ್ಚ್ 2017 – 6.1%
ಜೂನ್ 2017 – 5.7%
ಸೆಪ್ಟೆಂಬರ್ 2017 – 6.3%