Connect with us

Bengaluru Rural

ಹೋಟೆಲ್ ಕಾರ್ಮಿಕನಿಗೆ ನೆರವಾದ ಮನೆಯೇ ಮಂತ್ರಾಲಯ ಕಾರ್ಯಕ್ರಮ

Published

on

ಬೆಂಗಳೂರು: ಕೊರೊನಾ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಹೋಟೆಲ್ ಕಾರ್ಮಿಕರೊಬ್ಬರಿಗೆ ಗಂಧದ ನಾಡು ಜನಪರ ವೇದಿಕೆ ಸಂಘಟನೆಯ ಕಾರ್ಯಕರ್ತರು ನೆರವಾಗಿದ್ದಾರೆ.

ಕೊರೊನಾ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿರುವವರಿಗೆ ಪಬ್ಲಿಕ್ ಟಿವಿ ‘ಮನೆಯೇ ಮಂತ್ರಾಲಯ’ ಕಾರ್ಯಕ್ರಮ ನಡೆಸುತ್ತಿದೆ. ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಹಳೇ ಚಂದಾಪುರದಲ್ಲಿ ವಾಸವಿದ್ದ ರವಿ ಫೋನ್ ಮಾಡಿ ಅಳಲನ್ನು ತೋಡಿಕೊಂಡಿದ್ದರು. ಅವರಿಗೆ ಇಂದು ನೆರವು ಸಿಕ್ಕಿದೆ.

ರವಿ ಅವರು ಲಾಕ್‍ಡೌನ್‍ನಿಂದಾಗಿ ಕೆಲಸ, ಆಹಾರ ಪದಾರ್ಥವಿಲ್ಲದೆ ಕಂಗಾಲಾಗಿದ್ದರು. ಹೀಗಾಗಿ ಭಾನುವಾರ ಪಬ್ಲಿಕ್ ಟಿವಿಗೆ ಕರೆ ಮಾಡಿ ಆಹಾರ ಪದಾರ್ಥ ಒದಗಿಸುವಂತೆ ಕೇಳಿಕೊಂಡಿದ್ದರು. ಈ ಹಿನ್ನೆಲೆ ಗಂಧದ ನಾಡು ಜನಪರ ವೇದಿಕೆ ಸಂಘಟನೆಯ ಕಾರ್ಯಕರ್ತರು ಒಂದು ತಿಂಗಳಿಗೆ ಆಗುವಷ್ಟು ಅಕ್ಕಿ, ಬೇಳೆ, ಎಣ್ಣೆ, ಧವಸ ಧಾನ್ಯದ ಜೊತೆಗೆ ತರಕಾರಿ ನೀಡಿ ಮಾನವೀಯತೆ ಮೆರೆಸಿದ್ದಾರೆ.

ನೆರವು ಪಡೆದ ರವಿ ಮಾತನಾಡಿ, ಲಾಕ್‍ಡೌನ್ ಆಗಿದ್ದರಿಂದ ಕೆಲಸ ಇಲ್ಲವಾಯಿತು. ಕೈಯಲ್ಲಿದ್ದ ಹಣದಲ್ಲಿ ಇಷ್ಟು ದಿನ ಜೀವನ ನಡೆಸಿದೆ. ಆದರೆ ತುತ್ತು ಅನ್ನಕ್ಕೂ ಕಾಸಿಲ್ಲದಗ ಪಬ್ಲಿಕ್ ಟಿವಿಗೆ ಕರೆ ಮಾಡಿದೆ. ಇದೀಗ ಒಂದು ತಿಂಗಳ ರೇಷನ್ ದೊರೆತಿರುವುದು ಖುಷಿಯಾಗಿದೆ ಎಂದರು.

ಗಂಧದ ನಾಡು ಜನಪರ ವೇದಿಕೆಯ ಕಾರ್ಯಕರ್ತ ಮಂಜುನಾಥ್ ಮಾತನಾಡಿ, ಭಾನುವಾರ ಮನೆಯೇ ಮಂತ್ರಾಲಯ ಕಾರ್ಯಕ್ರಮ ನೋಡುವಾಗ ರವಿ ಕರೆ ಮಾಡಿದ್ದು ನೋಡಿದೆ. ನಮ್ಮ ಊರಿನವರೆ ತೊಂದರೆಯಲ್ಲಿರುವುದು ತಿಳಿಯಿತು. ಆನೇಕಲ್ ವರದಿಗಾರರ ಮೂಲಕ ರವಿ ಅವರ ವಿಳಾಸ ಪಡೆದು ನೆರವು ನೀಡಿದ್ದೇವೆ ಎಂದರು.