Connect with us

Bengaluru City

ಥಿಯೇಟರ್‌ಗಳಲ್ಲಿ ಶೇ.100 ಭರ್ತಿಗೆ ಅವಕಾಶ ನೀಡಿ- ಸಿಎಂಗೆ ಪುನೀತ್ ಮನವಿ

Published

on

ಬೆಂಗಳೂರು: ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆ 8 ಜಿಲ್ಲೆಗಳಲ್ಲಿ ಸರ್ಕಾರ ಶುಕ್ರವಾರದಿಂದ ಕಠಿಣ ನಿಯಮ ಜಾರಿಗೊಳಿಸಿದ್ದು, ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಭರ್ತಿಗೆ ಮಾತ್ರ ಅವಕಾಶ ನೀಡಲಾಗಿದೆ. ಇದಕ್ಕೆ ಸ್ಯಾಂಡಲ್‍ವುಡ್ ಗಣ್ಯರು ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಇದೀಗ ನಟ ಪುನೀತ್ ರಾಜ್‍ಕುಮಾರ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಶೇ.100ರಷ್ಟು ಭರ್ತಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.

ಸಿಎಂ ನಿವಾಸಕ್ಕೆ ತೆರಳಿ ನಟ ಪುನೀತ್ ರಾಜ್‍ಕುಮಾರ್ ಮನವಿ ಮಾಡಿದ್ದು, ಎಲ್ಲ ಮಾರ್ಗಸೂಚಿಗಳನ್ನೂ ಪಾಲಿಸುತ್ತೇವೆ. ಶೇ.100ರಷ್ಟು ಭರ್ತಿಗೆ ಅವಕಾಶ ಮಾಡಿಕೊಡಿ. ಇಲ್ಲವಾದಲ್ಲಿ ತುಂಬಾ ನಷ್ಟವಾಗಲಿದೆ ಎಂದು ಮನವಿ ಮಾಡಿದ್ದಾರೆ. ಪುನೀತ್ ರಾಜ್‍ಕುಮಾರ್ ಗೆ ನಿರ್ಮಾಪಕ ವಿಜಯ್ ಕಿರಗಂದೂರ್, ನಿರ್ದೇಶಕ ಸಂತೋಷ್ ಆನಂದ್ ರಾಮ್ ಸಾಥ್ ನೀಡಿದ್ದಾರೆ.

ತಜ್ಞರ ಜೊತೆ ಚರ್ಚೆ ಮಾಡುತ್ತೇವೆ. ತಜ್ಞರ ಅಭಿಪ್ರಾಯದ ಮೇಲೆ ಮುಂದಿನ ನಿರ್ಧಾರ ಮಾಡುತ್ತೇವೆ ಎಂದು ಚಿತ್ರ ತಂಡಕ್ಕೆ ಸಿಎಂ ಭರವಸೆ ನೀಡಿದ್ದಾರೆ.

ಫಿಲ್ಮ್ ಚೇಂಬರ್ ನ ಅಧ್ಯಕ್ಷ ಜೈರಾಜ್ ಸಹ ಈ ಕುರಿತು ಸಿಎಂ ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಸರ್ಕಾರದ ಎಲ್ಲ ನಿಯಮ ಪಾಲನೆ ಮಾಡುತ್ತೇವೆ. ಇದ್ದಕ್ಕಿದ್ದಂತೆ ಶೇ.50 ಸೀಟ್ ಭರ್ತಿಗೆ ಕಡಿತ ಮಾಡಿದರೆ ನಿರ್ಮಾಪಕರಿಗೆ ನಷ್ಟವಾಗುತ್ತದೆ. ಹೀಗಾಗಿ ಸರ್ಕಾರದ ನಿರ್ಧಾರವನ್ನು ಮರು ಪರಿಶೀಲನೆ ಮಾಡುವಂತೆ ಮನವಿ ಸಲ್ಲಿಸಿದ್ದಾರೆ.

ಇಂದು ಬೆಳಗ್ಗೆಯಿಂದಲೂ ಈ ಬಗ್ಗೆ ಹಲವು ನಟರು ಆಕ್ರೋಶ ವ್ಯಕ್ತಪಡಿಸಿದ್ದು, ಸುದೀಪ್, ಯಶ್, ದುನಿಯಾ ವಿಜಯ್ ಸೇರಿದಂತೆ ಹಲವು ನಟರು ಶೇ.100ರಷ್ಟು ಭರ್ತಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಹ ಭಾರೀ ಚರ್ಚೆ ನಡೆಯುತ್ತಿದೆ. ಪುನೀತ್ ರಾಜ್‍ಕುಮಾರ್ ಅಭಿಮಾನಿಗಳು ವಿವಿಧೆಡೆ ಪ್ರತಿಭಟನೆ ಮಾಡಿದ್ದಾರೆ.

Click to comment

Leave a Reply

Your email address will not be published. Required fields are marked *