Bagalkot

ಪಬ್ಲಿಕ್ ಹೀರೋ ಡಾ. ಅಶೋಕ್ ಸೊನ್ನದ್‍ಗೆ ರಾಜ್ಯೋತ್ಸವ ಪ್ರಶಸ್ತಿ

Published

on

Share this

ಬಾಗಲಕೋಟೆ: ಕನ್ನಡ ರಾಜ್ಯೋತ್ಸವದ 65ನೇ ವರ್ಷದ ಸಂಭ್ರಮದಲ್ಲಿ 65 ಮಂದಿ ಸಾಧಕರಿಗೆ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಯನ್ನು ಸರ್ಕಾರ ಘೋಷಣೆ ಮಾಡಿದೆ. ಈ ಬಾರಿಯ ವೈದ್ಯಕೀಯ ಕ್ಷೇತ್ರದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಬ್ಲಿಕ್ ಹೀರೋ ಡಾ. ಅಶೋಕ್ ಸೊನ್ನದ್ ಅವರಿಗೆ ಲಭಿಸಿದೆ. ಸೊನ್ನದ್ ಅವರ ಸಮಾಜ ಸೇವೆಯನ್ನ ಗುರುತಿಸಿದ್ದ ಪಬ್ಲಿಕ್ ಟಿವಿ 2014ರಲ್ಲಿಯೇ ಅಶೋಕ್ ಸೊನ್ನದ್ ಅವರನ್ನ ಪಬ್ಲಿಕ್ ಹೀರೋ ವೇದಿಯಲ್ಲಿ ಹೊರ ಜಗತ್ತಿಗೆ ಪರಿಚಯಿಸಿತ್ತು.

ಡಾ ಅಶೋಕ್ ಸೊನ್ನದ್ ಮೂಲತಃ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಬಂಟನೂರು ಗ್ರಾಮದವರು. ತಮ್ಮ 75ನೇ ಇಳಿ ವಯ್ಯಸ್ಸಿನಲ್ಲೂ ಬಾಗಲಕೋಟೆ ನಗರದಲ್ಲೊಂದು ತಾಯಿ ಪಾರ್ವತಿಬಾಯಿ ಅವರ ಹೆಸರಲ್ಲಿ ಆಸ್ಪತ್ರೆ ತೆರೆದು ಉಚಿತ ಚಿಕಿತ್ಸೆ ನೀಡುತ್ತಾ ಬಡ ಜನರಿಗೆ ಸಂಜೀವಿನಿಯಾಗಿದ್ದಾರೆ. ಅಮೆರಿಕಾದಲ್ಲಿ ಕೆಲಸ ಮಾಡಿ ದೇಶಕ್ಕಾಗಿ ಸೇವೆ ಸಲ್ಲಿಸುವ ಉದ್ದೇಶದಿಂದ ತವರಿಗೆ ಹಿಂದುರಗಿ ಚಿಕಿತ್ಸೆ ನೀಡುತ್ತಿದ್ದಾರೆ.

ಸಕ್ಕರೆ ರೋಗ, ಊಂಡ್ ಮ್ಯಾನೇಜ್ಮೆಂಟ್ ಹೀಗೆ ಕ್ಲಿಷ್ಟ ರೋಗಗಳಿಗೆ ಸರಳ ಚಿಕಿತ್ಸೆ ನೀಡಿ ರೋಗಿಗಳ ಪ್ರೀತಿಗೆ ಪಾತ್ರವಾಗಿದ್ದಾರೆ. ದಿನಕ್ಕೆ ಹತ್ತು ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ. ಪ್ರತಿ ರೋಗಿಯ ಬಳಿ ಆತ್ಮೀಯವಾಗಿ ಮಾತನಾಡುತ್ತಾ, ಎಲ್ಲ ಸಮಸ್ಯೆಗಳನ್ನು ನಿಧಾನವಾಗಿ ಆಲಿಸಿ ಗುಣಮಟ್ಟದ ಚಿಕಿತ್ಸೆಯನ್ನ ಅಶೋಕ್ ಸೊನ್ನದ್ ನೀಡುತ್ತಾರೆ. ಯಾರೇ ಇವರ ಬಳಿ ಚಿಕಿತ್ಸೆಗೆ ಬಂದರೀ ಸರದಿ ಸಾಲಿನಲ್ಲಿಯೇ ಬರಬೇಕು. ಬಡವ ಶ್ರೀಮಂತ ಎಂಬ ಭೇದ-ಭಾವವಿಲ್ಲದೇ ಸರಳ ಚಿಕಿತ್ಸೆ ನೀಡುತ್ತಾ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ನಾನು ಎಲ್ಲ ವೈದ್ಯರಂತೆ ಹಣ ಮಾಡುವ ಉದ್ದೇಶದಿಂದ ಆಸ್ಪತ್ರೆಯನ್ನು ತೆರೆದಿಲ್ಲ. ಅಮೆರಿಕದಲ್ಲಿ ಅಧ್ಯಯನ ಮಾಡಿ ಗುಣಮಟ್ಟವನ್ನು ಕಾಪಾಡದಿದ್ದರೆ ಹೇಗೆ? ಅದಕ್ಕಾಗಿ ಪ್ರತಿ ರೋಗಿಯನ್ನು ಕೂಲಂಕುಶವಾಗಿ ತಪಾಸಣೆ ಮಾಡುತ್ತೇನೆ. ಕೆಲವೊಮ್ಮೆ ರೋಗಿಯ ಕುಟುಂಬದ ಹಿನ್ನೆಲೆ ಕೇಳಿ ತಪಾಸಣೆ ಮಾಡುವಾಗ ಒಂದು ಗಂಟೆ ಆಗುತ್ತದೆ. ಹೀಗಾಗಿ ಸರದಿಯಲ್ಲಿ ನಿಂತ ಮೊದಲ ಹತ್ತು ಮಂದಿಗೆ ಮಾತ್ರ ಚಿಕಿತ್ಸೆ ನೀಡುತ್ತೇನೆ ಎಂದು ಸೊನ್ನದ್ ಹೇಳುತ್ತಾರೆ.

ನಾನು ಹುಟ್ಟಿ ಬೆಳೆದ ದೇಶ ಭಾರತ. ನಾನು ಇಲ್ಲಿಯೇ ಶಿಕ್ಷಣ ಪಡೆದು ವೈದ್ಯಕೀಯ ಪದವಿ ಪಡೆದು ಅಮೆರಿಕದಲ್ಲಿ ಹೆಚ್ಚಿನ ಅಧ್ಯಯನ ಮಾಡಿದ್ದೇನೆ. ನಾನು ಕಲಿತ ವಿದ್ಯೆಯಿಂದ ದೇಶ ಜನರಿಗೆ ನೀಡಬೇಡವೇ? ಅದಕ್ಕಾಗಿ ಬಡ ಜನರಿಗಾಗಿ ಆಸ್ಪತ್ರೆಯನ್ನು ತೆರೆದಿದ್ದೇನೆ ಎಂಬುವುದು ಅಶೋಕ್ ಅವರ ಮಾತು.

ಗಿನ್ನೀಸ್ ದಾಖಲೆ ಕುಟುಂಬ: ಡಾ. ಅಶೋಕ್ ಅವರ ಮನೆಯಲ್ಲಿ ಏಳು ಮಂದಿ ಪಿಹೆಚ್‍ಡಿ ಪಡೆದು ಗಿನ್ನಿಸ್ ದಾಖಲೆ ಮಾಡಿದ್ದಾರೆ ಬಹುತೇಕರು ಅಮೆರಿಕದಲ್ಲೇ ನೆಲೆಸಿದ್ದರೆ, ಇವರು ಮಾತ್ರ ತವರಿಗೆ ಬಂದು ಜನರ ಸೇವೆ ಮಾಡುತ್ತಿದ್ದಾರೆ. ಇದನ್ನೂ ಓದಿ: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ 65 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

Click to comment

Leave a Reply

Your email address will not be published. Required fields are marked *

Advertisement
Advertisement