Monday, 22nd July 2019

ದೂರವಾದ ಹೆಂಡತಿಗಾಗಿ ಶೌಚಾಲಯ ಕಟ್ಟಿಸಲು ಗಂಡನ ಹರಸಾಹಸ

ಕಾರವಾರ: ವಾಸ ಮಾಡಲು ಯೋಗ್ಯವಿಲ್ಲದ ಮನೆ, ಶೌಚಾಲಯವು ಇಲ್ಲದೇ ದಿನಗೂಲಿ ಮಾಡಿ ಕಷ್ಟದಲ್ಲಿ ಜೀವನ ಮಾಡುತ್ತಿರುವ ಈ ವ್ಯಕ್ತಿಯ ಹೆಸರು ಪ್ರೇಮಾನಂದ, ಕಾರವಾರ ತಾಲೂಕಿನ ಕಠಿಣಕೋಣ ನಿವಾಸಿ. 5 ವರ್ಷಗಳ ಹಿಂದೆ ಮದುವೆಯಾಗಿದ್ದಾರೆ. ಪತಿ-ಪತ್ನಿ ಅನ್ಯೋನ್ಯವಾಗಿ ಕಷ್ಟದಲ್ಲಿ ಜೀವನ ಮಾಡುತ್ತಿದ್ದರು. ಈಗ ಪತ್ನಿ ಪತಿಯನ್ನು ಬಿಟ್ಟು ತವರು ಸೇರಿದ್ದಾರೆ ಕಾರಣ ಮನೆಯಲ್ಲಿ ಶೌಚಾಲಯ ಇಲ್ಲದಿರೋದು.

ಮದುವೆಯಾದ ಹೊಸತರಲ್ಲಿ ಮನೆಯಲ್ಲಿ ಟಾಯ್ಲೆಟ್ ಇಲ್ಲದಿದ್ದರೂ ಬಯಲು ಶೌಚಕ್ಕೆ ಹೋಗ್ತಿದ್ದ ಪತ್ನಿ ಹಲವು ಬಾರಿ ಗಂಡನಿಗೆ ಟಾಯ್ಲೆಟ್ ನಿರ್ಮಾಣಕ್ಕೆ ಒತ್ತಾಯಿಸಿದ್ದಾರೆ. ಆದ್ರೆ ಕಿತ್ತು ತಿನ್ನುವ ಬಡತನದ ನಡುವೆ ಗಂಡ ಶೌಚಾಲಯ ಕಟ್ಟಿಸಲಾಗಿಲ್ಲ. ಮಗು ಜನಿಸಿದ ನಂತರ ಬಯಲು ಬಹಿರ್ದೆಸೆಗೆ ಹೋಗಲು ಪತ್ನಿ ನಿರಾಕರಿಸಿ ಮನೆಯಲ್ಲಿ ಶೌಚಾಲಯ ನಿರ್ಮಿಸುವವರೆಗೂ ಮನೆಗೆ ಬರೋದಿಲ್ಲ ಎಂದು ತವರು ಮನೆಯಲ್ಲಿ ಮಗುವಿನೊಂದಿಗೆ ವಾಸವಾಗಿದ್ದಾರೆ.

ಮಳೆಯಿಂದ ಮನೆಯೂ ಸಂಪೂರ್ಣ ಹಾಳಾಗಿದ್ದು ಒಬ್ಬಂಟಿ ಜೀವನ ಮಾಡುತ್ತಿರೋ ಬಡಪಾಯಿ, ಹೆಂಡ್ತಿ-ಮಗು ಇದ್ದರೂ ಚಿಕ್ಕ ಕ್ಷೌರದ ಅಂಗಡಿ ನಡೆಸುತ್ತಾ ಒಬ್ಬಂಟಿ ಜೀವನ ನಡೆಸುತ್ತಿದ್ದಾರೆ. ಕ್ಷೌರದ ಅಂಗಡಿಯೇ ಜೀವನಕ್ಕೆ ಆಧಾರವಾಗಿದ್ದು ಕ್ಷೌರದ ಅಂಗಡಿ ದುಸ್ಥಿತಿಯಲ್ಲಿದೆ.

ವಾಸಕ್ಕೆ ಯೋಗ್ಯವಾದ ಸೂರಿಲ್ಲ. ಶೌಚಾಲಯವೂ ಇಲ್ಲ, ಕಟ್ಟಿಕೊಂಡ ಹೆಂಡತಿಯೂ ಇಲ್ಲ. ಮುದ್ದಿನ ಮಗುನೂ ಇಲ್ಲ. ಕ್ಷೌರಿಕನ ವೃತ್ತಿಯಲ್ಲಿ ಹೇಗೋ ಕೆಲಸ ಮಾಡ್ತೀನಿ ಆದ್ರೆ ಮುಜುಗರದಿಂದ ತಪ್ಪಿಸಿಕೊಳ್ಳಲು ನಮಗೊಂದು ಶೌಚಾಲಯ ನಿರ್ಮಿಸಿ ಕೊಟ್ಟು ನಾನು ಹಾಗೂ ನನ್ನ ಪತ್ನಿ ಜೊತೆಯಾಗಿ ಸ್ವಾಭಿಮಾನದಿಂದ ಬದುಕಲು ನೆರವಾಗಿ ಎಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *