Tuesday, 28th January 2020

ಕಾಲು ಸ್ವಾಧೀನವಿಲ್ಲದ ಯುವಕನಿಗೆ ತಾಯಿಗಾಗಿ ದುಡಿಯುವ ಹಂಬಲ

ಚಿತ್ರದುರ್ಗ: ಕಾಲು ಸ್ವಾಧೀನ ಇಲ್ಲದಿದ್ದರು ತಾಯಿಗಾಗಿ ದುಡಿಯುವ ಹಂಬಲದ ಯುವಕ ಸಹಾಯ ಯಾಚಿಸಿ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ. ಹೆಸರು ಮಂಜುನಾಥ್, ಚಿತ್ರದುರ್ಗ ತಾಲೂಕಿನ ಚಿಕ್ಕಬೆನ್ನೂರು ಗ್ರಾಮದ ನಿವಾಸಿ. ಕಳೆದ ಎರಡು ವರ್ಷಗಳ ಹಿಂದೆ ಕಂಬದ ಮೇಲೆ ಏರಿ ಕೇಬಲ್ ಕೆಲಸ ಮಾಡುವಾಗ ಉಂಟಾದ ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಮೇಲಿಂದ ಕೆಳಗೆ ಬಿದ್ದು ತನ್ನ ಕಾಲುಗಳ ಸ್ವಾಧೀನ ಕಳೆದುಕೊಂಡು ನರಕಯಾತನೆ ಅನುಭವಿಸುತ್ತಿದ್ದಾರೆ.

ಕೇಬಲ್ ಕಂಪನಿ ಹಾಗು ತನ್ನ ಕುಟುಂಬದವರ ನೆರವಿನಿಂದ ಈಗಾಗಲೇ ಮೂರು ಶಸ್ತ್ರ ಚಿಕಿತ್ಸೆಗಳನ್ನು ಮಾಡಿಸಿಕೊಂಡಿರುವ ಮಂಜುನಾಥ್ ಸಂಪೂರ್ಣ ಗುಣಮುಖವಾಗದೇ ಕಂಗಾಲಾಗಿದ್ದಾರೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೂ ಅರ್ಜಿ ಸಲ್ಲಿಸಿದ್ದೂ, ಸಿಎಂ ಕಚೇರಿಯಿಂದ ಪೂರಕವಾಗಿ ಸ್ಪಂದಿಸುವಂತೆ ಜಿಲ್ಲಾಡಳಿತಕ್ಕೆ ಪತ್ರ ರವಾನೆಯಾಗಿದೆ. ಅಷ್ಟೇ ಅಲ್ಲ ಸ್ವತಃ ಗ್ರಾಮಸ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಅಧಿಕಾರಿಗಳಿಂದ ಯಾವುದೇ ಪ್ರಯೋಜನವಾಗಲಿಲ್ಲ.

ತಾಯಿಗೆ ಆಸರೆಯಾಗಬೇಕಾಗಿದ್ದ ಮಗ ಮಂಜುನಾಥ್ ತನ್ನ ಕೈಯಲ್ಲಿ ದುಡಿಯಲಾಗುತ್ತಿಲ್ಲ ಅಂತಾ ಮರುಗುತ್ತಿದ್ದರೆ, ಇತ್ತ ತಾಯಿ ಮಗನಿಗಾಗಿ ಕೂಲಿ ಕೆಲಸ ಮಾಡಿ ಮಗನ ಆರೈಕೆ ಮಾಡುತ್ತಿದ್ದಾರೆ. ತಾಯಿ ಮಗ ಸ್ವಾವಲಂಬಿಯಾಗಿ ಜೀವನ ಮಾಡಲು ಒಂದು ಸಣ್ಣದಾದ ಚಿಲ್ಲರೆ ಅಂಗಡಿಗೆ ಸಹಾಯ ಮಾಡಿ ಎಂದು ಪಬ್ಲಿಕ್ ಟಿವಿಯ ಬೆಳಕು ಮೂಲಕ ದಾನಿಗಳ ಸಹಾಯ ಬಯಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *