Connect with us

Bidar

ಬರಡು ಭೂಮಿಯಲ್ಲಿ ಬಂಗಾರದ ಬೆಳೆ-15 ವರ್ಷಗಳಿಂದ ನೀರು ಹೊತ್ತ ರೈತ

Published

on

-ಔರಾದ್‍ನ ವಿಲಾಸ್ ಹೂಗಾರ್ ಚಮತ್ಕಾರ

ಬೀದರ: ಬಿಸಿಲ ನಾಡು ಬೀದರ್ ನ ಔರಾದ್ ತಾಲೂಕಿನ ವಿಲಾಸ್‍ರಾವ್ ಹೂಗಾರ್ ಅವರು ಬರಡು ಭೂಮಿಯಲ್ಲಿ ಬಂಗಾರದ ಬೆಳೆ ತೆಗೆದಿದ್ದಾರೆ. ಇದಕ್ಕಾಗಿ 15 ವರ್ಷಗಳಿಂದ ಹೆಗಲ ಮೇಲೆ ನೀರು ಹೊತ್ತಿದ್ದಾರೆ.

ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಗುಡಪಳ್ಳಿ ಗ್ರಾಮದ ವಿಲಾಸ್‍ರಾವ್ ಹೂಗಾರ್ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಭೀಕರ ಬರಗಾಲದಿಂದ ನಲುಗಿ ಹೋಗಿರುವ ಜಿಲ್ಲೆಯಲ್ಲಿ ರೈತರು ತತ್ತರಿಸಿ ಹೋಗಿದ್ದಾರೆ. ಆದರೆ 15 ವರ್ಷಗಳ ಹಿಂದೆ ವಿಲಾಸ್‍ರಾವ್ ಬರಡು ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ.

ಅಂತರ್ಜಲ ಮಟ್ಟ ಕುಸಿದಿದ್ದಿರೂ, 1 ಕಿ.ಮೀ. ದೂರದ ಮನೆಯಿಂದ ಹೆಗಲಮೇಲೆ ಬಿಂದಿಗೆಯಿಂದ ನೀರು ತಂದು ಬೆಳೆ ಬೆಳೆಯುತ್ತಿದ್ದಾರೆ. 3 ಎಕರೆಯ ಜಮೀನಿನಲ್ಲಿ 3 ಗುಂಟೆ ಜಾಗದಲ್ಲಿ ಮಿಶ್ರಬೆಳೆ ಪದ್ಧತಿಯಡಿ ಟೊಮಾಟೋ, ಮೆಣಸಿನಕಾಯಿ, ಚವಳೆಕಾಯಿ, ಬದನೆ, ಬೆಂಡೆಕಾಯಿ, ಕೊತ್ತಂಬರಿ ಸೇರಿದಂತೆ ತರಹೇವಾರಿ ಸೊಪ್ಪುಗಳನ್ನು ಬೆಳೆಯುತ್ತಿದ್ದಾರೆ.

ಹೆಂಡತಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರೆ, ಮಗ ವಿಕಲಚೇತನನಾಗಿದ್ದು ಜೊತೆಗೆ ಪುಟ್ಟ ಹೆಣ್ಣು ಮಗುವನ್ನು ಸಾಕುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿಯೂ ಮಾನಸಿಕವಾಗಿ ಕುಗ್ಗದೇ ವಿಲಾಸ್ ರಾವ್ ಮುಂದೆ ಸಾಗುತ್ತಿದ್ದಾರೆ.

ಗ್ರಾಮದಲ್ಲಿ ಬೀಳುವ ಸಗಣಿಯನ್ನು ಸಂಗ್ರಹಿಸಿ, ಬೆಳೆಗೆ ಹಾಕಿ ಸಾವಯವ ಕೃಷಿ ಮಾಡುತ್ತಿದ್ದಾರೆ. ವಿಲಾಸ್ ಅವರ ಸಾಹಸಿ ಜೀವನ ನೋಡಿದ ಸ್ಥಳೀಯ ಅಧಿಕಾರಿಗಳು ಈಗ ಬೋರ್‍ವೆಲ್ ಕೊರೆಸಿಕೊಟ್ಟಿದ್ದಾರೆ. ಆದರೆ ವಿದ್ಯುತ್ ಸಂಪರ್ಕ ಸಿಗುತ್ತಿಲ್ಲ. ವಿಲಾಸ್ ಹೂಗಾರ್ ಅವರ ಈ ಕಾರ್ಯ, ಆತ್ಮಹತ್ಯೆಗೆ ಶರಣಾಗುವ ರೈತರು, ಗುಳೆ ಹೋಗುವ ಜನರಿಗೆ ಸ್ಫೂರ್ತಿಯಾಗಲಿ.