Saturday, 25th May 2019

Recent News

ಸರಿಯಾಗಿ ಮಾತು ಬರದೇ ಇದ್ರು ಸ್ನೇಹಿತೆಯ ರಕ್ಷಿಸಿದ ಬಾಲಕರು

ಚಿಕ್ಕಬಳ್ಳಾಪುರ: ಸರಿಯಾಗಿ ಮಾತು ಬಾರದ 6 ವರ್ಷದ ಬಾಲಕರಿಬ್ಬರು ಸಂಪ್‍ಗೆ ಬಿದ್ದು ಸಾವಿನಂಚಿನಲ್ಲಿದ್ದ 5 ವರ್ಷದ ಸ್ನೇಹಿತೆಯನ್ನ ರಕ್ಷಿಸಿದ್ದಾರೆ.

ಈ ಇಬ್ಬರು ಪುಟಾಣಿಗಳೇ ನಮ್ಮ ಇವತ್ತಿನ ಪಬ್ಲಿಕ್ ಹೀರೋಗಳು. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅಪ್ಪೇಗೌಡನಹಳ್ಳಿಯ ನಿವಾಸಿಗಳಾದ ಐದು-ಐದೂವರೆ ವರ್ಷದವರಾದ ಸಾತ್ವಿಕ್ ಮತ್ತು ದೀಪಕ್, ಕಳೆದ ಬುಧವಾರ ತಮ್ಮ ಸ್ನೇಹಿತೆ 5 ವರ್ಷದ ಪೂರ್ವಿಕಾ ಜೊತೆ ಆಟ ಆಡೋಕೆ ಅಂತ ಹೊರಟಿದ್ದರು.

ದಾರಿ ಮಧ್ಯೆ ಗಣೇಶಪ್ಪ ಎಂಬವವರಿಗೆ ಸೇರಿದ ನಿರ್ಮಾಣ ಹಂತದ ಮನೆಯ ಸಂಪ್ ಗೆ ಕಲ್ಲು ಹಾಕಲು ಪೂರ್ವಿಕಾ ಮುಂದಾಗಿದ್ದಾಳೆ. ಆ ವೇಳೆ ಆಯಾ ತಪ್ಪಿ, ಕಾಲುಜಾರಿ ಸಂಪ್‍ಗೆ ಬಿದ್ದಿದ್ದಳು. ಭೀತಿಗೊಳಗಾದ ಸಾತ್ವಿಕ್, ದೀಪಕ್ ಇಬ್ಬರೂ ತಡಮಾಡದೇ ಪೂರ್ವಿಕಾಳ ಕಾಲು ಹಿಡಿದು ಮೇಲೆ ಎತ್ತಿದ್ದಾರೆ. ಸಾತ್ವಿಕ್ ಎಂಬ ಬಾಲಕ ಪೂರ್ವಿಕಾಳನ್ನ ಮೇಲೆತ್ತಿದ ಪೋರ.

ನೀರು ಕುಡಿದು ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಪೂರ್ವಿಕಾಳನ್ನು ಕಂಡ ದೀಪಕ್ ಕಿರುಚಿಕೊಂಡಿದ್ದಾನೆ. ಅಲ್ಲೆ ಕುರಿ ಮೇಯಿಸುತ್ತಿದ್ದ ಮಹಿಳೆಯೊಬ್ಬರು ನೋಡಿ ಎಲ್ಲರಿಗೂ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೂರ್ವಿಕಾ ಅಜ್ಜಿ ಉಮಾ ಹಾಗೂ ಸಾತ್ವಿಕ್ ತಾಯಿ ಮಂಜುಳಾ ಅವರಿಗೆ ಪುಟಾಣಿಗಳು ನಡೆದ ನೈಜ ಘಟನೆಯನ್ನು ವಿವರಿಸಿದ್ದಾರೆ. ತಕ್ಷಣ ಪೂರ್ವಿಕಾಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಈಗ ಆರಾಮಾಗಿದ್ದಾಳೆ.

ಸಾತ್ವಿಕ್, ದೀಪಕ್, ಮತ್ತು ಪೂರ್ವಿಕಾ ಮೂವರು ಅಕ್ಕಪಕ್ಕದ ಮನೆಯವರಾಗಿದ್ದು, ಒಂದೇ ಅಂಗನವಾಡಿಯಲ್ಲಿ ವ್ಯಾಸಂಗ ಮಾಡ್ತಿದ್ದಾರೆ. ಸದಾ ಒಟ್ಟಿಗೆ ಆಟ ಆಡ್ತಿದ್ದ ಇವರು ಈಗ ಸ್ನೇಹಿತೆಗೆ ಮರುಜನ್ಮ ನೀಡಿದ್ದಾರೆ. ಬಾಲಕರ ಸಮಯಪ್ರಜ್ಞೆಗೆ ಇಡೀ ಗ್ರಾಮಸ್ಥರು ಶ್ಲಾಘನೀಯ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *