Friday, 22nd November 2019

Recent News

ಸೇತುವೆ ನಿರ್ಮಿಸಿದ್ರು, ದಾಖಲಾತಿ ಹೆಚ್ಚಿಸಿದ್ರು- ಕಾಡಶೆಟ್ಟಿಹಳ್ಳಿ ಗ್ರಾಮಸ್ಥರಿಂದ 50 ವರ್ಷಗಳ ಕನಸು ನನಸು

ತುಮಕೂರು: ಊರಿನ ಜನ ಒಗ್ಗಟ್ಟಾಗಿ ನಿಂತರೆ ಯಾವುದೇ ಅಭಿವೃದ್ಧಿ ಕಾರ್ಯ ಸಾಧ್ಯ ಅನ್ನೋದಕ್ಕೆ ಕುಣಿಗಲ್‌ನ ಕಾಡಶೆಟ್ಟಿಹಳ್ಳಿ ಗ್ರಾಮಸ್ಥರು ಸಾಕ್ಷಿಯಾಗುವ ಮೂಲಕ ಪಬ್ಲಿಕ್ ಹೀರೋ ಆಗಿದ್ದಾರೆ.

ಹೌದು. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಕಾಡಶೆಟ್ಟಿಹಳ್ಳಿ ಗ್ರಾಮಸ್ಥರೆಲ್ಲ ಸೇರಿ ಸದ್ದಿಲ್ಲದೆ ಸಮಾಜ ಸೇವೆ ಮಾಡುತ್ತಿದ್ದಾರೆ. ‘ದೈತ್ಯ ಮಾರಮ್ಮ ಚಾರಿಟಬಲ್ ಟ್ರಸ್ಟ್’ ಎಂಬ ಹೆಸರಿನ ಸಂಘವನ್ನು ಕಟ್ಟಿಕೊಂಡು ಊರಿನ ಅಭಿವೃದ್ದಿ ಮಾಡುತ್ತಿದ್ದಾರೆ. ಸಮಾಜ ಸೇವೆಯ ಮೊದಲ ಹೆಜ್ಜೆಯಾಗಿ ಇವರು ಈ ಊರಿನ ಶಾಲೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ವಿದ್ಯಾರ್ಥಿಗಳ ಕೊರತೆಯಿಂದಾಗಿ ಇಲ್ಲಿಯ ಹಿರಿಯ ಪ್ರಾಥಮಿಕ ಶಾಲೆ ಮುಚ್ಚುವಂತಿತ್ತು. ಇದನ್ನರಿತ ಗ್ರಾಮಸ್ಥರು ಶಾಲೆಯನ್ನು ದತ್ತುಪಡೆದುಕೊಂಡು ಶಾಲೆಯ ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಸವಲತ್ತುಗಳನ್ನು ಶಾಲೆಗೆ ಕೊಟ್ಟಿದ್ದಾರೆ. ಬಹುಮುಖ್ಯವಾಗಿ ಈ ಶಾಲೆಗೆ ಅಕ್ಕಪಕ್ಕದ ಊರಿಂದ ವಿದ್ಯಾರ್ಥಿಗಳು ಬರಲು ಶಿಂಷಾ ನದಿ ಅಡ್ಡಿಯಾಗಿತ್ತು. ನದಿಗೆ ಸೇತುವೆ ಇಲ್ಲದ ಕಾರಣ ಸುಮಾರು 9 ಕಿ.ಮೀ ಸುತ್ತಿ ಬಳಸಿ ಬರಬೇಕಿತ್ತು. ದೂರದ ನೆಪವೊಡ್ಡಿ ಪೋಷಕರು ಈ ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸುತ್ತಿರಲಿಲ್ಲ. ಇದನ್ನರಿತ ಕಾಡಶೆಟ್ಟಹಳ್ಳಿ ಗ್ರಾಮಸ್ಥರು ತಾವೇ ಸ್ವತಃ ಶ್ರಮದಾನ ಮಾಡಿ ತೊರೆಹಳ್ಳಿ-ಕಾಡಶೆಟ್ಟಿಹಳ್ಳಿ ನಡುವೆ ಶಿಂಷಾ ನದಿಗೆ ಸೇತುವೆ ಕಟ್ಟಿದ್ದಾರೆ. ಸುಮಾರು 45 ಅಡಿ ಉದ್ದ, 30 ಅಡಿ ಅಗಲ ಹಾಗೂ 10 ಅಡಿ ಎತ್ತರದ ಸೇತುವೆ ನಿರ್ಮಿಸಿದ್ದಾರೆ. ತಮ್ಮ ತಮ್ಮ ಮನೆಗಳಿಂದ ಟ್ರ್ಯಾಕ್ಟರ್, ಪಿಕ್ಕಾಸಿ, ಗುದ್ದಲಿ ತಂದು ಸುಮಾರು ಒಂದು ವಾರಗಳ ಕಾಲ ಶ್ರಮದಾನ ಮಾಡಿದ್ದಾರೆ. ಲಕ್ಷಾಂತರ ರೂ. ವ್ಯಯಿಸಿ ಸೇತುವೆ ನಿರ್ಮಾಣ ಮಾಡಿದ್ದಾರೆ.

ಸೇತುವೆ ನಿರ್ಮಾಣವಾದ ದೆಸೆಯಿಂದ ಸುಮಾರು 9 ಕಿ.ಮೀ ದೂರದ ಪ್ರಯಾಣ ಈಗ 2 ಕಿ.ಮೀ ದೂರ ಆಗಿದೆ. ಕೇವಲ 6 ವಿದ್ಯಾರ್ಥಿಗಳಿದ್ದ ಶಾಲೆಯಲ್ಲಿ ಈಗ 76 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಸೇತುವೆ ಮಾತ್ರವಲ್ಲ ಸೇತುವೆಗೆ ಹೊಂದಿಕೊಂಡಿರುವಂತೆ ಕಚ್ಚಾರಸ್ತೆಯನ್ನೂ ಮಾಡಿದ್ದಾರೆ. ಎರಡೂ ಕಡೆಗಳಲ್ಲಿ ಸುಮಾರು 2 ಕಿ.ಮೀ ದೂರದವರೆಗೆ ಶ್ರಮದಾನದಿಂದ ರಸ್ತೆ ನಿರ್ಮಿಸಿದ್ದಾರೆ. ಪರಿಣಾಮ ದ್ವಿಚಕ್ರ ವಾಹನಗಳು, ಶಾಲಾ ಬಸ್ಸುಗಳು ಓಡಾಡುತ್ತಿವೆ. ಅಲ್ಲದೆ ದೈತ್ಯ ಮಾರಮ್ಮ ಚಾರಿಟಬಲ್ ಟ್ರಸ್ಟ್ ವತಿಯಿಂದ ಕಾಡಶೆಟ್ಟಿಹಳ್ಳಿ ಶಾಲೆಯ ದುರಸ್ಥಿ ಕೆಲಸವೂ ನಡೆಯುತ್ತಿದೆ. ಹೊಸ ಕಟ್ಟಡಗಳ ನಿರ್ಮಾಣ, ಸುಣ್ಣ-ಬಣ್ಣಗಳನ್ನು ಬಳಿದು ನ್ಯೂ ಲುಕ್ ನೀಡಲಾಗುತ್ತಿದೆ.

ಕೆಲ ಪೋಷಕರು ಇಂಗ್ಲಿಷ್ ಮಾಧ್ಯಮಕ್ಕೆ ಬೇಡಿಕೆ ಇಟ್ಟಿದ್ದರಿಂದ ಸರ್ಕಾರದ ಅನುದಾನದ ಇಲ್ಲದೇ ಇದ್ದರೂ ಟ್ರಸ್ಟ್ ವತಿಯಿಂದ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಸಲಾಗುತ್ತಿದೆ. ಇಂಗ್ಲಿಷ್ ಶಿಕ್ಷಕರು ಸೇರಿದಂತೆ ಮೂರು ಅತಿಥಿ ಶಿಕ್ಷಕರನ್ನು ಟ್ರಸ್ಟ್ ವತಿಯಿಂದ ನೇಮಿಸಿ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದು ಶಾಲೆಯ ಸಹಶಿಕ್ಷಕ ಲಕ್ಷ್ಮಣ ತಿಳಿಸಿದ್ದಾರೆ.

ದೈತ್ಯ ಮಾರಮ್ಮ ಟ್ರಸ್ಟ್ ಅಧ್ಯಕ್ಷ ಶ್ರೀನಿವಾಸರ ನೇತೃತ್ವದಲ್ಲಿ ಈ ಎಲ್ಲಾ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಸುಮಾರು 50 ವರ್ಷಗಳಿಂದ ಶಿಂಷಾ ನದಿಗೆ ಸೇತುವೆ ನಿರ್ಮಾಣ ಮಾಡಿಕೊಡುವಂತೆ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಈಗ ಗ್ರಾಮಸ್ಥರೇ ಒಗ್ಗಟ್ಟಾಗಿ ಸೇತುವೆ ನಿರ್ಮಾಣ ಮಾಡಿ ಮಾದರಿಯಾಗಿದ್ದಾರೆ. ಸೇತುವೆ ನಿರ್ಮಾಣ ಮಾಡಿ ತಮ್ಮೂರ ಶಾಲೆ ಉಳಿಸುವುದರೊಂದಿಗೆ ಊರಿನ ಜನರಿಗೂ ಉಪಕಾರಿಯಾಗಿದ್ದಾರೆ.

Leave a Reply

Your email address will not be published. Required fields are marked *