Districts
ಗಡಿಗ್ರಾಮ ಆತ್ಕೂರಿನಲ್ಲಿ ಜ್ಞಾನದೀವಿಗೆ – ಪಬ್ಲಿಕ್ ಟಿವಿಯಿಂದ ಉಚಿತ ಟ್ಯಾಬ್ ವಿತರಣೆ

ರಾಯಚೂರು: ಪಬ್ಲಿಕ್ ಟಿವಿಯ ಜ್ಞಾನದೀವಿಗೆ ಕಾರ್ಯಕ್ರಮದ ಅಂಗವಾಗಿ ರಾಯಚೂರಿನ ಗಡಿಭಾಗದ ಆತ್ಕೂರು ಪ್ರೌಢಶಾಲೆಯಲ್ಲಿ ಇಂದು ಉಚಿತ ಟ್ಯಾಬ್ ವಿತರಿಸಲಾಯಿತು. ಹಿಂದುಳಿದ ಗ್ರಾಮವಾದರೂ ಶೈಕ್ಷಣಿಕ ಸಾಧನೆಯಲ್ಲಿ ಇಲ್ಲಿನ ವಿದ್ಯಾರ್ಥಿಗಳು ಮುಂದಿದ್ದಾರೆ. ಆದ್ರೆ ಕೊರೊನಾ ಕಾರಣಕ್ಕೆ ಶಾಲೆಗಳನ್ನ ಮುಚ್ಚಿರುವುದರಿಂದ ಮಕ್ಕಳು ಮಂಕಾಗಿದ್ದರು. ಹೀಗಾಗಿ ಟ್ಯಾಬ್ ವಿತರಣೆಯಿಂದ ಶಾಲೆಯ ಮಕ್ಕಳು ಹಾಗೂ ಶಿಕ್ಷಕರು ಖುಷಿ ವ್ಯಕ್ತಪಡಿಸಿದ್ದಾರೆ.
ಕೊರೊನಾ ಸಂದರ್ಭದಲ್ಲಿ ಶಾಲೆಗಳಿಲ್ಲದೆ ಶೈಕ್ಷಣಿಕ ವಾತಾವರಣದಿಂದ ದೂರ ಉಳಿದ ಗ್ರಾಮೀಣ ಭಾಗದ ಮಕ್ಕಳ ಅನುಕೂಲಕ್ಕಾಗಿ ಪಬ್ಲಿಕ್ ಟಿವಿ ಆಯೋಜಿಸಿರುವ ಮಹಾಯಜ್ಞ ಜ್ಞಾನ ದೀವಿಗೆ ಕಾರ್ಯಕ್ರಮ ರಾಯಚೂರಿನಲ್ಲಿ ನಿರಂತರವಾಗಿ ಸಾಗಿದೆ. ರಾಯಚೂರು ತಾಲೂಕಿನ ಉಡಮಗಲ್ ಖಾನಾಪುರ ಶಾಲೆಯ ಬಳಿಕ ಇಂದು ತಾಲೂಕಿನ ಗಡಿಗ್ರಾಮ ಆತ್ಕೂರ್ನಲ್ಲಿ ಉಚಿತ ಟ್ಯಾಬ್ಗಳನ್ನ ಸರ್ಕಾರಿ ಶಾಲೆಯ ಎಸ್ಎಸ್ಎಲ್ಸಿ ಮಕ್ಕಳಿಗೆ ವಿತರಿಸಲಾಯಿತು.
ನಕ್ಸಲ್ ಪೀಡಿತ ಹಿಂದುಳಿದ ಗ್ರಾಮವೆಂದೆಲ್ಲಾ ಹಣೆಪಟ್ಟಿ ಕಟ್ಟಿಕೊಂಡಿರುವ ಆತ್ಕೂರು ಈಗಲೂ ಹಲವಾರು ಸೌಲಭ್ಯಗಳಿಂದ ವಂಚಿತ ಗ್ರಾಮವಾಗಿದೆ. ಶಾಲೆಗಳು ಬಂದ್ ಆಗಿರುವುದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಂಕಷ್ಟಕ್ಕೊಳಗಾಗಿದ್ದರು. ಆನ್ಲೈನ್ ತರಗತಿಗಳು ಕಷ್ಟವಾಗಿದ್ದರಿಂದ ಶೈಕ್ಷಣಿಕ ವರ್ಷ ವ್ಯರ್ಥವಾಗುವ ಆತಂಕದಲ್ಲಿದ್ದರು. ಆದ್ರೆ ರೋಟರಿ ಕ್ಲಬ್ ಸಹಯೋಗದೊಂದಿಗೆ ಪಬ್ಲಿಕ್ ಟಿವಿ ವಿತರಿಸಿರುವ ಟ್ಯಾಬ್ ಗಳು ಅನುಕೂಲವಾಗಲಿವೆ ಅಂತ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಂತೋಷ ವ್ಯಕ್ತಪಡಿಸಿದ್ದಾರೆ.
ಟ್ಯಾಬ್ ನಲ್ಲಿ ಪಾಠಗಳು ಆಫ್ ಲೈನ್ನಲ್ಲಿರುವುದರಿಂದ ಮತ್ತೆ ಮತ್ತೆ ಪಾಠಗಳನ್ನ ನೋಡಬಹುದು, ಕೇಳಬಹುದು, ಓದಬಹುದು ಅಂತ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಖುಷಿ ವ್ಯಕ್ತಪಡಿಸಿದ್ದಾರೆ. ಆತ್ಕೂರು ಪ್ರೌಢಶಾಲೆಯ 56 ವಿದ್ಯಾರ್ಥಿಗಳಿಗೆ 28 ಟ್ಯಾಬ್ ಗಳನ್ನ ದಾನಿಗಳಿಂದ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕ ಚಿದಾನಂದ ಸಾಲಿ, ದಾನಿಗಳಾದ ಕೇಶವರೆಡ್ಡಿ, ಲಕ್ಷ್ಮಿಕಾಂತರೆಡ್ಡಿ, ರೋಟರಿ ಕ್ಲಬ್ ರಾಯಚೂರು ಸೆಂಟ್ರಲ್ ಅಧ್ಯಕ್ಷ ಡಾ.ವಿಜಯ ಮಹಾಂತೇಶ್ , ರೋಟರಿ ಕ್ಲಬ್ ಸದಸ್ಯರಾದ ಮಂಜುನಾಥ್ ವಟಗಲ್, ಪ್ರಮೋದ್, ವೆಂಕಟೇಶ್ ವೈಟ್ಲ, ಶಿವನಗೌಡ ಪಾಟೀಲ್ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
