Thursday, 22nd August 2019

ಸಸಿ ನೆಟ್ಟು ಗುಡ್ಡಗಳಿಗೆ ಹಸಿರ ಹೊದಿಕೆ ಹಾಕಿದ್ದಾರೆ ಅಂಕೋಲಾದ ಸಸ್ಯವಿಜ್ಞಾನಿ ತುಳಸಿಗೌಡ

ಕಾರವಾರ: ಪರಿಸರ ಪ್ರೇಮಕ್ಕೆ ಸಾಲುಮರದ ತಿಮ್ಮಕ್ಕರ ಹೆಸರಿಗೆ ಪರ್ಯಾಯ ಹೆಸರಿಲ್ಲ. ಆದ್ರೆ, ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ 82 ವರ್ಷದ ವೃದ್ಧೆ ತುಳಸಿಗೌಡ ಅವರು ಸದ್ದಿಲ್ಲದೇ ಪ್ರಕೃತಿ ರಕ್ಷಣೆ ನಿಂತಿದ್ದಾರೆ.

82 ವರ್ಷದ ತುಳಸಿ ಗೌಡ ಅವರು ಕಳೆದ 57 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರಿ ಮಾಡಿಕೊಂಡಿದ್ದಾರೆ. ಲಕ್ಷಾಂತರ ಗಿಡಗಳನ್ನು ನೆಟ್ಟು ಬೋಳು ಬಿದ್ದ ಗುಡ್ಡಗಳಿಗೆ ಹಸಿರ ಹೊದಿಕೆ ಹೊದಿಸಿದ್ದಾರೆ. ಬಾಲ್ಯದಲ್ಲೇ ಅಪ್ಪ, ಮದುವೆಯಾದ ಬಳಿಕ ಗಂಡನ ಕಳೆದುಕೊಂಡ್ರೂ ಕಾಡಿನ ಕಟ್ಟಿಗೆ ಮಾರಿ ಬದುಕು ಕಟ್ಟಿಕೊಂಡ್ರು. ಈ ವೇಳೆ ಅರಣ್ಯ ಇಲಾಖೆಯಿಂದ ಸಸಿ ನೆಡುವ ಕಾರ್ಯಕ್ಕೆ ಸೇರಿಕೊಂಡ್ರು.

ಕಾಡಿನಿಂದ ತಂದ ಬೀಜಗಳನ್ನು ಸಸಿ ಮಾಡಿ ಶಾಲೆ ಆವರಣ, ರಸ್ತೆ, ಗುಡ್ಡ ಬೆಟ್ಟದಲ್ಲಿ ನೆಟ್ಟು ಪೋಷಿಸ ತೊಡಗಿದ್ರು. ಒಂದೇ ವರ್ಷದಲ್ಲಿ 30 ಸಾವಿರ ಸಸಿಗಳನ್ನು ನೆಟ್ಟು ಅರಣ್ಯ ಇಲಾಖೆಯಿಂದ ಹಣ ನೀಡದಿದ್ದರೂ, ಅವುಗಳ ರಕ್ಷಣೆಯನ್ನು ಮಾಡಿದ್ರು. 300ಕ್ಕೂ ಹೆಚ್ಚು ಕಾಡು ಮರಗಳ ಬಗ್ಗೆ ಮಾಹಿತಿ ಇರುವ ಇವರು `ಸಸ್ಯ ವಿಜ್ಞಾನಿ’ ಎಂದೇ ಪ್ರಸಿದ್ಧಿ ಪಡೆದಿದ್ದಾರೆ.

ಇವರ ಶ್ರಮ ಹಾಗೂ ಉತ್ಸಾಹವನ್ನು ಪರಿಗಣಿಸಿ ಅಂದಿನ ಅರಣ್ಯಾಧಿಕಾರಿ ಅ.ನಾ.ಯಲ್ಲಪ್ಪ ರೆಡ್ಡಿಯವರು ಮಾಸ್ತಿಕಟ್ಟೆ ಅರಣ್ಯವಲಯವನ್ನು ಪೋಷಿಸುವ ಕೆಲಸ ಕೊಡಿಸಿದ್ದರು. ಹೀಗೆ ಈಕೆಯ ಜೀವಮಾನದಲ್ಲಿ ಲಕ್ಷಗಟ್ಟಲೇ ಸಸಿಗಳನ್ನು ನೆಟ್ಟು ಪೋಷಿಸಿ ಬೆಳೆಸಿದ್ದಾರೆ. ಇವರ ಸಾಧನೆ ರಾಜ್ಯೋತ್ಸವ, ಕೇಂದ್ರ ಸರ್ಕಾರದ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿವೆ.

Leave a Reply

Your email address will not be published. Required fields are marked *