Connect with us

Districts

ಮದ್ವೆ ಇಲ್ಲ, ಮನೆನೂ ಇಲ್ಲ-ಶಾಲೆಯ ಮಕ್ಕಳಿಗಾಗಿಯೇ ಜೀವನ ಮುಡಿಪು

Published

on

ಹಾಸನ: ಮದ್ವೆ ಆಗದೇ, ಮನೆಯನ್ನು ಹೊಂದದೆ ಕಳೆದ 18 ವರ್ಷಗಳಿಂದ ಜಿಲ್ಲೆಯ ವ್ಯಕ್ತಿಯೊಬ್ಬರು ತಮ್ಮ ಸಂಬಳವನ್ನು ಶಾಲೆಗೆ ನೀಡಿ ಅಲ್ಲಿಯ ಮಕ್ಕಳನ್ನು ತಮ್ಮ ಮಕ್ಕಳಂತೆಯೇ ಪೋಷಿಸುತ್ತಿದ್ದಾರೆ.

ಹಾಸನದ ಕಂದಲಿ ಬಳಿಯಿರೋ ಮೋರಾರ್ಜಿ ಶಾಲೆಯ ಪ್ರಾಂಶುಪಾಲ ತಮ್ಮಣ್ಣಗೌಡರಿಗೆ ಮದುವೆಯಾಗಿಲ್ಲ. 54 ವರ್ಷದ ತಮ್ಮಣ್ಣಗೌಡರು ಮನೆಯನ್ನು ಹೊಂದಿಲ್ಲ. ತಮಗೆ ಬರುವ ವೇತನವನ್ನು ಶಾಲೆ ಮತ್ತು ಶಾಲಾ ಮಕ್ಕಳಿಗೆ ಮೀಸಲಿಟ್ಟಿದ್ದು, ಶಾಲೆಯಲ್ಲೇ ವಾಸವಾಗಿದ್ದಾರೆ. ವಸತಿ ಶಾಲೆಯ ಮಕ್ಕಳನ್ನು ತಮ್ಮ ಮಕ್ಕಳಂತೆಯೇ ಪೋಷಿಸಿ ಒಳ್ಳೆಯ ಪ್ರಜೆಗಳನ್ನಾಗಿಸಲು ಶ್ರಮಿಸುತ್ತಿದ್ದಾರೆ. ಈ ಕಾಯಕ ಬರೋಬ್ಬರಿ 18 ವರ್ಷಗಳಿಂದ ನಡೆಯುತ್ತಿರುವುದು ವಿಶೇಷ.

ಈ ಶಾಲೆ ಜಿಲ್ಲೆಯಲ್ಲಿಯೇ ಒಂದು ಮಾದರಿ ಶಾಲೆಯಾಗಿದ್ದು ಸತತ 12 ವರ್ಷಗಳಿಂದ ಎಸ್‍ಎಸ್‍ಎಲ್‍ಸಿಯಲ್ಲಿ ಶೇಕಡಾ 100ರಷ್ಟು ಫಲಿತಾಂಶ ಬಂದಿದೆ. ಇದರಲ್ಲಿ ತಮ್ಮಣ್ಣಗೌಡರ ಪಾತ್ರ ಬಹುದೊಡ್ಡದು. ಶಾಲಾ ಕಲಿಕೆಗೆ ವಿಶೇಷವಾದ ಮಾದರಿಗಳನ್ನು ಅಳವಡಿಸಿದ್ದಾರೆ. ಪ್ರತಿ ವರ್ಷ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಕೊಟ್ಟು ಪ್ರೋತ್ಸಾಹಿಸುತ್ತಾರೆ.

ಚನ್ನರಾಯಪಟ್ಟಣದಲ್ಲಿ ತಮ್ಮ ಸಹೋದರರು, ಸಂಬಂಧಿಕರು ಇದ್ದರೂ ಅಲ್ಲಿಗೇ ಹೋಗೋದು ಕೆಲಸ ಇದ್ದರೆ ಮಾತ್ರ. ಉಳಿದಂತೆ ತಮ್ಮಣ್ಣಗೌಡರಿಗೆ ಶಾಲೆಯೇ ಕುಟುಂಬ.

ಇನ್ನು ಕೆಲವೇ ದಿನಗಳಲ್ಲಿ ತಮ್ಮಣ್ಣಗೌಡರು ಬಿಇಓ ಆಗಿ ಬಡ್ತಿ ಪಡೆಯಲಿದ್ದಾರೆ. ತಮ್ಮಣ್ಣ ಗೌಡರು, 2000ನೇ ಇಸವಿಯಲ್ಲಿ ಈ ಶಾಲೆಗೆ ಬಂದಾಗ ಬೆಂಗಾಡಾಗಿತ್ತು. ಸದ್ಯ ಶಾಲಾ ಆವರಣವೀಗ ಸಸ್ಯಗಳಿಂದ ನಳನಳಿಸುತ್ತಿದೆ. 1,200ಕ್ಕೂ ಹೆಚ್ಚು ಗಿಡಗಳನ್ನು ತಮ್ಮಣ್ಣಗೌಡರು ತಮ್ಮ ಸ್ವಂತ ಖರ್ಚಿನಲ್ಲಿ ಬೆಳೆಸಿದ್ದಾರೆ. ಆ ಗಿಡಗಳು ಇದೀಗ ಫಲವನ್ನು ಕೊಡುತ್ತಿವೆ.